ಹೊಸದಿಲ್ಲಿ: ಹೊಸದಾಗಿ ಅಸ್ತಿತ್ವಕ್ಕೆ ಬಂದಿರುವ ಕೇಂದ್ರ ಸಹಕಾರ ಸಚಿವಾಲಯವು 2024ರ ಲೋಕಸಭೆ ಚುನಾವಣೆಯಲ್ಲಿ ರಾಜಕೀಯ ಗೇಮ್‌ಚೇಂಜರ್ ಆಗಿ ಕೆಲಸ ಮಾಡಲಿದೆಯೇ?
ಹೌದು ಎನ್ನುತ್ತವೆ ಮೂಲಗಳು. ಈಗಾಗಲೇ ಈ ಸಚಿವಾಲಯದ ಹೊಣೆ ಯನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೊತ್ತುಕೊಂಡಿದ್ದಾರೆ. ದೇಶದಲ್ಲಿನ ಸಹಕಾರ ಸಂಘಗಳಿಗೆ ಪುನರುಜ್ಜೀವ ನೀಡುವುದು ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಮಧ್ಯವರ್ತಿಗಳಿಂದ ಕೃಷಿಕರ ಮೇಲಾಗುತ್ತಿರುವ ದೌರ್ಜನ್ಯವನ್ನು ತಡೆಯುವುದೇ ಇದರ ಉದ್ದೇಶ ಎನ್ನಲಾಗಿದೆ.
ಹೊಸ ಕೃಷಿ ಕಾಯ್ದೆಗಳ ವಿರುದ್ಧ ರೈತರ ಪ್ರತಿಭಟನೆ ಮುಂದುವರಿದಿರುವಂತೆಯೇ ಕೇಂದ್ರ ಇಂಥದ್ದೊಂದು ಹೆಜ್ಜೆಯಿಟ್ಟಿದೆ. ಮುಂದಿನ ವರ್ಷ ನಡೆಯುವ ಪಂಚರಾಜ್ಯ ಚುನಾವಣೆಗಳನ್ನೂ ಗಮನದಲ್ಲಿಟ್ಟು ಪಕ್ಷದ ಗ್ರಾಮೀಣ ಹಾಗೂ ತಳಮಟ್ಟದ ನೆಲೆ ಯನ್ನು ಗಟ್ಟಿಗೊಳಿಸುವ ಲೆಕ್ಕಾಚಾರವನ್ನೂ ಹಾಕಿಕೊಂಡಿದೆ ಎಂದು ವಿಶ್ಲೇಷಿಸಲಾಗಿದೆ.
ರೈತರ ಆದಾಯ ಹೆಚ್ಚಳ ಗುರಿ:
ಭಾರತವು ಈಗಾಗಲೇ ಹಲವು ಯಶಸ್ವಿ ಸಹಕಾರ ಚಳವಳಿಗಳಿಗೆ ಸಾಕ್ಷಿಯಾಗಿದೆ. ಈ ಪೈಕಿ ಅಮೂಲ್ ಕ್ರಾಂತಿಯೂ ಒಂದು. ಗುಜರಾತ್‌ನ ಈ ಹಾಲು ಒಕ್ಕೂಟಕ್ಕೆ 36 ಲಕ್ಷ ಹಾಲು ಉತ್ಪಾದಕರೇ ಮಾಲಕರು. ಉತ್ಪನ್ನವನ್ನು ನೇರವಾಗಿ ಮಾರಾಟ ಮಾಡಲು ಸಾಧ್ಯವಾ ಗದಂಥ ಸಣ್ಣ ಉತ್ಪಾದಕರೇ ರಚಿಸಿರುವ ಒಕ್ಕೂಟ ಇದಾಗಿದೆ.
ಇದೇ ಮಾದರಿಯಲ್ಲಿ, ದೇಶದ ಇತರ ಭಾಗಗಳಲ್ಲೂ ಯಶಸ್ವಿ ಕೃಷಿ ಮತ್ತು ಜಾನುವಾರು ಸಹಕಾರ ಚಳವಳಿ ಯನ್ನು ಉತ್ತೇಜಿಸಿ, ರೈತರ ಆದಾಯವನ್ನು ಹೆಚ್ಚಿಸುವುದು ಸರಕಾರದ ಗುರಿಯಾಗಿದೆ. ಜತೆಗೆ ಇದು ಭೂಮಿಯ ಉತ್ಪಾದಕತೆಯನ್ನೂ ವೃದ್ಧಿಸಿ, ದೇಶದ ಜಿಡಿಪಿ ಪ್ರಗತಿಗೂ ಕೊಡುಗೆ ನೀಡಲಿದೆ ಎನ್ನುವುದು ಸರಕಾರದ ವಾದ.