Advertisement

ಮಹದಾಯಿ ಯೋಜನೆ ಡಿಪಿಆರ್‌ಗೆ ಕೇಂದ್ರದ ಸೂಚನೆ

09:04 AM Jul 28, 2020 | Suhan S |

ಧಾರವಾಡ: ಮಹದಾಯಿ, ಕಳಸಾ-ಬಂಡೂರಿ ನಾಲಾ ಜೋಡಣೆಗೆ ಡಿಪಿಆರ್‌ (ವಿಸ್ಕೃತ ಯೋಜನಾ ವರದಿ ) ಸಲ್ಲಿಸುವಂತೆ ಕೇಂದ್ರ ಸರಕಾರದಿಂದ ರಾಜ್ಯ ಸರಕಾರಕ್ಕೆ ಸೂಚನೆ ಬಂದಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ ಹೇಳಿದರು.

Advertisement

ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹದಾಯಿ ಕುರಿತಂತೆ ಈಗಾಗಲೇ ಗೆಜೆಟ್‌ ನೋಟಿಫಿಕೇಶನ್‌ ಆಗಿದೆ. ಇದರನ್ವಯ ಹೊಸ ಡಿಪಿಆರ್‌ ಸಿದ್ಧಪಡಿಸುವಂತೆ ಕೇಂದ್ರ ಸರ್ಕಾರ ರಾಜ್ಯ ಸರ್ಕಾರಕ್ಕೆ ತಿಳಿಸಿದೆ. ಮಹದಾಯಿ ಅನುಷ್ಠಾನಕ್ಕೆ ಅರಣ್ಯ ಭಾಗದಲ್ಲಿ ಕೆಲಸ ಮಾಡಬೇಕಾದ ಕಾರಣ ಹೊಸ ಡಿಪಿಆರ್‌ ಸಲ್ಲಿಸುವ ಪ್ರಸ್ತಾವನೆ ಸರ್ಕಾರ ಮುಂದಿದೆ. ಈ ನಿಟ್ಟಿನಲ್ಲಿ ರಾಜ್ಯ ನೀರಾವರಿ ಇಲಾಖೆ ಕಾರ್ಯ ನಿರ್ವಹಣೆ ಬಹಳ ಅಗತ್ಯವಿದೆ ಎಂದರು.

ಮಹಾದಾಯಿ, ಎತ್ತಿನಹೊಳೆಯಂಥ ಸಮಸ್ಯೆಗಳನ್ನು ಬಗೆಹರಿಸಲು ಉತ್ಸುಕವಾಗಿದೆ. ಮಹಾದಾಯಿ ಸಂಬಂಧ ಅರಣ್ಯ ಭಾಗದಲ್ಲಿ ಕೆಲಸ ಮಾಡಬೇಕಿರುವುದರಿಂದ ಹೊಸ ಡಿಪಿಆರ್‌ ಪ್ರಸ್ತಾವನೆ ಸಿದ್ಧಪಡಿಸಬೇಕಿದೆ. ಈ ನಿಟ್ಟಿನಲ್ಲಿ ನೀರಾವರಿ ಇಲಾಖೆ ಕ್ರಮ ಕೈಗೊಳ್ಳಲಿದೆ. ರಾಜ್ಯ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ಒಂದು ವರ್ಷ ಕಳೆದಿದೆ. ಬರಗಾಲ, ಪ್ರವಾಹ ಹಾಗೂ ಕೋವಿಡ್ ನಂಥ ಸಂದಿಗ್ಧ ಪರಿಸ್ಥಿತಿಯನ್ನು ಸಿಎಂ ಸಮರ್ಥವಾಗಿ ನಿಭಾಯಿಸಿದ್ದಾರೆ. ಮುಂಬರುವ ಮೂರು ವರ್ಷಗಳಲ್ಲಿ ರಾಜ್ಯದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳಾಗಲಿವೆ ಎಂದರು.

ಕೋವಿಡ್ ಚಿಕಿತ್ಸೆ, ಕಿಟ್‌ ಖರೀದಿ ವಿಷಯ ಮುಂದಿಟ್ಟು ಕಾಂಗ್ರೆಸ್‌ ಜಿಲ್ಲೆ ಹಾಗೂ ರಾಜ್ಯಮಟ್ಟದಲ್ಲಿ ಆರೋಪ ಮಾಡುತ್ತಿದೆ. ಇದನ್ನು ಕೈ ಬಿಟ್ಟು ಜಿಲ್ಲಾಡಳಿತ-ಸರ್ಕಾರದ ಜತೆ ಕೈಜೋಡಿಸಿ, ರಚನಾತ್ಮಕ ಸಲಹೆ-ಸೂಚನೆ ನೀಡಬಹುದಿತ್ತು. ಆದರೆ, ಕೈ ನಾಯಕರು ಸಲಹೆ-ಸೂಚನೆ ಬದಲು ಟೀಕೆ-ಟಿಪ್ಪಣಿಗಳಿಂದ ಕಾಲಹರಣ ಮಾಡುವ ಮೂಲಕ ರಾಜ್ಯದ ಜನರ ದಿ ಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದು, ಇದು ಒಂದು ಜವಾಬ್ದಾರಿಯುತ ಪಕ್ಷಕ್ಕೆ ಶೋಭೆ ತರುವ ಕೆಲಸ ಅಲ್ಲ ಎಂದರು.

ಕಿಟ್‌ ಖರೀದಿಯಲ್ಲಿ ಅವ್ಯಹಾರ ಆಗಿದ್ದರೆ ತನಿಖೆ ಮಾಡಿಸಲು ಸಿದ್ಧ. ಈ ಬಗ್ಗೆ ಧಾರವಾಡ ಜಿಲ್ಲಾಧಿಕಾರಿಗೂ ತನಿಖೆ ಮಾಡಲು ಸೂಚಿಸಲಾಗಿದೆ. ಕೈ ನಾಯಕರು ಆಧಾರ ರಹಿತ ಆರೋಪ ಮಾಡುತ್ತಿದೆ. ಆರಂಭದಲ್ಲಿ ಇಪಿಪಿ ಕಿಟ್‌, ಎನ್‌-95 ಮಾಸ್ಕ್ ನಮ್ಮ ಬಳಿ ಇರಲಿಲ್ಲ. ಅಂದು ದರ ಜಾಸ್ತಿ ಇತ್ತು. ಇಂದು ಉತ್ಪಾದನೆ ಹೆಚ್ಚಳದಿಂದ ದರವೂ ಕಡಿಮೆ ಆಗಿದೆ. ಇದನ್ನೇ ಕಾಂಗ್ರೆಸ್‌ ಪುನರುಚ್ಚರಿಸಿ ಅವ್ಯವಹಾರ ಎಂಬುದು ಸರಿಯಲ್ಲ ಎಂದು ಸ್ಪಷ್ಟಪಡಿಸಿದರು.

Advertisement

ಶಾಸಕರಾದ ಅರವಿಂದ ಬೆಲ್ಲದ, ಶಂಕರ ಪಾಟೀಲ ಮುನೇನಕೊಪ್ಪ, ಅಮೃತ ದೇಸಾಯಿ, ಸಿ.ಎಂ.ನಿಂಬಣ್ಣವರ, ಮುಖ್ಯಮಂತ್ರಿ ರಾಜ್ಯಕೀಯ ಕಾರ್ಯದರ್ಶಿ ಮೋಹನ್‌ ಲಿಂಬಿಕಾಯಿ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next