Advertisement

ಕೇಂದ್ರ ಸರಕಾರದ ಬೆಲೆಯೇರಿಕೆ, ರಫೇಲ್‌ ಡೀಲ್‌ ವಿರುದ್ಧ ಪ್ರತಿಭಟನೆ

06:40 AM Oct 02, 2018 | Team Udayavani |

ಕಾಪು: ಹಗರಣಗಳ ಸರಮಾಲೆ, ಸುಳ್ಳಿನ ಭರವಸೆ, ಬೆಲೆ ಏರಿಕೆ ನೀತಿ, ರಫೇಲ್‌ ಡೀಲ್‌ನಂತಹ ಕೋಟ್ಯಂತರ ರೂ. ಅವ್ಯವಹಾರದ ಕಾರಣದಿಂದಾಗಿ ಮೋದಿ ಸರಕಾರದ ಬಗ್ಗೆ ಜನ ಭ್ರಮ ನಿರಸನ ಹೊಂದಿದ್ದಾರೆ. ಸ್ವತ್ಛ ಆಡಳಿತ ನೀಡುವ ಭರವಸೆ ನೀಡಿ ಅಧಿಕಾರಕ್ಕೆ ಬಂದಿರುವ ಮೋದಿ ಸರಕಾರ ಜನರನ್ನು ವಂಚಿಸುವ ಮೂಲಕ ಜನರಿಂದಲೇ ತಿರಸ್ಕೃತಗೊಳ್ಳುವ ಹಂತದಲ್ಲಿದೆ ಎಂದು ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಜನಾರ್ದನ ತೋನ್ಸೆ ಹೇಳಿದರು.

Advertisement

ಕೇಂದ್ರ ಸರಕಾರದ ಬೆಲೆಯೇರಿಕೆ ನೀತಿ, ರಫೇಲ್‌ ಡೀಲ್‌ ಅವ್ಯವಹಾರ ಸಹಿತ ಹಲವು ಕಾರಣಗಳನ್ನು ಮುಂದಿಟ್ಟುಕೊಂಡು ಸೋಮವಾರ ಕಾಪು ಪೇಟೆಯಲ್ಲಿ ನಡೆದ ಪ್ರತಿಭಟನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಮಾಜಿ ಸಚಿವ ವಿನಯಕುಮಾರ್‌ ಸೊರಕೆ ಮಾತನಾಡಿ, ಕೇಂದ್ರ ಸರಕಾರದ ವಿರುದ್ಧ ಜನ ತೀವ್ರ ಆಕ್ರೋಶಿತರಾಗಿದ್ದಾರೆ. ಸಣ್ಣ ಪುಟ್ಟ ವಿಚಾರಗಳಿಗೂ ಬೀದಿಗಿಳಿದು ಹೋರಾಟ ಮಾಡುತ್ತಿದ್ದ ಸಂಸದೆ ಶೋಭಾ ಕರಂದ್ಲಾಜೆ ಕೇಂದ್ರ ಸರಕಾರದ ಕುರಿತಾಗಿ ಜನರಲ್ಲಿ ಇರುವ ಗೊಂದಲಗಳಿಗೆ ಉತ್ತರ ನೀಡಬೇಕು. ಆದರೆ ಅವರೇ ಕಾಣೆಯಾಗಿದ್ದು, ಅವರನ್ನು ಹುಡುಕಿ ಕೊಡುವಂತೆ ನಾವು ಮೋದಿಯವರನ್ನೇ ವಿನಂತಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಆಕಾಶವನ್ನು ಕೈಯ್ಯಲ್ಲಿ ಕೊಡುವುದಾಗಿ ಹೇಳಿದ ಬಿಜೆಪಿ ಜನರ ಬದುಕುವ ಅವಕಾಶಕ್ಕೇ ಕಣ್ಣಿರಿಸಿರುವುದು ಖಂಡನೀಯ ಎಂದರು.

