ನವದೆಹಲಿ: ಕೇಂದ್ರ ಸರ್ಕಾರ ಪೆಟ್ರೋಲ್, ಡೀಸೆಲ್ ಮೇಲಿನ ಸುಂಕ ಇಳಿಕೆ ಮಾಡಿದ ಹಲವು ರಾಜ್ಯಗಳು ಅದೇ ದಾರಿ ಹಿಡಿದಿವೆ. ಕೇರಳ, ರಾಜ ಸ್ಥಾನ ಬಳಿಕ ಭಾನುವಾರ ಒಡಿಶಾ, ಮಹಾರಾಷ್ಟ್ರ ಸರ್ಕಾರಗಳು ತೆರಿಗೆ ಇಳಿಕೆ ಮಾಡಿವೆ.
ಮಹಾರಾಷ್ಟ್ರ ಸರ್ಕಾರ ಪ್ರತಿ ಲೀಟರ್ ಪೆಟ್ರೋಲ್‌ಗೆ 2.08 ರೂ., ಪ್ರತಿ ಲೀಟರ್ ಡೀಸೆಲ್‌ಗೆ 1.44 ರೂ. ಇಳಿಕೆ ಮಾಡಿ ಆದೇಶ ಹೊರಡಿಸಲಾಗಿದೆ. ಇದರಿಂದಾಗಿ ರಾಜ್ಯ ಸರ್ಕಾರಕ್ಕೆ 2,500 ಕೋಟಿ ರೂ. ನಷ್ಟವಾಗಲಿದೆ ಎಂದು ಎಂವಿಎ ಸರ್ಕಾರ ಹೇಳಿಕೊಂಡಿದೆ. ಒಡಿಶಾದಲ್ಲಿ ಕೂಡ ಪ್ರತಿ ಲೀಟರ್ ಪೆಟ್ರೋಲ್‌ಗೆ 2.23 ರೂ., ಪ್ರತಿ ಲೀಟರ್ ಡೀಸೆಲ್‌ಗೆ 1.36 ರೂ. ಇಳಿಕೆ ಮಾಡಿವೆ.
ಇದೇ ವೇಳೆ, ತೆರಿಗೆ ಇಳಿಕೆ ಅಂಶವನ್ನು ಭಾನುವಾರ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮತ್ತೊಮ್ಮೆ ಸಮರ್ಥಿಸಿಕೊಂಡಿದ್ದಾರೆ ಮತ್ತು ಅದರ ಹೊರೆಯನ್ನು ಕೇಂದ್ರ ಸರ್ಕಾರವೇ ಹೊತ್ತುಕೊಳ್ಳಲಿದೆ ಎಂದು ಟ್ವೀಟ್ ಮಾಡಿದ್ದಾರೆ.
“ಸರ್ಕಾರದ ನಿರ್ಧಾರಕ್ಕೆ ಟೀಕೆ ಮತ್ತು ಹೊಗಳಿಕೆ ಎರಡೂ ಬರಲಿದ್ದು, ಇದರಿಂದ ನಮಗೆ ಲಾಭವೇ ಆಗಲಿದೆ’ ಎಂದು ಬರೆದುಕೊಂಡಿದ್ದಾರೆ. ರಸ್ತೆ ಮತ್ತು ಮೂಲಸೌಕರ್ಯ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ವಿಧಿಸಲಾಗಿರುವ ಸೆಸ್‌ನಲ್ಲಿ ಮಾತ್ರ ಕಡಿಮೆ ಮಾಡಲಾಗಿದೆ. 2021ರ ನವೆಂಬರ್‌ನಲ್ಲಿ ರಸ್ತೆ ಮತ್ತು ಮೂಲಸೌಕರ್ಯ ಸೆಸ್‌ನಲ್ಲಿ ಪ್ರತಿ ಲೀಟರ್‌ಗೆ 5 ರೂ., ಪ್ರತಿ ಲೀಟರ್ ಡೀಸೆಲ್‌ಗೆ 10 ರೂ. ಇಳಿಕೆ ಮಾಡಲಾಗಿತ್ತು ಎಂದು ಸರಣಿ ಟ್ವೀಟ್‌ಗಳಲ್ಲಿ ತಿಳಿಸಿದ್ದಾರೆ.
ಕೇಂದ್ರ ಸರ್ಕಾರ ಶನಿವಾರ ಕೈಗೊಂಡ ನಿರ್ಧಾರದಿಂದಾಗಿ 1 ಲಕ್ಷ ಕೋಟಿ ರೂ. ವೆಚ್ಚವಾಗಲಿದೆ. ಕಳೆದ ವರ್ಷದ ನವೆಂಬರ್‌ನಲ್ಲಿ ಸೆಸ್ ಇಳಿಕೆ ಮಾಡಿದ್ದರಿಂದ ಕೇಂದ್ರದ ಬೊಕ್ಕಸಕ್ಕೆ 1,20,000 ಕೋಟಿ ರೂ. ವೆಚ್ಚವಾಗಲಿದೆ ಎಂದು ಟ್ವೀಟ್‌ನಲ್ಲಿ ವಿತ್ತ ಸಚಿವೆ ತಿಳಿಸಿದ್ದಾರೆ.
ಆಹಾರ ಇಂಧನಕ್ಕೆ ಬಳಕೆ
ಮೋದಿ ಸರ್ಕಾರದಿಂದ 24.85 ಲಕ್ಷ ಕೋಟಿ ರೂ.ಮೊತ್ತವನ್ನು ಆಹಾರ, ಇಂಧನ ಮತ್ತು ರಸಗೊಬ್ಬರ ಸಬ್ಸಿಡಿಗಾಗಿ ಬಳಕೆ ಮಾಡಲಾಗಿದೆ. 26.3 ಲಕ್ಷ ಕೋಟಿ ರೂ. ಮೊತ್ತವನ್ನು ಆಸ್ತಿ ಸೃಷ್ಟಿಗಾಗಿ ಬಳಕೆ ಮಾಡಲಾಗಿದೆ. ಹತ್ತು ವರ್ಷ ಕಾಲದ ಯುಪಿಎ ಅವಧಿಯಲ್ಲಿ ಸಬ್ಸಿಡಿಗಾಗಿ 13.9 ಲಕ್ಷ ಕೋಟಿ ರೂ. ಮೊತ್ತ ಬಳಕೆ ಮಾಡಲಾಗಿತ್ತು ಎಂದು ಕಾಂಗ್ರೆಸ್‌ಗೆ ವಿತ್ತ ಸಚಿವೆ ತಿರುಗೇಟು ನೀಡಿದ್ದಾರೆ.