ಕಲಬುರಗಿ: ರಾಜ್ಯದ ಏಕೈಕ ಇಲ್ಲಿನ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಆರನೇ ಘಟಿಕೋತ್ಸವ ಮಾ. 23ರಂದು ಬೆಳಗ್ಗೆ 9ಗಂಟೆಗೆ ಹಮ್ಮಿಕೊಳ್ಳಲಾಗಿದೆ. 2020 ಹಾಗೂ 2021ನೇ ಸಾಲಿನಲ್ಲಿ ಪದವಿ ಪೂರೈಸಿದ 1415 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಗುವುದು. ಪ್ರಮುಖವಾಗಿ 37 ಸಂಶೋಧಕ ರಿಗೆ ಪಿಎಚ್.ಡಿ. ಇಬ್ಬರಿಗೆ ಎಂ.ಫಿಎಲ್ ಪದವಿ ಪ್ರದಾನ ಮಾಡಲಾಗುವುದು. ರಾಜಸ್ಥಾನ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಾಪತಿ ಪ್ರೊ| ಕೆ. ಕಸ್ತೂರಿ ರಂಗನ್ ದಿಕ್ಸೂಚಿ ಭಾಷಣ ಮಾಡಲಿದ್ದಾರೆ ಎಂದು ಕೇಂದ್ರೀಯ ವಿ.ವಿ. ಕುಲಪತಿ ಪ್ರೊ| ಬಟ್ಟು ಸತ್ಯನಾರಾಯಣ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ವಿವಿಯ ಪ್ರತಿ ವಿಭಾಗದಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಪದವಿ ಹಾಗೂ ಸ್ನಾತಕೋತ್ತರ ವಿಭಾಗದ 69 ವಿದ್ಯಾರ್ಥಿಗಳಿಗೆ ಚಿನ್ನದ ಪದಕ ಪ್ರದಾನ ಮಾಡಲಾಗುವುದು. 2020ನೇ ಸಾಲಿನಲ್ಲಿ ಕಂಪ್ಯೂಟರ್ ಸೈನ್ಸ್ ಆ್ಯಂಡ್ ಸೈನ್ಸ್ ವಿಭಾಗದಲ್ಲಿ (ಎಂ.ಟೆಕ್) ಅತಿ ಹೆಚ್ಚು ಅಂಕ ಗಳಿಸಿದ ಸೌರವ್ ಸೋಳಂಕಿ ಅವರಿಗೆ ಪ್ರೊ| ಎ.ಎಂ. ಪಠಾಣ ಚಿನ್ನದ ಪದಕ ಹಾಗೂ 2021ನೇ ಸಾಲಿನಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಇನ್‌ಫರ್ಮೇಶನ್ ಆ್ಯಂಡ್ ಕಮ್ಯುನಿಕೇಶನ್ (ಎಂ.ಟೆಕ್) ವಿಭಾಗದ ವಿದ್ಯಾರ್ಥಿ ಭಾರ್ಗವ್ ಸಾಯಿ ಬಾರಾಲಾ ಅವರಿಗೆ ಪ್ರೊ| ಪಠಾಣ ಚಿನ್ನದ ಪದಕ ನೀಡಲಾಗುವುದು ಎಂದು ವಿವರಿಸಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ವಿಶ್ವವಿದ್ಯಾಲಯದ ಕುಲ ಸಚಿವ ಪ್ರೊ| ಬಸವರಾಜ ಪಿ. ಡೋಣೂರ ಮಾತನಾಡಿ, ಒಟ್ಟು 69 ವಿದ್ಯಾರ್ಥಿಗಳು 71 ಚಿನ್ನದ ಪದಕಗಳನ್ನು ವಿವಿಧ ವಿಷಯಗಳಲ್ಲಿ ಪಡೆಯಲಿದ್ದಾರೆ. ವಿಶ್ವವಿದ್ಯಾಲಯವು ಸಂಶೋಧನೆ ಮತ್ತು ವಿವಿಧ ವಿಭಾಗಗಳಿಗೆ ಗುಣಮಟ್ಟದ ಶಿಕ್ಷಣಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡಲಿದೆ. ಮತ್ತು ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಕೌಶಲ್ಯಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದ್ದು, ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಎಲ್ಲ ವಿಭಾಗಗಳಲ್ಲಿ ಅಭಿವೃದ್ಧಿ ಮಾಡಲಾಗುತ್ತಿದೆ ಎಂದರು.