ಮಾಜಿ ಶಾಸಕ ಗೋಪಾಲ ಭಂಡಾರಿ ಮಾತನಾಡಿ, ಮೋದಿ ನೇತೃತ್ವದ ಬಿಜೆಪಿ ಸರಕಾರವು ಸಂಪುರ್ಣವಾಗಿ ಅಧಿಕಾರವನ್ನು ದುರುಪಯೋಗ ಮಾಡುತ್ತಿದೆ. ಸರ್ಜಿಕಲ್‌ ಸ್ಟೆ Åçಕ್‌ ಮೂಲಕವಾಗಿ ಸೈನಿಕರ ಜೀವದೊಂದಿಗೆ ಚೆಲ್ಲಾಟವಾಡುತ್ತಿದೆ. ಸರ್ವಾಧಿಕಾರಿ ಧೋರಣೆಯ ಮೂಲಕ ದೇಶದ ಆರ್ಥಿಕತೆಗೆ ಪೆಟ್ಟು ಕೊಡುವ ಯತ್ನ ಮಾಡುತ್ತಿದೆ. ಧಾರ್ಮಿಕ ಭಾವನೆಗಳನ್ನು ಕೆರಳಿಸಿ, ಜನರನ್ನು ವಂಚಿಸುತ್ತಿದೆ. ಇಂತಹ ಕೆಟ್ಟ ಸರಕಾರದ ವಿರುದ್ಧ ಜನ ಎಚ್ಚೆತ್ತುಕೊಳ್ಳುವುದು ಅತ್ಯಗತ್ಯವಾಗಿದೆ ಎಂದರು.

ಎಐಸಿಸಿ ಸದಸ್ಯ ಅಮೃತ್‌ ಶೆಣೈ ಮಾತನಾಡಿ, ಹಾಲಿ ಕೇಂದ್ರ ಸರಕಾರದ ಕಳೆದ ನಾಲ್ಕೂವರೆ ವರ್ಷಗಳ ಅವಧಿಯಲ್ಲಿ ದೇಶದಲ್ಲಿ 23 ಸಾವಿರ ವಂಚನೆಯ ಪ್ರಕರಣಗಳ ಮೂಲಕ 90 ಸಾವಿರ ಕೋ. ರೂ. ಹಣಕಾಸಿನ ವಂಚನೆಯಾಗಿದೆ. ಕಪ್ಪು ಹಣ ವಾಪಾಸು ತರುವುದಾಗಿ ಹೇಳಿದ ಸರಕಾರ ವಂಚಕರನ್ನು ದೇಶದಿಂದ ಹೊರ ಹೋಗಲು ಬಿಡುವ ಮೂಲಕ ದೇಶದ ಭವಿಷ್ಯಕ್ಕೆ ಅಪಾಯವನ್ನು ತಂದುಕೊಟ್ಟಿದೆ. ಮುಂದಿನ ಚುನಾವಣೆಯಲ್ಲಿ ಮತ್ತೆ ಬಿಜೆಪಿ ಗೆದ್ದರೆ ಇದು ಹೀಗೆಯೇ ಮುಂದುವರಿದು ಮತ್ತೂಂದು ಜಲಿಯನ್‌ ವಾಲಾಭಾಗ್‌ ದುರಂತಕ್ಕೆ ಕಾರಣವಾಗ ಬಹುದು. ಮತದಾರರು ಈ ಬಗ್ಗೆ ಈಗಿನಿಂದಲೇ ಜಾಗೃತರಾಗಬೇಕು ಎಂದರು.

Advertisement

ಮಾಜಿ ಶಾಸಕ ಗೋಪಾಲ ಭಂಡಾರಿ, ಎಐಸಿಸಿ ಸದಸ್ಯ ಅಮೃತ್‌ ಶೆಣೈ, ಕೆಪಿಸಿಸಿ ಕಾರ್ಯದರ್ಶಿಗಳಾದ ವೆರೋನಿಕಾ ಕರ್ನೆಲಿಯೋ, ಮುರಳೀ ಶೆಟ್ಟಿ, ಮಹಿಳಾ ಕಾಂಗ್ರೆಸ್‌ ಜಿಲ್ಲಾಧ್ಯಕ್ಷೆ ಗೀತಾ ವಾಗ್ಲೆ, ಜಿ.ಪಂ. ಸದಸ್ಯ ವಿಲ್ಸನ್‌ ರೋಡ್ರಿಗಸ್‌, ತಾ.ಪಂ. ಸದಸ್ಯ ದಿನೇಶ್‌ ಕೋಟ್ಯಾನ್‌, ಪುರಸಭಾ ಅಧ್ಯಕ್ಷೆ ಮಾಲಿನಿ, ಪಕ್ಷದ ಮುಖಂಡರಾದ ವೈ. ಸುಕುಮಾರ್‌, ಶಿವಾಜಿ ಎಸ್‌. ಸುವರ್ಣ, ಅಬ್ದುಲ್‌ ಅಜೀಜ್‌, ಪ್ರಭಾವತಿ ಸಾಲ್ಯಾನ್‌, ದೀಪಕ್‌ ಕುಮಾರ್‌ ಎರ್ಮಾಳ್‌, ಗಣೇಶ್‌ ಕೋಟ್ಯಾನ್‌, ವಿನಯ ಬಲ್ಲಾಳ್‌, ಗುಲಾಂ ಮಹಮ್ಮದ್‌, ಮೆಲ್ವಿನ್‌ ಡಿ ಸೋಜಾ ಮೊದಲಾದವರು ಉಪಸ್ಥಿತರಿದ್ದರು.

