ಹೊಳೆಹೊನ್ನೂರು: ಗ್ರಾಮದ ಕಟ್ಟಕಡೆಯ ವ್ಯಕ್ತಿಗೂ ಕೇಂದ್ರ ಸರ್ಕಾರದ ಯೋಜನೆ ತಲುಪಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ರೂಪಿಸಿದ್ದಾರೆ ಎಂದು ಸಂಸದ ಬಿ. ವೈ. ರಾಘವೇಂದ್ರ ತಿಳಿಸಿದರು.
ಸಮೀಪದ ಹೊಳಲೂರು ಗ್ರಾಮದಲ್ಲಿ ಭಾನುವಾರ ಗ್ರಾಪಂ ವತಿಯಿಂದ ಹಮ್ಮಿಕೊಂಡಿದ್ದ ರಾಷ್ಟ್ರೀಯ ಪಂಚಾಯತ್ ರಾಜ್ ದಿವಸ್ ಆಚರಣೆ ಕಾರ್ಯ ಕ್ರಮವನ್ನುದ್ದೇಶಿಸಿ ಅವರು ಮಾತನಾಡಿದರು.
ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳಾದ ಪ್ರಯುಕ್ತ ಜಿಲ್ಲೆಯಲ್ಲಿರುವ 75 ಕೆರೆಗಳ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ದತ್ತು ತೆಗೆದುಕೊಂಡಿದ್ದು, ಇದರ ಜೀರ್ಣೋದ್ಧಾರ ಕಾರ್ಯಗಳನ್ನು ತಾವೇ ನಿರ್ವಹಿಸಿದ್ದಾಗಿ ತಿಳಿಸಿದರು. ಜಿಲ್ಲೆಯಲ್ಲಿ ಗ್ರಾಪಂ ಅಭಿವೃದ್ಧಿಗೊಳಿಸಿದ ಕೀರ್ತಿ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಹಾಗೂ ಮುಖ್ಯ ಕಾರ್ಯನಿರ್ವಣಾಧಿಕಾರಿ ವೈಶಾಲಿ ಅವರಿಗೆ ಸಲ್ಲುತ್ತದೆ ಎಂದರು.
ಜಿಲ್ಲೆಯೂ ಅಭಿವೃದ್ಧಿಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಈಗಾಗಲೇ ಕೋಟಿಗಟ್ಟಲೆ ಅನುದಾನ ನೀಡುವಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಸಫಲವಾಗಿವೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಅನುದಾನದ ನಿರೀಕ್ಷೆಯಿದ್ದು, ಜನರ ಎಲ್ಲಾ ಆಶೋತ್ತರಗಳನ್ನು ಈಡೇರಿಸುವಲ್ಲಿ ಬಿಜೆಪಿ ಸರ್ಕಾರ ಸಫಲವಾಗುತ್ತದೆ ಎಂದರು.
ಹೂವಿನ ಗಿಡಕ್ಕೆ ನೀರನ್ನು ಹಾಕುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಶಿವಮೊಗ್ಗ ಗ್ರಾಮಾಂತರ ಶಾಸಕ ಕೆ.ಬಿ. ಅಶೋಕ್ ನಾಯ್ಕ ಮಾತನಾಡಿ, ಪ್ರತಿ ಗ್ರಾಪಂಗಳು ಪ್ರಧಾನ ಮಂತ್ರಿಗಳ ಆಶಯದಂತೆ ಗ್ರಾಮಗಳ ನೈರ್ಮಲ್ಯ ಸ್ವಚ್ಛತೆ ಬಗ್ಗೆ ಹೆಚ್ಚಿನ ಒತ್ತು ನೀಡಬೇಕು. ಪ್ರಧಾನ ಮಂತ್ರಿ ಸ್ವಚ್ಛ ಭಾರತ್ ಮಿಷನ್ ಕಾರ್ಯಕ್ರಮ ಪ್ರತಿಯೊಂದು ಗ್ರಾಪಂಗಳಲ್ಲಿ ಸಮರ್ಪಕವಾಗಿ ಅನುಷ್ಠಾನಕ್ಕೆ ತರುವಂತೆ ಪಂಚಾಯ್ತಿ ಅಧಿಕಾರಿಗಳಿಗೆ ಸೂಚಿಸಿದರು. ರೈತರ ಆದಾಯ ದ್ವಿಗುಣಗೊಳಿಸುವಲ್ಲಿ ಪ್ರಧಾನ ಮಂತ್ರಿಗಳ ಅಭಿವೃದ್ಧಿ ಕಾರ್ಯಕ್ರಮಗಳು ಪ್ರತಿಯೊಬ್ಬ ರೈತರಿಗೂ ತಲುಪಿಸಬೇಕಾಗಿದೆ ಎಂದರು.
