ಗದಗ: ಮಲಪ್ರಭಾ ಪ್ರವಾಹದಿಂದ ಹಾನಿಗೊಳಗಾದ ಜಿಲ್ಲೆಯ ನರಗುಂದ ತಾಲೂಕಿನ ವಿವಿಧ ಗ್ರಾಮಗಳಿಗೆ ಕೇಂದ್ರ ಅಧ್ಯಯನ ತಂಡ ಭೇಟಿ ನೀಡಿ, ಪರಿಶೀಲನೆ ನಡೆಸಿತು.
ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವಾಲಯದ ಅಧೀನ ಕಾರ್ಯದರ್ಶಿ ವಿ.ಪಿ ರಾಜವೇಣಿ ನೇತೃತ್ವದಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಪ್ರಾದೇಶಿಕ ಕಚೇರಿ ಅಧೀಕ್ಷಕ ಅಭಿಯಂತರ ಸದಾನಂದ ಬಾಬು ಅವರ ತಂಡ ಜಿಲ್ಲೆಯ ಕೊಣ್ಣೂರು, ಲಖಮಾಪುರ, ವಾಸನ ಗ್ರಾಮಗಳಿಗೆ ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ, ಪರಿಶೀಲನೆ ನಡೆಸಿತು.
ಮೊದಲಿಗೆ ಕೊಣ್ಣೂರು ಸಮೀಪದ ಹುಬ್ಬಳ್ಳಿ- ವಿಜಯಪುರ ಹೆದ್ದಾರಿ ಸೇತುವೆ ಹಾನಿಗೊಳಗಾದ ಪ್ರದೇಶಕ್ಕೆ ಭೇಟಿ ನೀಡಿದರು. ಬಳಿಕ ವಾಸನ ಕ್ರಾಸ್ ಗೆ ಭೇಟಿ ನೀಡಿದ ತಂಡ ಜಮೀನುಗಳಿಗೆ ನದಿ ನೀರು ನುಗ್ಗಿದ್ದರಿಂದ ಉಂಟಾದ ಪೇರಲ, ಹತ್ತಿ, ಕಬ್ಬು, ಕೃಷಿ ಮತ್ತು ತೋಟಗಾರಿಕೆ ಬೆಳೆಗಳ ಹಾನಿಯನ್ನು ವೀಕ್ಷಿಸಿ, ಹಾನಿ ಕುರಿತು ಅಧಿಕಾರಿಗಳಿಂದ ಮಾಹಿತಿ ಕಲೆ ಹಾಕಿದರು.
ಆನಂತರ ಲಖಮಾಪುರ ಗ್ರಾಮಕ್ಕೆ ಭೇಟಿ ನೀಡಿ, ಮನೆ ಹಾಗೂ ಬೆಳೆ ಹಾನಿ ಬಗ್ಗೆ ಗ್ರಾಮಸ್ಥರಿಂದ ಸಮಸ್ಯೆ ಆಲಿಸಿದರು.
ಮಲಪ್ರಭಾ ನೆರೆಯಿಂದಾಗಿ ಜಿಲ್ಲೆಯಲ್ಲಿ 157 ಕೋಟಿ ಹಾನಿ ಎಂದು ಅಂದಾಜು ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಸುಂದರೇಶ ಬಾಬು ವಿವರಿಸಿದರು.
ಬಳಿಕ ಬಾಗಲಕೋಟೆಯತ್ತ ಪ್ರಯಾಣ ಬಳೆಸಿದರು. ಈ ಸಂದರ್ಭದಲ್ಲಿ ಜಿ.ಪಂ ಅಧ್ಯಕ್ಷ ರಾಜುಗೌಡ ಕೆಂಚನಗೌಡ್ರ, ಎಸ್.ಪಿ. ಯತೀಶ್ ಎನ್ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.