Advertisement

ಬ್ರೈಲ್‌ ಲಿಪಿಯಲ್ಲಿ ಕೇಂದ್ರ ಬಜೆಟ್‌ ಮಾಹಿತಿ

01:16 AM Aug 11, 2019 | Lakshmi GovindaRaj |

ಬೆಂಗಳೂರು: ಕೇಂದ್ರ ಬಜೆಟ್‌ನಲ್ಲಿ ದೃಷ್ಟಿ ವಿಕಲಚೇತನರಿಗೆ ರೂಪಿಸಲಾಗಿರುವ ಕಲ್ಯಾಣ ಕಾರ್ಯಕ್ರಮಗಳ ಮಾಹಿತಿ ಒದಗಿಸುವ ನಿಟ್ಟಿನಲ್ಲಿ ನಗರದ ಸೇವಾ ಸಂಸ್ಥೆಯೊಂದು ಬ್ರೈಲ್‌ ಲಿಪಿಯಲ್ಲಿ ಬಜೆಟ್‌ನ ಆಯ್ದ ಪುಟಗಳನ್ನೊಳಗೊಂಡ ಪುಸ್ತಕ ಮುದ್ರಿಸಿದೆ.

Advertisement

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಮಂಡಿಸಿದ ಬಜೆಟ್‌ನಲ್ಲಿನ ಕಲ್ಯಾಣ ಕಾರ್ಯಕ್ರಮಗಳು, ದೃಷ್ಟಿ ವಿಕಲಚೇತನರಿಗಾಗಿ ರೂಪಿಸಿರುವ ಯೋಜನೆ, ರೈಲು ಹಾಗೂ ಬಸ್‌ ಪ್ರಯಾಣದಲ್ಲಿನ ರಿಯಾಯಿತಿ ಸೌಲಭ್ಯಗಳು, ಯಾವ ಉಪಕರಣಗಳಿಗೆ ತೆರಿಗೆ ವಿನಾಯಿತಿ, ಯಾವ ವಸ್ತು ದುಬಾರಿ ಎಂಬುದನ್ನು ತಿಳಿಸುವ ಉದ್ದೇಶದಿಂದ ರಾಜ್ಯದಲ್ಲಿಯೇ ಮೊದಲ ಬಾರಿಗೆ ಬ್ರೈಲ್‌ ಲಿಪಿಯಲ್ಲಿ ಬಜೆಟ್‌ ಪುಸ್ತಕ ಪ್ರಕಟಿಸಲಾಗಿದ್ದು, ಭಾನುವಾರ ಬಿಡುಗಡೆಗೊಳ್ಳಲಿದೆ.

ಚಂದ್ರಲೇಔಟ್‌ನಲ್ಲಿರುವ ಸಹನಾ ಅಂಗವಿಕಲರ ಸೇವಾ ಪ್ರತಿಷ್ಠಾನ, “ಕೇಂದ್ರ ಮುಂಗಡ ಪತ್ರದ ಪ್ರಮುಖ ಅಂಶಗಳು 2019-20′ ಎಂಬ ಶೀರ್ಷಿಕೆಯಡಿ 20 ಪ್ರತಿಗಳನ್ನು ಮುದ್ರಿಸಿದ್ದು, ಈ ಪುಸ್ತಕ 19 ಪುಟಗಳನ್ನು ಒಳಗೊಂಡಿದೆ. ಪ್ರಾಥಮಿಕವಾಗಿ ಪ್ರತಿಷ್ಠಾನ ವಸತಿ ನಿಲಯದಲ್ಲಿರುವ ವಿದ್ಯಾರ್ಥಿನಿಯರಿಗೆ ಬ್ರೈಲ್‌ ಬಜೆಟ್‌ ಪುಸ್ತಕ ನೀಡಲಿದೆ. ಒಂದು ಪುಸ್ತಕ ಮುದ್ರಿಸಲು ಸುಮಾರು 100 ರೂ. ವೆಚ್ಚವಾಗಿದ್ದು, ಪ್ರತಿಷ್ಠಾನದ ಐವರು ಸಿಬ್ಬಂದಿ ಐದು ದಿನಗಳಲ್ಲಿ ಮುದ್ರಿಸಿದ್ದಾರೆ.

ಕೇಂದ್ರ ಬಜೆಟ್‌ ಬಗ್ಗೆ ದೃಷ್ಟಿ ವಿಕಲಚೇತನರಿಗೆ ಮಾಹಿತಿ ನೀಡಲು ಯಾರೂ ಮುಂದಾಗುವುದಿಲ್ಲ. ಆದ್ದರಿಂದ ಅವರಿಗಾಗಿ ಏನೆಲ್ಲಾ ಯೋಜನೆಗಳಿವೆ ಎಂಬ ಬಗ್ಗೆ ತಿಳಿಸಲು ಬ್ರೈಲ್‌ ಲಿಪಿಯಲ್ಲಿ ಪ್ರಾಥಮಿಕ ಹಂತದಲ್ಲಿ ಪ್ರಸ್ತಕ ಮುದ್ರಿಸಲಾಗಿದೆ. ನಮ್ಮಲ್ಲಿರುವ ವಿದ್ಯಾರ್ಥಿಗಳಿಗೆ ಬಜೆಟ್‌ ಬಗ್ಗೆ ತಿಳಿಯಲು ಪುಸ್ತಕ ನೆರವಾಗಲಿದೆ ಎನ್ನುತ್ತಾರೆ ಪ್ರತಿಷ್ಠಾನದ ಅಧ್ಯಕ್ಷ ನರಸಿಂಹಯ್ಯ.

