Advertisement

ಎಲೆಕ್ಟ್ರಿಕ್‌ ಬಸ್‌ಗೆ ಕೇಂದ್ರ ಗ್ರೀನ್‌ ಸಿಗ್ನಲ್‌

12:09 PM May 22, 2018 | |

ಬೆಂಗಳೂರು: ಬಿಎಂಟಿಸಿಯು ಗುತ್ತಿಗೆ ಆಧಾರದಲ್ಲಿ ಪಡೆಯುವ ಎಲೆಕ್ಟ್ರಿಕ್‌ ಬಸ್‌ಗಳಿಗೆ ಸಬ್ಸಿಡಿ ನೀಡಲು ಕೇಂದ್ರ ಸರ್ಕಾರ ಕೊನೆಗೂ ಗ್ರೀನ್‌ ಸಿಗ್ನಲ್‌ ನೀಡಿದೆ. ಆದರೆ, ಸಬ್ಸಿಡಿ ಮೊತ್ತಕ್ಕೆ ಮಾತ್ರ ಕತ್ತರಿ ಹಾಕಿದೆ!

Advertisement

ಎಲೆಕ್ಟ್ರಿಕ್‌ ಬಸ್‌ಗಳನ್ನು ಗುತ್ತಿಗೆ ರೂಪದಲ್ಲಿ ಪಡೆದು, ಸೇವೆ ಕಲ್ಪಿಸುವ ಬಿಎಂಟಿಸಿ ಯೋಜನೆಗೆ ಕೇಂದ್ರ ಭಾರಿ ಕೈಗಾರಿಕೆಗಳು ಮತ್ತು ಸಾರ್ವಜನಿಕ ಉದ್ದಿಮೆಗಳ ಸಚಿವಾಲಯದ ಸಮ್ಮತಿ ಇದೆ. ಈ ಮೊದಲು ಖರೀದಿಗೆ ನೀಡಿದ ಭರವಸೆಯಂತೆ ಗುತ್ತಿಗೆ ರೂಪದಲ್ಲಿ ಪಡೆಯುವ ಎಲೆಕ್ಟ್ರಿಕ್‌ ಬಸ್‌ಗಳಿಗೂ ಸಬ್ಸಿಡಿ ನೀಡಲಾಗುವುದು ಎಂದು ಸೋಮವಾರ ಸಚಿವಾಲಯ ಆದೇಶ ಹೊರಡಿಸಿದೆ. ಹಾಗೇ ಮೇ 31ರ ಒಳಗೆ ಸೂಚಿಸಿದ ನಿಯಮಾನುಸಾರ ಒಪ್ಪಂದ ಮಾಡಿಕೊಂಡು, ಅದರ ಪ್ರತಿಯನ್ನು ತಮಗೆ ಕಳುಹಿಸಬೇಕು ಎಂದೂ ನಿರ್ದೇಶಿಸಿದೆ.

ಆದೇಶದ ಬೆನ್ನಲ್ಲೇ 12 ಮೀ. ಉದ್ದದ ಎಸಿ ಬಸ್‌ಗೆ ಈ ಮೊದಲಿನಂತೆ 1 ಕೋಟಿ ರೂ. ಸಬ್ಸಿಡಿ ನೀಡಲಾಗುವುದು. ಆದರೆ, ನಾನ್‌ ಎಸಿ (ಹವಾನಿಯಂತ್ರಣ ರಹಿತ) 9 ಮೀ. ಉದ್ದದ ಪ್ರತಿ ಎಲೆಕ್ಟ್ರಿಕ್‌ ಬಸ್‌ಗೆ 73 ಲಕ್ಷ ರೂ. ಸಬ್ಸಿಡಿ ನೀಡುವುದಾಗಿ ಸಚಿವಾಲಯ ಆದೇಶದಲ್ಲಿ ಸ್ಪಷ್ಟಪಡಿಸಿದೆ. ಈ ಹೊಸ ಆದೇಶದಿಂದ ಪ್ರತಿ ನಾನ್‌ ಎಸಿ ಬಸ್‌ಗೆ ಅಂದಾಜು 20 ಲಕ್ಷ ರೂ. ಸಬ್ಸಿಡಿಗೆ ಕತ್ತರಿ ಬಿದ್ದಂತಾಗಿದೆ.

ಈ ಸಬ್ಸಿಡಿ ಕಡಿತದಿಂದ ಈಗಾಗಲೇ ಅತ್ಯಂತ ಕಡಿಮೆ ದರದಲ್ಲಿ ಗುತ್ತಿಗೆ ಆಧಾರದಲ್ಲಿ ಎಲೆಕ್ಟ್ರಿಕ್‌ ಬಸ್‌ ಪೂರೈಸಲು ಮುಂದಾಗಿದ್ದ ಕಂಪೆನಿಗಳಿಗೆ ಇದು ನಿರಾಶೆ ಮೂಡಿಸಿದೆ. “ಈ ಮೊದಲೇ ಕಡಿಮೆ ದರದಲ್ಲಿ ಪೂರೈಸಲು ಮುಂದಾಗಿದ್ದೇವೆ. ಅಂತಹದ್ದರಲ್ಲಿ ಸಬ್ಸಿಡಿ ಕೂಡ ಕಡಿಮೆ ಕೊಟ್ಟರೆ ಹೇಗೆ?’ ಎಂದು ಗುತ್ತಿಗೆ ಪಡೆದ ಕಂಪೆನಿಯು ಮರುಲೆಕ್ಕಾಚಾರದಲ್ಲಿ ತೊಡಗಿದೆ. 

