Advertisement

ಕೋವಿಡ್ ಸೋಂಕು ಪರೀಕ್ಷೆ ಕಡಿಮೆಯಾಗಿದೆ; 13 ರಾಜ್ಯಗಳಿಗೆ ಕೇಂದ್ರದ ಮುನ್ನೆಚ್ಚರಿಕೆ

07:53 PM Nov 24, 2021 | Team Udayavani |

ಮುಂಬೈ/ನವದೆಹಲಿ: ಹಲವು ದೇಶಗಳಲ್ಲಿ ಕೋವಿಡ್ ಮತ್ತೆ ಹೆಚ್ಚುತ್ತಿರುವುದನ್ನು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ.

Advertisement

ಹೀಗಾಗಿ, ಮಹಾರಾಷ್ಟ್ರ, ಕೇರಳ ಸೇರಿದಂತೆ 13 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕಾರ್ಯದರ್ಶಿ ರಾಜೇಶ್‌ ಭೂಷಣ್‌ ಪತ್ರ ಬರೆದಿದ್ದಾರೆ.

ಕಡಿಮೆ ಪ್ರಮಾಣದಲ್ಲಿ ಸೋಂಕು ಪತ್ತೆ ಪರೀಕ್ಷೆ ನಡೆಸುತ್ತಿರುವುದು ಕಳವಳಕಾರಿ. ಕೆಲವೊಂದು ದೇಶಗಳಲ್ಲಿ ಸೋಂಕು ಸಂಖ್ಯೆ ಹೆಚ್ಚುತ್ತಿದೆ.

ಹೀಗಾಗಿ, ದೇಶದಲ್ಲಿಯೂ ಸೋಂಕು ಪತ್ತೆ ಪರೀಕ್ಷೆಯನ್ನು ಗಂಭೀರವಾಗಿ ಪರಿಗಣಿಸಿ, ಹೆಚ್ಚಿನ ಸಂಖ್ಯೆಯಲ್ಲಿ ಪರೀಕ್ಷೆಗಳನ್ನು ನಡೆಸಬೇಕು ಎಂದು ಒತ್ತಾಯಿಸಿದ್ದಾರೆ.

“ಸೋಂಕು ಪತ್ತೆ ಪರೀಕ್ಷೆ ಪ್ರಮಾಣ ಕಡಿಮೆ ಮಾಡುವುದರಿಂದ ಅದು ಹರಡಲು ಕಾರಣವಾಗುತ್ತದೆ’ ಎಂದೂ ಹೇಳಿದ್ದಾರೆ.

Advertisement

ನಾಗಾಲ್ಯಾಂಡ್‌, ಸಿಕ್ಕಿಂ, ಮಹಾರಾಷ್ಟ್ರ, ಕೇರಳ, ಗೋವಾ, ಮಣಿಪುರ, ಮೇಘಾಲಯ, ಮಿಜೋರಾಮ್‌, ಜಮ್ಮು ಮತ್ತು ಕಾಶ್ಮೀರ, ಪಂಜಾಬ್‌, ರಾಜಸ್ಥಾನ, ಪಶ್ಚಿಮ ಬಂಗಾಳ ಮತ್ತು ಲಡಾಖ್‌ಗೆ ಪತ್ರ ಬರೆಯಲಾಗಿದೆ.

ಮುಂದಿನ ತಿಂಗಳು 3ನೇ ಅಲೆ?
ಮಹಾರಾಷ್ಟ್ರಕ್ಕೆ ಮುಂದಿನ ತಿಂಗಳು ಮೂರನೇ ಅಲೆ ಅಪ್ಪಳಿಸುವ ಸಾಧ್ಯತೆ ಇದೆ. ಆದರೆ, ಅದರ ಪ್ರಭಾವ ಕಡಿಮೆ ಇರುವ ಅಂದಾಜು ಇದೆ ಎಂದು ಆರೋಗ್ಯ ಸಚಿವ ರಾಜೇಶ್‌ ಟೋಪೆ ಹೇಳಿದ್ದಾರೆ. ಸುದ್ದಿ ವಾಹಿನಿಯೊಂದರ ಜತೆಗೆ ಮಾತನಾಡಿದ ಅವರು, ಒಂದು ವೇಳೆ 3ನೇ ಅಲೆ ಅಪ್ಪಳಿಸಿದರೂ, ಐಸಿಯು ಬೆಡ್‌ಗಳ ಅಗತ್ಯ ಇರುವುದಿಲ್ಲ. ಮಹಾರಾಷ್ಟ್ರದಲ್ಲಿ ಶೇ.80ರಷ್ಟು ಮಂದಿಗೆ ಲಸಿಕೆ ನೀಡಲಾಗಿದೆ ಎಂದು ಹೇಳಿದ್ದಾರೆ.

537 ದಿನಗಳ ಕನಿಷ್ಠ:
ದೇಶದಲ್ಲಿ ಮಂಗಳವಾರದಿಂದ ಬುಧವಾರದ ಅವಧಿಯಲ್ಲಿ 9,283 ಹೊಸ ಪ್ರಕರಣಗಳು ದೃಢಪಟ್ಟಿವೆ ಮತ್ತು 437 ಮಂದಿ ಅಸುನೀಗಿದ್ದಾರೆ. ಸಕ್ರಿಯ ಸೋಂಕು ಸಂಖ್ಯೆ 537 ದಿನಗಳಿಗೆ ಹೋಲಿಕೆ ಮಾಡಿದರೆ ಕನಿಷ್ಠಕ್ಕೆ ಅಂದರೆ 1,11,481 ಪ್ರಕರಣಗಳು ದಾಖಲಾಗಿವೆ. 2020ರ ಮಾರ್ಚ್‌ ಬಳಿಕ ಇದು ಕಡಿಮೆಯದ್ದಾಗಿದೆ. ಚೇತರಿಕೆ ಪ್ರಮಾಣ ಶೇ.98.33 ಆಗಿದೆ ಮತ್ತು ಸಕ್ರಿಯ ಸೋಂಕಿನ ಪ್ರಮಾಣ ಶೇ.0.32 ಆಗಿದೆ.

ವರ್ಷಾಂತ್ಯಕ್ಕೆ ಶುರು?
ವರ್ಷಾಂತ್ಯಕ್ಕೆ ಅಂತಾರಾಷ್ಟ್ರೀಯ ವಿಮಾನಯಾನ ಸಾಮಾನ್ಯ ಸ್ಥಿತಿಗೆ ಬರಲಿದೆ ಎಂದು ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯದ ಕಾರ್ಯದರ್ಶಿ ರಾಜೀವ್‌ ಬನ್ಸಲ್‌ ಹೇಳಿದ್ದಾರೆ. ಸೋಂಕಿನ ಕಾರಣದಿಂದಾಗಿ 2020ರ ಮಾರ್ಚ್‌ನಿಂದ ಪೂರ್ಣ ಪ್ರಮಾಣ ವಿಮಾನಯಾನ ಇಲ್ಲ. ಸದ್ಯ 25ಕ್ಕೂ ಹೆಚ್ಚು ದೇಶಗಳ ಜತೆಗೆ ವಿಶೇಷ ಒಪ್ಪಂದದ ಅನ್ವಯ ವಿಮಾನಯಾನ ನಡೆಸಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next