ಬ್ರೈಲ್‌ ಪುಸ್ತಕದಲ್ಲಿ ಯಾವ ಮಾಹಿತಿ ಇದೆ?: ಶಿಕ್ಷಣ, ರೈಲ್ವೆ, ಕೃಷಿ ಮತ್ತು ರೈತರ ಕಲ್ಯಾಣ ಯೋಜನೆಗಳು, ಎಂಎಸ್‌ಎಂಇ, ಗ್ರಾಮೀಣ, ಪ್ರಧಾನಮಂತ್ರಿ ಗ್ರಾಮೀಣ ಡಿಜಿಟಲ್‌ ಸಾಕ್ಷಾರತಾ ಅಭಿಯಾನ, ಮಹಿಳಾ ಸಬಲೀಕರಣ, ರಕ್ಷಣೆ, ಆರ್ಥಿಕ ಮತ್ತು ಹಣಕಾಸು, ಬ್ಯಾಂಕಿಂಗ್‌, ತೆರಿಗೆ, ಮೂಲ ಸೌಕರ್ಯಗಳ ಕುರಿತ ಮಾಹಿತಿಯನ್ನು ಪುಸ್ತಕ ಒಳಗೊಂಡಿದೆ.

Advertisement

ಪುಸ್ತಕ ಮುದ್ರಿಸುವುದು ದೃಷ್ಟಿ ವಿಕಲಚೇತನರೇ: ಸಂಸ್ಥೆಯಲ್ಲಿ ಬ್ರೈಲ್‌ ಬೆರಳಚ್ಚು ಯಂತ್ರವಿದ್ದು, ವಿಷಯ ಹೇಳಿದಂತೆ ಟೈಪ್‌ ಮಾಡಬಹುದು. ಹಾಗೇ ಗಣಕೀಕೃತವಾದ ಮುದ್ರಣ ಯಂತ್ರವಿದ್ದು, ವಿನ್‌ ಬ್ರೈಲ್‌ ಬರಹ ಸೇರಿ ಇತ್ಯಾದಿ ತಂತ್ರಾಂಶಗಳನ್ನು ಬಳಸಿ ಪಠ್ಯ ಬ್ರೈಲ್‌ ಲಿಪಿಯಲ್ಲಿ ಮುದ್ರಿಸಬಹುದು.

ಪ್ರಸ್ತುತ 25 ಸಿಬ್ಬಂದಿ ಮುದ್ರಣ ಕೆಲಸ ಮಾಡುತ್ತಿದ್ದು, ಅದರಲ್ಲಿ 17 ದೃಷ್ಟಿ ವಿಕಲಚೇತನರಿದ್ದೇವೆ. ಐಎಎಸ್‌ ವಿದ್ಯಾಭ್ಯಾಸ ಮಾಡುವ ಅಂಧ ಮಕ್ಕಳಿಗೆ ಅಗತ್ಯ ಪುಸ್ತಕಗಳನ್ನು ಬ್ರೈಲ್‌ ಲಿಪಿಯಲ್ಲಿಯೇ ಮುದ್ರಿಸಿ ನೀಡಲಾಗುತ್ತಿದೆ. ಸ್ಪರ್ಧಾತ್ಮಕ ಪರೀಕ್ಷೆಗೆ ಬರೆಯುವವರಿಗೂ ಇದು ಸಹಕಾರಿಯಾಗುತ್ತಿದೆ ಎಂದು ಹೇಳುತ್ತಾರೆ ಪುಸ್ತಕದ ಮುದ್ರಕ ಶಿವಕುಮಾರ್‌.

ಕೇಂದ್ರ ಮುಂಗಡ ಪತ್ರದ ಪ್ರಮುಖ ಅಂಶಗಳು, ನಮಗಿರುವ ಸೌಲಭ್ಯಗಳನ್ನು ಪುಸ್ತಕ ತಿಳಿಸುತ್ತದೆ. ನಾನು ಬಿಕಾಂ ವಿದ್ಯಾಭ್ಯಾಸ ಮಾಡುತ್ತಿದ್ದು, ಕೇಂದ್ರದ ಆರ್ಥಿಕ ನೀತಿಗಳು, ತೆರಿಗೆ ಬಗ್ಗೆ ಹೆಚ್ಚಿನ ಮಾಹಿತಿ ಸಿಕ್ಕಂತಾಗಿದೆ.
-ರೇಣುಕಾ, ವಿದ್ಯಾರ್ಥಿನಿ

* ಮಂಜುನಾಥ್‌ ಗಂಗಾವತಿ

Advertisement

Udayavani is now on Telegram. Click here to join our channel and stay updated with the latest news.

Next