ಹೊಸ ಶಿಕ್ಷಣ ನೀತಿ ಅನುಷ್ಠಾನದಲ್ಲಿ ತೊಂದರೆಗಳನ್ನು ಹೇಗೆ ನಿವಾರಣೆ ಮಾಡಬಹುದು ಎಂಬುದರ ಬಗ್ಗೆ ಹೇಳಲಾಗುತ್ತಿದೆ. ಜೊತೆಗೆ ಈ ಭಾಗದ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪರೀಕ್ಷೆ ಬರೆದು, ಪ್ರವೇಶಾತಿ ಪಡೆಯಬೇಕು. ಈ ನಿಟ್ಟಿನಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.
ವಿಶ್ವವಿದ್ಯಾಲಯದ ಪರೀಕ್ಷಾ ನಿಯಂತ್ರಣಾಧಿಕಾರಿ ಪ್ರೊ| ಬಸವರಾಜ ಆರ್. ಕೆರೂರು, ಸಾರ್ವಜನಿಕ ಸಂಪರ್ಕಾಧಿಕಾರಿ ದೀಪ್ತಿ ಪಾಲ್ಗೊಂಡಿದ್ದರು.
ಗೌರವ ಡಾಕ್ಟರೇಟ್ ಇಲ್ಲ ಕೊರೊನಾ ಹಾವಳಿ ಹಿನ್ನೆಲೆಯಲ್ಲಿ ಎರಡು ವರ್ಷಗಳಿಂದ ಗೌರವ ಡಾಕ್ಟರೇಟ್‌ಗೆ ಸಾಧಕರನ್ನು ಗುರುತಿಸುವ ಕಾರ್ಯವಾಗಿಲ್ಲ. ಹೀಗಾಗಿ, ಈ ಬಾರಿ ಯಾರಿಗೂ ಡಾಕ್ಟರೇಟ್ ನೀಡುತ್ತಿಲ್ಲ. ಕಳೆದ ಬಾರಿ ನಡೆದ ಘಟಿಕೋತ್ಸವದಲ್ಲಿ ಇಸ್ರೋ ಅಧ್ಯಕ್ಷರಾಗಿದ್ದ ಪ್ರೊ| ಶಿವನ್ ಸೇರಿದಂತೆ ಕೆಲವು ಗಣ್ಯರಿಗೆ ಡಾಕ್ಟರೇಟ್ ಘೋಷಿಸಲಾಗಿತ್ತು. ಆದರೆ, ಅವರು ಕಲಬುರಗಿಗೆ ಬರಲೇ ಇಲ್ಲ. ವಿಶ್ವವಿದ್ಯಾಲಯದವರೇ ಅವರ ಬಳಿ ತೆರಳಿ ಡಾಕ್ಟರೇಟ್ ನೀಡಬೇಕಾಯಿತು. ಇದು ಸರಿಯಾದುದ್ದಲ್ಲ. ಡಾಕ್ಟರೇಟ್ ಪಡೆಯುವವರು ಇಲ್ಲಿಗೆ ಬರಬೇಕು. ಜತೆಗೆ ಮಾರ್ಗದರ್ಶನ ನೀಡಬೇಕು ಎಂದು ಕೇಂದ್ರೀಯ ವಿ.ವಿ. ಕುಲಪತಿ ಪ್ರೊ| ಬಟ್ಟು ಸತ್ಯನಾರಾಯಣ ತಿಳಿಸಿದ್ದಾರೆ.