ವಿಜಯಪುರ: ಜಿಲ್ಲೆಯಲ್ಲಿ ಭೀಕರ ಪರಿಸ್ಥಿತಿ ಇದ್ದು, ತಿಕೋಟಾ ತಾಲೂಕನ್ನು ಬರ ಪೀಡಿತ ತಾಲೂಕಿನ ಪಟ್ಟಿಯಿಂದ ಕೈಬಿಡಲಾಗಿದೆ. ಕೇಂದ್ರ ಬರ ಅಧ್ಯಯನ ತಂಡ ತಿಕೋಟಾ ಭಾಗದಲ್ಲಿನ ಬರ ಪರಿಸ್ಥಿತಿ ಅರಿಯಲು ಭೇಟಿ ನೀಡಬೇಕು ಎಂದು ಬಿಜೆಪಿ ಮುಖಂಡ ವಿಜುಗೌಡ ಪಾಟೀಲ ಆಗ್ರಹಿಸಿದರು.
ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ನನಗೆ ಹೆಚ್ಚು ಮತಗಳು ಬಂದಿವೆ ಎಂಬ ಕಾರಣಕ್ಕೆ ರಾಜಕೀಯ ದುರುದ್ದೇಶದಿಂದ ತಿಕೋಟಾ ತಾಲೂಕನ್ನು ಕೈ ಬಿಡಲಾಗಿದೆ ಎಂದು ದೂರಿದರು.
ಕೃಷಿ ಇಲಾಖೆ ಜಂಟಿ ನಿರ್ದೇಶಕರಲ್ಲಿ ಇರುವ ಜಿಲ್ಲೆಯ ಮಳೆಯ ಸ್ಥಿತಿಗತಿ ಆಧರಿಸಿ ಕೇಂದ್ರ ಬರ ಅಧ್ಯಯನ ತಂಡ ತಿಕೋಟಾ ತಾಲೂಕಿಗೆ ಭೇಟಿ ನೀಡಬೇಕು. ಕೂಡಲೇ ಈ ತಾಲೂಕನ್ನೂ ಬರ ಪೀಡಿತ ಎಂದು ಘೋಷಿಸಬೇಕು ಎಂದು ಆಗ್ರಹಿಸಿದರು.
ಕೇಂದ್ರ ಬರ ಅಧ್ಯಯನ ತಂಡವನ್ನು ಕೆರೆಗೆ ನೀರು ತುಂಬಿರುವ ಯಕ್ಕುಂಡಿ, ಬಬಲೇಶ್ವರ ಪ್ರದೇಶಕ್ಕೆ ಕರೆದೊಯ್ಯಲಾಗುತ್ತಿದೆ. ಆದರೆ ಬಂಜರು ಭೂಮಿ ಹೆಚ್ಚಿರುವ ತಿಕೋಟಾ ಭಾಗಕ್ಕೆ ಕೇಂದ್ರದ ಬರ ಅಧ್ಯಯನ ತಂಡ ಭೇಟಿ ನೀಡಬೇಕು ಎಂದರು.
ಆದಿಲ್ ಶಾಹಿ ಕಾಲದಿಂದಲೂ ಮಳೆಯ ಕೊರತೆ, ಭೀಕರ ಬರ ಇದ್ದೇ ಇದೆ. ಕಾಂಗ್ರೆಸ್ ಸರ್ಕಾರದಲ್ಲಿ ಬಬಲೇಶ್ವರ ತಾಲೂಕನ್ನು ಬರ ಪೀಡಿತ ಎಂದು ಘೋಷಿಸಿದರೂ, ಮಳೆಯ ಅತಿ ಕೊರತೆಯ ಪ್ರದೇಶವಾದ ತಿಕೋಟಾ ತಾಲೂಕಿನ್ನು ಕಡೆಗಣಿಸಲಾಗಿದೆ ಎಂದು ದೂರಿದರು.
ಇದನ್ನೂ ಓದಿ:Watch: ಇನ್ಮುಂದೆ ಮೊಬೈಲ್ ಹಿಂದೆ ನೋಟುಗಳನ್ನು ಇಡುವ ಮುನ್ನ ಎಚ್ಚರ.. ಯಾಕೆಂದರೆ
ರಾಜ್ಯ ಭೀಕರ ಬರ ಪರಿಸ್ಥಿತಿ ಎದುರಿಸುತ್ತಿದ್ದು, ಜಿಲ್ಲಾ ಉಸ್ತುವಾರಿ ಸಚಿವರು ಜನರ ಸಮಸ್ಯೆ ಆಲಿಸಲು ಜಿಲ್ಲೆಯಲ್ಲಿ ಇರಬೇಕಾಗಿತ್ತು. ಈ ದುಸ್ಥಿತಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ವಿದೇಶ ಪ್ರವಾಸಕ್ಕೆ ಹೋಗಿದ್ದಾರೆ ಎಂದು ದೂರಿದರು.
ನಮ್ಮ ಸರ್ಕಾರದಲ್ಲಿ ಅನುಷ್ಠಾನಕ್ಕೆ ತಂದಿರುವ ಕೆರೆಗೆ ನೀರು ತುಂಬಿಸುವ ಯೋಜನೆಗೆ ಈಗಲೂ ಕೆರೆಗೆ ನೀರು ಹರಿಸಲು ಕಾಂಗ್ರೆಸ್ ಸರ್ಕಾರ ವಿಫಲವಾಗಿದೆ ಎಂದರು.