ಹೊಸದಿಲ್ಲಿ : ಜಸ್ಟಿಸ್ ಕೆ ಎಂ ಜೋಸೆಫ್ ಅವರಿಗೆ ಸುಪ್ರೀಂ ಕೋರ್ಟಿಗೆ ಭಡ್ತಿ ನೀಡುವ ಶಿಫಾರಸನ್ನು ಪುನರ್ ಪರಿಶೀಲಿಸುವಂತೆ ಕೇಂದ್ರ ಸರಕಾರ ಸುಪ್ರೀಂ ಕೋರ್ಟ್ ಕೊಲಿಜಿಯಂ (ವರಿಷ್ಠರ ಮಂಡಳಿ)ಯನ್ನು ಕೇಳಿಕೊಂಡಿದೆ.
ಹಿರಿಯ ವಕೀಲೆ ಇಂದು ಮಲ್ಹೋತ್ರ ಅವರನ್ನು ಸುಪ್ರೀಂ ಕೋರ್ಟ್ ನ್ಯಾಯಾಧೀಶೆಯಾಗಿ ಕೇಂದ್ರ ಸರಕಾರ ನೇರವಾಗಿ ನೇಮಿಸಿದ ಮತ್ತು ಉತ್ತರಾಖಂಡ ಹೈಕೋರ್ಟ್ ಮುಖ್ಯ ನ್ಯಾಯಾಧೀಶರಾಗಿರುವ ಜಸ್ಟಿಸ್ ಜೋಸೆಫ್ ಅವರ ಭಡ್ತಿಯನ್ನು ತಡೆಹಿಡಿಯುವ ನಿರ್ಧಾರ ಕೈಗೊಂಡ ಒಂದು ದಿನದ ತರುವಾಯದ ವಿದ್ಯಮಾನ ಇದಾಗಿದೆ.
ಜಸ್ಟಿಸ್ ಜೋಸೆಫ್ ಅವರ ಭಡ್ತಿಗೆ ಅನುಮೋದನೆ ನೀಡದಿರುವ ಕೇಂದ್ರ ಸರಕಾರದ ನಿರ್ಧಾರವು ವ್ಯಾಪಕ ಟೀಕೆಗೆ ಗುರಿಯಾಗಿದ್ದು ಸುಪ್ರೀಂ ಕೋರ್ಟಿನ ಬಾರ್ ಅಸೋಸಿಯೇಶನ್ ಅಧ್ಯಕ್ಷರು, “ಇದು ಕೇಂದ್ರ ಸರಕಾರವು ನ್ಯಾಯಾಂಗದ ಕಾರ್ಯವಿಧಾನದಲ್ಲಿ ನಡೆಸಿರುವ ಹಸ್ತಕ್ಷೇಪ’ ಎಂದು ಹೇಳಿದ್ದಾರೆ.
ಕಳೆದ ಗುರುವಾರ ಕಾಂಗ್ರೆಸ್ ಕೂಡ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಪ್ರತೀಕಾರದ ರಾಜಕಾರಣದಲ್ಲಿ ತೊಡಗಿಕೊಂಡಿರುವ ಆರೋಪ ಮಾಡಿದೆ. ಚೀಫ್ ಜಸ್ಟಿಸ್ ಕೆ ಎಂ ಜೋಸೆಫ್ ಅವರಿಗೆ ಭಡ್ತಿ ನಿರಾಕರಿಸಿರುವ ಕೇಂದ್ರದ ಕ್ರಮವು “ನಿರಾಕರಣೆಯ ರಾಜಕಾಕರಣ’ ಎಂದು ಅದು ಟೀಕಿಸಿದೆ.
ಕಾಂಗ್ರೆಸ್‌ನ ಸಂಪರ್ಕ ಪ್ರಭಾರಿಯಾಗಿರುವ ರಣದೀಪ್ ಸುರ್ಜೆವಾಲಾ ಅವರು, “ಕೇಂದ್ರ ಸರಕಾರದಿಂದ ನ್ಯಾಯಾಂಗದ ವಿರುದ್ಧ ನಡೆದಿರುವ ಅತ್ಯಂತ ವಿಷಮಕಾರಿ ದಾಳಿ ಇದಾಗಿದ್ದು ಪ್ರಜಾಸತ್ತೆ ವಿರುದ್ಧದ ಸರ್ವಾಧಿಕಾರೀ ಪ್ರಹಾರ ಇದಾಗಿದೆ; ರಾಷ್ಟ್ರವು ಇದರ ವಿರುದ್ಧ ಎದ್ದು ನಿಲ್ಲಬೇಕಿದೆ’ ಎಂದು ಹೇಳಿದ್ದರು.