ವಾರದಲ್ಲಿ ಒಪ್ಪಂದಕ್ಕೆ ಸಹಿ: ಒಟ್ಟಾರೆ 150 ಎಲೆಕ್ಟ್ರಿಕ್‌ ಬಸ್‌ಗಳ ಖರೀದಿಸುವ ಗುರಿ ಇದ್ದು, ಈ ಪೈಕಿ ಪ್ರಸ್ತುತ 60 ಎಸಿ (12 ಮೀ. ಉದ್ದ) ಹಾಗೂ 20 ನಾನ್‌ಎಸಿ (9 ಮೀ. ಉದ್ದ) ಎಲೆಕ್ಟ್ರಿಕ್‌ ಬಸ್‌ಗಳನ್ನು ಖರೀದಿಸಲು ನಿರ್ಧರಿಸಲಾಗಿದೆ. ಸಬ್ಸಿಡಿ ಕಡಿತದಿಂದ ಕಂಪನಿಗಳಿಗೆ ಬೇಸರ ಉಂಟಾಗಿದ್ದರೂ, ಅದಾವುದಕ್ಕೂ ಅವಕಾಶ ನೀಡದೆ ಈ ವಾರದಲ್ಲಿ ಒಪ್ಪಂದಕ್ಕೆ ಪರಸ್ಪರ ಸಹಿ ಹಾಕುವ ಪ್ರಕ್ರಿಯೆ ಪೂರ್ಣಗೊಳಿಸಲಾಗುವುದು ಎಂದು ಹೆಸರು ಹೇಳಲಿಚ್ಛಿಸದ ಬಿಎಂಟಿಸಿ ಉನ್ನತ ಅಧಿಕಾರಿಗಳು “ಉದಯವಾಣಿ’ಗೆ ತಿಳಿಸಿದ್ದಾರೆ. 

Advertisement

“ಬ್ಯಾಟರಿ ಗುಣಮಟ್ಟ ಅವಲಂಬಿಸಿದೆ’: ಸಾಮಾನ್ಯವಾಗಿ 9 ಮೀ. ಉದ್ದದ ಒಂದು ನಾನ್‌ ಎಸಿ ಎಲೆಕ್ಟ್ರಿಕ್‌ ಬಸ್‌ನ ಮಾರುಕಟ್ಟೆ ದರ (ಸಗಟು ಖರೀದಿ) 1.40 ಕೋಟಿ ಹಾಗೂ 12 ಮೀ. ಉದ್ದದ ಎಸಿ ಬಸ್‌ಗೆ 1.80 ಕೋಟಿ ರೂ. ಆಗುತ್ತದೆ. ಕೇಂದ್ರ ಸರ್ಕಾರ ನಿಗದಿಪಡಿಸಿದ ದರ 1.22 ಕೋಟಿ ರೂ. ಇದರ ಶೇ.60ರಷ್ಟು ಸಬ್ಸಿಡಿ ನೀಡಲಾಗುವುದು. ಆದರೆ, ಹೀಗೆ ಬಸ್‌ ದರವನ್ನು ಹೋಲಿಕೆ ಮಾಡುವುದು ತಪ್ಪಾಗುತ್ತದೆ. ಕಾರಣ, ಎಲೆಕ್ಟ್ರಿಕ್‌ ಬಸ್‌ಗಳ ದರ ಅವುಗಳಲ್ಲಿ ಅಳವಡಿಸಿರುವ ಬ್ಯಾಟರಿ ಸಾಮರ್ಥ್ಯ ಅವಲಂಬಿಸಿರುತ್ತದೆ.

ಬಿಎಂಟಿಸಿಗೆ ಪೂರೈಸಲಾಗುವ ಬಸ್‌ಗಳ ಬ್ಯಾಟರಿ ಗುಣಮಟ್ಟದ್ದಾಗಿರಬೇಕು ಎಂದು ಷರತ್ತು ವಿಧಿಸಲಾಗಿದ್ದು, ಪ್ರತಿ ಕಿ.ಮೀ.ಗೆ ನಾನ್‌ ಎಸಿ ಬಸ್‌ನ ಬ್ಯಾಟರಿಯು 0.9 ಯೂನಿಟ್‌ ಹಾಗೂ ಎಸಿ ಬಸ್‌ ಬ್ಯಾಟರಿಗೆ 1.2 ಯೂನಿಟ್‌ ವಿದ್ಯುತ್‌ ಮಾತ್ರ ಖರ್ಚಾಗಬೇಕು ಎಂದೂ ಹೇಳಿದೆ. ಈ ಮಿತಿ ಮೀರಿದರೆ, ಕಂಪನಿಗೆ ದಂಡ ವಿಧಿಸಲಿಕ್ಕೂ ಅವಕಾಶ ಕಲ್ಪಿಸಲಾಗಿದೆ ಎಂದೂ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಪರಿಷ್ಕೃತ ದರ
ಬಸ್‌ ವಿಧ    ಬಸ್‌ಗಳ ಸಂಖ್ಯೆ    ನಿಗದಿಪಡಿಸಿದ ದರ    ಒಟ್ಟು ಸಬ್ಸಿಡಿ