ಜಿಪಂ ಸಿಇಒ ಎಂ. ಎಲ್. ವೈಶಾಲಿ ಮಾತನಾಡಿ, ಗ್ರಾಪಂ ಮಟ್ಟದಲ್ಲಿ ಕೈಗೊಂಡಿರುವ ಕಾರ್ಯಗಳ ಬಗ್ಗೆ ಮೆಚ್ಚುಗೆ ಸೂಚಿಸಿ ಹೊಳಲೂರು ಗ್ರಾಮಕ್ಕೆ ಪ್ರಧಾನ ಮಂತ್ರಿಗಳ ಆಗಮನದ ನಿರೀಕ್ಷೆಯಲ್ಲಿದ್ದೆವು. ಗ್ರಾಮಕ್ಕೆ ಸಂಸದರ ನಿಧಿಯಿಂದ ಅನುದಾನ ಬಳಸಿ ಗ್ರಾಮದ ಸ್ವಚ್ಛತೆ, ರಸ್ತೆ ಅಭಿವೃದ್ಧಿ ಮಾಡಿರುವುದು ಹಾಗೂ ತ್ಯಾಜ್ಯ ವಿಲೇವಾರಿ ಮಾಡಿ ಗ್ರಾಮ ಸಂಪೂರ್ಣ ಪ್ರಧಾನ ಮಂತ್ರಿಗಳ ಆಗಮನಕ್ಕೆ ಸಜ್ಜಾಗಲಾಗಿತ್ತು. ಆದರೆ ಕೊನೆ ಕ್ಷಣದಲ್ಲಿ ಪ್ರಧಾನ ಮಂತ್ರಿಗಳ ಕಾರ್ಯಕ್ರಮ ರದ್ದಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಆಯ್ದ ಫಲಾನುಭವಿಗಳಿಗೆ ಆಯುಷ್ಮನ್ ಹಾಗೂ ಈ- ಶ್ರಮ ಕಾರ್ಡ್‌ಗಳನ್ನು ವಿತರಿಸಲಾಯಿತು. ನ್ಯಾಮತ್ ವುಲ್ಲಾ ಖಾನ್, ಉಪಾಧ್ಯಕ್ಷರು ನಾಗಮ್ಮ, ಸದಸ್ಯರಾದ ರೇಣುಕಮ್ಮ, ಬಿ.ರುದ್ರಪ್ಪ, ಸವಿತಾ ಅಯ್ಯರ್, ಚನ್ನಮ್ಮ, ಸುರೇಶ್ ಎಂ.ಪಿ., ಸೀಮಾ ಪರ್ವೀನ್, ಅಧಿಕಾರಿಗಳಾದ ಈ.ಒ. ತಮ್ಮನಗೌಡ, ಭೂದಾಖಲೆಗಳ ಉಪನಿರ್ದೇಶಕ ನಾರಾಯಣಸ್ವಾಮಿ, ಬಿಇಒ ನಾಗರಾಜ್, ಸಿಡಿಪಿಒ ಚಂದ್ರಪ್ಪ, ಮಲ್ಲಿಕಾರ್ಜುನ್ ಟಿ., ಜಯಲಕ್ಷ್ಮಮ್ಮ ಇನ್ನಿತರಿದ್ದರು.