ಪ್ರತಿಭಟನಾ ಸಭೆಗೆ ಪೂರ್ವಭಾವಿಯಾಗಿ ಕಾಪು ವಿದ್ಯಾನಿಕೇತನ ಶಾಲೆಯ ಬಳಿಯಿಂದ ಕಾಪು ಪೇಟೆಯವರೆಗೆ ನೂರಾರು ಮಂದಿ ಕಾರ್ಯರ್ತರು ಪ್ರತಿಭಟನಾ ಮೆರವಣಿಗೆ ನಡೆಸಿದ್ದು, ಕೇಂದ್ರ ಸರಕಾರದ ವಿರುದ್ಧ, ಮೋದಿ ಸರಕಾರದ ವಿರುದ್ಧ, ಕೇಂದ್ರದ ಹಲವು ಜನ ವಿರೋಧಿ ನೀತಿಗಳ ವಿರುದ್ಧ ಘೋಷಣೆ ಕೂಗಿದರು.ಕಾಪು ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ನವೀನ್‌ಚಂದ್ರ ಶೆಟ್ಟಿ ಸ್ವಾಗತಿಸಿದರು. ಬ್ಲಾಕ್‌ ಕಾಂಗ್ರೆಸ್‌ ಕಾರ್ಯದರ್ಶಿ ಅಮೀರ್‌ ಕಾಪು ವಂದಿಸಿದರು.

ಕಾಪು ಕ್ಷೇತ್ರದಲ್ಲಿ ನಾವು ಪ್ರಾರಂಭಿಸಿದ ಅಭಿವೃದ್ಧಿ ಕಾಮಗಾರಿಗಳ ಸ್ಥಳಾಂತರ ಪ್ರಕ್ರಿಯೆಗೆ ಹಾಲಿ ಶಾಸಕರು ಮುತುವರ್ಜಿ ವಹಿಸುತ್ತಿದ್ದಾರೆ. ತಾಲೂಕು ಕಛೇರಿ ಆಡಳಿತವನ್ನು ಸ್ಥಳಾಂತರಿಸಿರುವ ಅವರು, ಕಾಪು ಪೇಟೆಯ ಒಳ ಚರಂಡಿ ಯೋಜನೆ, ಎಲ್ಲೂರಿಗೆ ತ್ಯಾಜ್ಯ ಸಂಸ್ಕರಣಾ ಘಟಕಗಳಿಗೂ ತಮ್ಮವರಿಂದಲೇ ವಿರೋಧ ವ್ಯಕ್ತಪಡಿಸಿಕೊಳ್ಳುವ ಮೂಲಕ ಹೊಸ ಪರಂಪರೆಗೆ ನಾಂದಿ ಹಾಡುತ್ತಿದ್ದಾರೆ. ಕಾಪು ಕ್ಷೇತ್ರದ ಅಭಿವೃದ್ಧಿಗೆ ತೊಡಕಾದರೆ, ಹಿಂದಿನ ಅಭಿವೃದ್ಧಿ ಕಾರ್ಯಗಳು ವಿಳಂಬವಾದರೆ ಅದಕ್ಕೆ ಹಾಲಿ ಶಾಸಕರೇ ನೇರ ಹೊಣೆಗಾರರಾಗುತ್ತಾರೆ.
– ವಿನಯಕುಮಾರ್‌ ಸೊರಕೆ
ಮಾಜಿ ಶಾಸಕರು

Advertisement

Udayavani is now on Telegram. Click here to join our channel and stay updated with the latest news.

Next