ನವದೆಹಲಿ: ಇದುವರೆಗೆ 27 ರಾಜ್ಯಗಳ 78 ಸಾವಿರ ಸ್ವಸಹಾಯ ಸಂಘಗಳ ಸದಸ್ಯರು ಒಟ್ಟು 1.96 ಕೋಟಿ ಮಾಸ್ಕ್ ಗಳನ್ನು ತಯಾರಿಸಿಕೊಟ್ಟಿದ್ದಾರೆ. ಕೇಂದ್ರ ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ ಅಗರ್ವಾಲ್ ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿ ನೀಡಿದ್ದಾರೆ.
ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಯೋಜನೆ ಪ್ಯಾಕೇಜ್ ಅನ್ವಯ, ಸುಮಾರು 30 ಸಾವಿರ ಬಡವರಿಗೆ ಏ.10ರವರೆಗೆ 28,256 ಕೋಟಿ ರೂ.ಗಳ ಆರ್ಥಿಕ ನೆರವು ನೀಡಲಾಗಿದೆ. ಪಿಎಂ ಕಿಸಾನ್ ಯೋಜನೆಯನ್ವಯ, 6.93 ಕೋಟಿ ರೈತರಿಗೆ 13,855 ಕೋಟಿ ರೂ. ಮೊತ್ತವನ್ನು ವರ್ಗಾವಣೆ ಮಾಡಲಾಗಿದೆ. ಜತೆಗೆ, ವಿಧವೆಯರು, ಹಿರಿಯ ನಾಗರಿಕರು ಮತ್ತು ದಿವ್ಯಾಂಗರಿಗೂ ಆರ್ಥಿಕ ನೆರವು ಒದಗಿಸಲಾಗಿದೆ ಎಂದೂ ಅಗರ್ವಾಲ್ ಮಾಹಿತಿ ನೀಡಿದ್ದಾರೆ.
ಸಾಧನ-ಸಲಕರಣೆಗಳಿವೆ: ಇನ್ನೂ 6 ದಿನಗಳ ಕಾಲ ಸ್ಯಾಂಪಲ್ ಗಳ ಪರೀಕ್ಷೆ ನಡೆಸಲು ಅಗತ್ಯವಾದ ಎಲ್ಲ ಸಾಧನಗಳೂ ಸರ್ಕಾರದ ಬಳಿಯಿದೆ. ಈವರೆಗೆ ಸುಮಾರು 2 ಲಕ್ಷ ಸ್ಯಾಂಪಲ್ ಗಳನ್ನು ಪರೀಕ್ಷಿಸಲಾಗಿದೆ ಎಂದು ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ ಅಗರ್ವಾಲ್ ತಿಳಿಸಿದ್ದಾರೆ. ಜತೆಗೆ, ಏ.15ರಂದು ಚೀನಾದಿಂದ ಪರೀಕ್ಷಾ ಕಿಟ್‌ಗಳು ಬಂದು ತಲುಪುವ ನಿರೀಕ್ಷೆಯಿದೆ ಎಂದಿದ್ದಾರೆ.
ರೆಮ್ ಡೆಸಿವಿಯರ್ ಪರಿಣಾಮಕಾರಿ?
ಎಬೊಲಾ ವೈರಸ್ ಸೋಂಕಿತರಿಗೆ ನೀಡಲಾಗುವ ಆಂಟಿ-ವೈರಲ್ ಔಷಧವಾದ ರೆಮ್ ಡೆಸಿವಿಯರ್, ಕೋವಿಡ್ ಸೋಂಕಿನ ವಿರುದ್ಧವೂ ಪರಿಣಾಮಕಾರಿಯಾಗಬಹುದು ಎಂದು ಐಸಿಎಂಆರ್‌ನ ಡಾ.ಆರ್.ಆರ್.ಗಂಗಾಖೇಡ್ಕರ್ ಸೋಮವಾರ ಹೇಳಿದ್ದಾರೆ. ಈ ಔಷಧವನ್ನು ಈ ಹಿಂದೆ ಎಬೊಲಾ ವೈರಸ್ ಸೋಂಕಿತ ವ್ಯಕ್ತಿಗಳ ಮೇಲೆ ಪ್ರಯೋಗಿಸಲಾಗಿತ್ತು.
ಜತೆಗೆ ಮರ್ಸ್ ಮತ್ತು ಸಾರ್ಸ್ ಸೋಂಕಿತರ ಮೇಲೂ ಇದು ಸಕಾರಾತ್ಮಕ ಫಲಿತಾಂಶ ನೀಡಿತ್ತು. ಕಳೆದ ತಿಂಗಳು ವಿಶ್ವ ಆರೋಗ್ಯ ಸಂಸ್ಥೆಯು ಈ ಔಷಧವನ್ನು ಕೋವಿಡ್ ಸೋಂಕಿತರ ಮೇಲೆ ಪ್ರಯೋಗ ಮಾಡಿದ್ದು, ವೆಂಟಿಲೇಟರ್ ಅಗತ್ಯವಿದ್ದ ಮೂವರ ಪೈಕಿ ಇಬ್ಬರು ರೋಗಿಗಳಿಗೆ ಇದರಿಂದ ಅನುಕೂಲ ಆಯಿತು ಎಂದೂ ಗಂಗಾಖೇಡ್ಕರ್ ತಿಳಿಸಿದ್ದಾರೆ.