ಕೋಲ್ಕತಾ/ಹೊಸದಿಲ್ಲಿ: ಪಶ್ಚಿಮ ಬಂಗಾಲದ ಬಸಿರ್ಹಾಟ್‌ನಲ್ಲಿ ಉಂಟಾಗಿರುವ ಅಹಿತಕರ ಘಟನೆ ಬಗ್ಗೆ ಕೇಂದ್ರ ಸರಕಾರದ ವಿರುದ್ಧ ಹರಿಹಾಯ್ದಿದ್ದಾರೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ. ಅದಕ್ಕೆ ಪ್ರತ್ಯಾಕ್ಷೇಪ ಮಾಡಿರುವ ಸಚಿವ ಪಿಯೂಷ್ ಗೋಯಲ್, ಕೇಂದ್ರ ಕಳುಹಿಸಿಕೊಟ್ಟಿರುವ 400 ಮಂದಿ ಇದ್ದ ಅರೆ ಸೇನಾ ತುಕಡಿಯನ್ನು ತಿರಸ್ಕರಿಸಿದ್ದೇಕೆ ಎಂದು ಪ್ರಶ್ನಿಸಿದ್ದಾರೆ. ಈ ವಾಗ್ವಾದದ ನಡುವೆ ಮಮತಾ ನೇತೃತ್ವದ ಸರಕಾರ ಗಲಭೆ ಪ್ರಕರಣದ ವಿರುದ್ಧ ನ್ಯಾಯಾಂಗ ತನಿಖೆಗೆ ಆದೇಶಿಸಿದ್ದಾರೆ.
ಬದುರಿಯಾ ಮತ್ತು ಬಸಿರ್ಹಾಟ್‌ನಲ್ಲಿ ಉಂಟಾಗಿರುವ ಗಲಭೆಗಳಿಗೆ ಸಂಬಂಧಿಸಿ ಸಿಎಂ ಮಮತಾ, “ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಮತ್ತು ಬಿಜೆಪಿ ರಾಜ್ಯದಲ್ಲಿ ಶಾಂತಿ ಕದಡಲು ಯತ್ನಿಸುತ್ತಿದೆ. ಗಡಿಯಾಚೆಯಿಂದ ಜನರನ್ನು ಒಳನುಸುಳಲು ಪ್ರೋತ್ಸಾಹ ನೀಡುತ್ತಿದೆ’ ಎಂದು ಗಂಭೀರ ಆರೋಪ ಮಾಡಿದ್ದಾರೆ. ಈ ಮೂಲಕ ಒಕ್ಕೂಟ ವ್ಯವಸ್ಥೆ ನಾಶ ಮಾಡಲು ಯತ್ನಿಸಲಾಗುತ್ತಿದೆ ಎಂದು ದೂರಿದ್ದಾರೆ. ಎರಡೂ ಸ್ಥಳಗಳಲ್ಲಿ ಶಾಂತಿ, ಸುವ್ಯವಸ್ಥೆ ಕಾಪಾಡಿಕೊಂಡು ಬರಲು ಕೇಂದ್ರ ನೆರವಾಗುತ್ತಿಲ್ಲ ಎಂದು ಆರೋಪಿದ್ದಾರೆ.
ಎರಡು ಸುದ್ದಿವಾಹಿನಿಗಳ ವಿರುದ್ಧ ಕಿಡಿಕಾರಿದ ಅವರು, ಅವುಗಳ ವಿರುದ್ಧವೂ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ. ಮುಂದಿನ 10-15 ದಿನಗಳ ಅವಧಿಯಲ್ಲಿ ಶಾಂತಿ ನೆಲೆಸಿದರೆ ತಾವೇ ಅಲ್ಲಿನ ರಾಜಕೀಯ ಪಕ್ಷಗಳ ಜತೆಗೆ ಸಭೆ ನಡೆಸುವುದಾಗಿ ಹೇಳಿದ್ದಾರೆ.
ನ್ಯಾಯಾಂಗ ತನಿಖೆ: ಬದುರಿಯಾ, ಬಸಿರ್ಹಾಟ್ ಗಲಭೆಗಳಿಗೆ ಸಂಬಂಧಿಸಿ ಜಿಲ್ಲಾಧಿಕಾರಿ, ಎಸ್ಪಿ ಅವರನ್ನು ವರ್ಗಾಯಿಸಲಾಗಿದೆ ಎಂದಿದ್ದಾರೆ ಮಮತಾ. ಇದೇ ವೇಳೆ ಎರಡೂ ಸ್ಥಳಗಳಲ್ಲಿನ ಹಿಂಸೆಯ ಬಗ್ಗೆ ಕಾರಣ ತಿಳಿದುಕೊಳ್ಳಲು ನ್ಯಾಯಾಂಗ ತನಿಖೆಗೆ ಆದೇಶಿಸಿರುವುದಾಗಿ ಹೇಳಿದ್ದಾರೆ. ಜಿಲ್ಲೆಯಲ್ಲಿ ಇಂಟರ್ನೆಟ್ ಸಂಪರ್ಕ ಕಡಿತಗೊಳಿಸಲಾಗಿದೆ.
ಒಬ್ಬ ಸಾವು: ಈ ನಡುವೆ ಉತ್ತರ ದಿನಾಪುರದಲ್ಲಿ ಬಿಜೆಪಿ ಮತ್ತು ಟಿಎಂಸಿ ಕಾರ್ಯಕರ್ತರ ನಡುವಿನ ಘರ್ಷಣೆಯಲ್ಲಿ ಒಬ್ಬ ಸಾವಿಗೀಡಾಗಿದ್ದಾನೆ. ಜತೆಗೆ, ಮತ್ತೂಬ್ಬ ಯುವಕನ ಮೃತದೇಹ ಪತ್ತೆಯಾಗಿದ್ದು, ಪೊಲೀಸರೇ ಕೊಂದಿರುವುದಾಗಿ ಜಿಜೆಎಂ ಆರೋಪಿಸಿದೆ. ಈ ಹಿನ್ನೆಲೆಯಲ್ಲಿ ಶನಿವಾರ ಹಿಂಸಾಚಾರ ಆರಂಭವಾಗಿದ್ದು, ಪೊಲೀಸ್ ಠಾಣೆಗಳ ಮೇಲೆ ಕಲ್ಲು ತೂರಲಾಗಿದೆ. ಡಾರ್ಜಿಲಿಂಗ್‌ನ ಟಾಯ್ ಟ್ರೈನ್ ಮೇಲೂ ದಾಳಿ ನಡೆಸಿ, ದಾಂದಲೆ ಮಾಡಲಾಗಿದೆ.