-12 ಮೀ. (ಎಸಿ)    60    1.69 ಕೋಟಿ    100 ಕೋಟಿ    60 ಕೋಟಿ ರೂ.
-9 ಮೀ. (ನಾನ್‌ ಎಸಿ)    20    1.22 ಕೋಟಿ    73.78 ಲಕ್ಷ    14.76 ಕೋಟಿ ರೂ.

500 ಎಲೆಕ್ಟ್ರಿಕ್‌ ಬಸ್‌ ಖರೀದಿ?: ದಿನದಿಂದ ದಿನಕ್ಕೆ ಡೀಸೆಲ್‌ ದರ ಏರಿಕೆಯಾಗುತ್ತಿರುವುದು ಮತ್ತು ಪರಿಸರ ಸ್ನೇಹಿ ಸಾರಿಗೆ ಸೇವೆ ಬಳಕೆಯನ್ನು ವ್ಯಾಪಕಗೊಳಿಸುವ ಹಿನ್ನೆಲೆಯಲ್ಲಿ ಸುಮಾರು 500 ಎಲೆಕ್ಟ್ರಿಕ್‌ ಬಸ್‌ಗಳನ್ನು ಗುತ್ತಿಗೆ ಆಧಾರದಲ್ಲಿ ರಸ್ತೆಗಿಳಿಸಲು ಬಿಎಂಟಿಸಿ ಉದ್ದೇಶಿಸಿದೆ.

1,500 ಡೀಸೆಲ್‌ ಆಧಾರಿತ ಬಸ್‌ಗಳನ್ನು ಖರೀದಿಸಲು ಈ ಮೊದಲು ನಿರ್ಧರಿಸಲಾಗಿತ್ತು. ಆದರೆ, ಇದಕ್ಕಿಂತ ಕಡಿಮೆ ವೆಚ್ಚದಲ್ಲಿ ಎಲೆಕ್ಟ್ರಿಕ್‌ ಬಸ್‌ಗಳ ಸೇವೆ ಒದಗಿಸಲು ಕಂಪನಿಗಳು ಮುಂದೆಬಂದಿವೆ. ಈ ಹಿನ್ನೆಲೆಯಲ್ಲಿ 1,500ರ ಪೈಕಿ 12 ಮೀಟರ್‌ ಉದ್ದದ 500 ನಾನ್‌ ಎಸಿ ಎಲೆಕ್ಟ್ರಿಕ್‌ ಬಸ್‌ಗಳನ್ನು ಗುತ್ತಿಗೆ ಪಡೆಯಲು ಉದ್ದೇಶಿಸಿದೆ. ಈ ಸಂಬಂಧ ಬಿಎಂಟಿಸಿ ಶೀಘ್ರದಲ್ಲೇ ಟೆಂಡರ್‌ ಕರೆಯಲಿದೆ ಎಂದು ಮೂಲಗಳು ತಿಳಿಸಿವೆ.

ಡೀಸೆಲ್‌ ಆಧಾರಿತ ನಾನ್‌ ಎಸಿ ಬಸ್‌ಗಳಿಗೆ ಪ್ರತಿ ಕಿ.ಮೀ. ಕಾರ್ಯಾಚರಣೆಗೆ 52 ರೂ. ತಗಲುತ್ತದೆ. ಆದರೆ, ಎಲೆಕ್ಟ್ರಿಕ್‌ ಬಸ್‌ಗಳನ್ನು ಪ್ರತಿ ಕಿ.ಮೀ.ಗೆ ಕೇವಲ 24.03 ರೂ.ಗಳಲ್ಲಿ ಓಡಿಸಲು ಕಂಪನಿಗಳು ಮುಂದಾಗಿವೆ. ಜತೆಗೆ ಇಂಧನ ಮತ್ತು ನಿರ್ವಾಹಕ/ ಚಾಲಕನ ವೆಚ್ಚ ಸೇರಿ 40 ರೂ. ಆಗುತ್ತದೆ. ಅಂದರೆ, ನೇರವಾಗಿ ಪ್ರತಿ ಕಿ.ಮೀ.ಗೆ 12 ರೂ. ಉಳಿತಾಯ ಆಗಲಿದೆ ಎಂಬುದು ಸಂಸ್ಥೆ ಲೆಕ್ಕಾಚಾರ.

* ವಿಜಯಕುಮಾರ್‌ ಚಂದರಗಿ 

Advertisement

Udayavani is now on Telegram. Click here to join our channel and stay updated with the latest news.

Next