ನವದೆಹಲಿ: ಎನ್ ಡಿಎ ರಾಷ್ಟ್ರಪತಿ ಅಭ್ಯರ್ಥಿಯಾಗಿ ಆಯ್ಕೆಯಾಗಿರುವ ಒಡಿಶಾದ ಬುಡಕಟ್ಟು ನಾಯಕಿ ದ್ರೌಪದಿ ಮುರ್ಮು ಅವರಿಗೆ ಕೇಂದ್ರ ಸರ್ಕಾರ ಬುಧವಾರ (ಜೂನ್ 22) ಸಿಆರ್ ಪಿಎಫ್ ಕಮಾಂಡೋಗಳನ್ನು ಒಳಗೊಂಡಿರುವ ಝಡ್ ಪ್ಲಸ್ ಭದ್ರತೆಯನ್ನು ಒದಗಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ:ಬೆಂಗಳೂರು: ಪತ್ನಿ ಹತ್ಯೆಗೈದು ಪೊಲೀಸ್ ಕಂಟ್ರೋಲ್ ರೂಮ್ ಗೆ ಮಾಹಿತಿ ಕೊಟ್ಟ ಪತಿ!
ಝಡ್ ಪ್ಲಸ್ ಕೇಂದ್ರ ಸರ್ಕಾರ ಒದಗಿಸುವ ಎರಡನೇ ಉನ್ನತ ಮಟ್ಟದ ಭದ್ರತೆಯಾಗಿದೆ. ಮಂಗಳವಾರ ವಿರೋಧ ಪಕ್ಷಗಳು ಜಂಟಿಯಾಗಿ ಕೇಂದ್ರ ಮಾಜಿ ಸಚಿವ ಯಶವಂತ್ ಸಿನ್ಹಾ ಅವರನ್ನು ರಾಷ್ಟ್ರಪತಿ ಅಭ್ಯರ್ಥಿಯಾಗಿ ಘೋಷಿಸಿದ ಬೆನ್ನಲ್ಲೇ ಬಿಜೆಪಿ ನೇತೃತ್ವದ ಎನ್ ಡಿಎ ಕೂಡಾ ರಾತ್ರಿ ದ್ರೌಪದಿ ಮುರ್ಮುವನ್ನು ರಾಷ್ಟ್ರಪತಿ ಅಭ್ಯರ್ಥಿ ಎಂದು ಘೋಷಿಸಿತ್ತು.
ಸಂತಾಲ್ ಬುಡಕಟ್ಟು ಸಮುದಾಯದಲ್ಲಿ ಜನಿಸಿದ್ದ ದ್ರೌಪದಿ ಮುರ್ಮು ಅವರು 1997ರಲ್ಲಿ ರಾಯ್ ರಂಗಪುರ್ ನಗರದ ಪಂಚಾಯತ್ ಕೌನ್ಸಿಲರ್ ಆಗಿ ಆಯ್ಕೆಯಾಗುವ ಮೂಲಕ ರಾಜಕೀಯ ಜೀವನ ಆರಂಭಿಸಿದ್ದರು. ನಂತರ 2000ನೇ ಇಸವಿಯಲ್ಲಿ ಒಡಿಶಾ ಸರ್ಕಾರದಲ್ಲಿ ಸಚಿವೆಯಾಗಿ ಕಾರ್ಯನಿರ್ವಹಿಸಿದ್ದು, 2015ರಲ್ಲಿ ಜಾರ್ಖಂಡ್ ರಾಜ್ಯಪಾಲರಾಗಿದ್ದರು.
ದ್ರೌಪದಿ ಮುರ್ಮು ಅವರು ಎರಡು ಬಾರಿ ಶಾಸಕರಾಗಿದ್ದರು. ರಾಷ್ಟ್ರಪತಿ ಚುನಾವಣೆಗಾಗಿ ಜೂನ್ 29ರಂದು ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದೆ. ಜುಲೈ 18ರಂದು ಮತದಾನ ನಡೆಯಲಿದೆ.