ಕೊರಟಗೆರೆ: ಕೇಂದ್ರ ಸರ್ಕಾರದ 2019ರ ಆಯವ್ಯಯ ಕೇವಲ ಚುನಾವಣಾ ಪ್ರಣಾಳಿಕೆಯಷ್ಟೆ ಹೊರತು ರೈತರು, ಮಧ್ಯಮ ವರ್ಗ ಹಾಗೂ ಬಡವರಿಗೆ ಯಾವುದೇ ಅನುಕೂಲವಾಗುವುದಿಲ್ಲ ಎಂದು ಸಂಸದ ಎಸ್.ಪಿ. ಮುದ್ದಹನುಮೇಗೌಡ ತಿಳಿಸಿದರು.
ಕೊರಟಗೆರೆ ಕ್ಷೇತ್ರದಲ್ಲಿ ಶಾಸಕ ಹಾಗೂ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ರವರ ಅನುದಾನದ 2.5 ಕೋಟಿ ರೂ.ಗಳ ಎಸ್‌ಇಟಿ, ಪಿಎಸ್‌ಟಿ ಯೋಜನೆಯ ಕಾಮಗಾರಿಗಳಿಗೆ ಜಟ್ಟಿ ಅಗ್ರಹಾರ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಚಾಲನೆ ನೀಡಿ ಮಾತನಾಡಿದರು.
ಸೋತ ಮೇಲೆ ಕಾಳಜಿ: ಕೇಂದ್ರದ ಪ್ರಧಾನಿ ಮೋದಿ ಸರ್ಕಾರಕ್ಕೆ ಇತ್ತೀಚೆಗೆ ಪಂಚರಾಜ್ಯಗಳ ಚುನಾವಣೆ ಯಲ್ಲಿ ಸೋತ ಮೇಲೆ ರೈತರ ಹಾಗೂ ಬಡವರ ಬಗ್ಗೆ ಕಾಳಜಿ ಬಂದಿದ್ದು, 2019ರ ಕೇಂದ್ರ ಸರ್ಕಾರದ ಬಜೆಟ್‌ನಲ್ಲಿ ರೈತರಿಗೆ ವರ್ಷಕ್ಕೆ 6 ಸಾವಿರ ರೂ. ಬ್ಯಾಂಕ್ ಖಾತೆಗೆ ಹಾಕುವುದು ಸೇರಿದಂತೆ ಮಧ್ಯಮ ಹಾಗೂ ಬಡವರಿಗೆ ಅನುಕೂಲವಾಗುವ ಯೋಜನೆ ಗಳನ್ನು ಕಣ್ಣೊರೆಸುವ ತಂತ್ರವಾಗಿ ಮಂಡಿಸಿದ್ದಾರೆ.
ಆದರೆ, ಈ ಕೆಲಸವನ್ನು ಕೇಂದ್ರ ಸರ್ಕಾರ 4 ವರ್ಷದ ಹಿಂದೆಯೇ ಬಜೆಟ್‌ನಲ್ಲಿ ಘೋಷಿಸಿದ್ದರೆ ಆ ವರ್ಗದ ಜನರ ಬಗ್ಗೆ ಕಾಳಜಿ ಇರುವುದಾಗಿ ನಂಬಹುದಿತ್ತು. ಆದರೆ, 4 ವರ್ಷಗಳ ಆಯವ್ಯಯದಲ್ಲಿ ಪ್ರಧಾನಿ ಮೋದಿ ಸರ್ಕಾರವು ಉದ್ಯಮಿ ಹಾಗೂ ಶ್ರೀಮಂತರಿಗೆ ಅನುಕೂಲವಾಗುವ ಬಜೆಟ್ ನೀಡಿ ಈಗ ಚುನಾವಣೆ ಸಂದರ್ಭದಲ್ಲಿ ಕೆಳ ವರ್ಗದ ಜನರಿಗೆ ಬಜೆಟ್ ನೀಡಿದ್ದು, ಈ ಆಯವ್ಯಯವು ಜನರಿಗೆ ತಲುವ ಹೊತ್ತಿಗೆ ಚುನಾವಣೆ ಬರಲಿದ್ದು, ಕೇವಲ ಪ್ರಣಾಳಿಕೆಯಾಗಿ ಉಳಿಯಲಿದೆ ಎಂದು ತಿಳಿಸಿದರು.
ಅನುದಾನ: ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಕೊರಟಗೆರೆ ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಯೋಜನೆ ತರುತ್ತಿದ್ದು, ಅವರಿಗೆ ಕ್ಷೇತ್ರದ ಜನರು ಅವರಿಗೆ ನೀಡಿರುವ ಅಧಿಕಾರಕ್ಕೆ ಜನರ ಋಣ ತೀರಿಸುವ ಕೆಲಸವನ್ನು ಪ್ರಮಾಣಿಕವಾಗಿ ಮಾಡುತ್ತಿದ್ದಾರೆ. ಈಗಾಗಲೇ ಕೊರಟಗೆರೆ ಪಟ್ಟಣ ಸೇರಿದಂತೆ ಕ್ಷೇತ್ರದ ಎಲ್ಲಾ ಹೋಬಳಿಗಳಲ್ಲಿ ಮೂಲ ಸೌಕರ್ಯಕ್ಕೆ ಹೆಚ್ಚಿನ ಅನುದಾನ ಹಾಗೂ ಶಾಶ್ವತ ಕಾಮಗಾರಿಗಳಿಗೆ ವಿಶೇಷ ಅನುದಾನ ತರುವ ಕೆಲಸದಲ್ಲಿ ರಾಜ್ಯದ ಜವಾಬ್ದಾರಿಯೊಂದಿಗೆ ಹಗಲಿ ರುಳು ಶ್ರಮಿಸುತ್ತಿದ್ದಾರೆ ಎಂದರು.
ಈ ವೇಳೆ ಜಿಪಂ ಸದಸ್ಯೆ ಅಕ್ಕಮಹಾದೇವಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೊಡ್ಲಹಳ್ಳಿ ಅಶ್ವತ್ಥನಾರಾಯಣ್, ಅರಕೆರೆ ಶಂಕರ್, ಮಾಜಿ ಅಧ್ಯಕ್ಷ ಮೈಲಾರಪ್ಪ, ಮಹಿಳಾ ಅಧ್ಯಕ್ಷೆ ಜಯಮ್ಮ, ಜೆಡಿಎಸ್ ಕಾರ್ಯಾ ಧ್ಯಕ್ಷ ನರಸಿಂಹರಾಜು, ಗ್ರಾಪಂ ಅಧ್ಯಕ್ಷರಾದ ನಂದೀಶ್, ಮಹಿಮಾ, ಸದಸ್ಯರಾದ ಸಂಜೀವ ರಾಯಪ್ಪ, ಸುನಿತಾ, ಪಪಂ ಸದಸ್ಯ ಎ.ಡಿ. ಬಲರಾಮಯ್ಯ, ಲೋಕೋಪಯೋಗಿ ಇಲಾಖೆ ಎಇಇ ಜಗದೀಶ್, ತಾಪಂ ಉಪಾಧ್ಯಕ್ಷ ನರಸಮ್ಮ, ಮಾಜಿ ಸದಸ್ಯರಾದ ಬಸವರಾಜು, ಅಂಜಿನಪ್ಪ, ಮುಖಂಡರಾದ ಮಧುಸೂದನ್, ಮಂಜುಳಾ ರಾಧ್ಯ, ಚೆಲುವರಾಜು ಸೇರಿದಂತೆ ಇನ್ನಿತರರಿದ್ದರು.