Advertisement

ಮದ್ಯವ್ಯಸನ ಮುಕ್ತರಿಂದ ಶತದಿನೋತ್ಸವ ಆಚರಣೆ 

04:57 PM Jan 18, 2018 | |

ಬೆಳ್ತಂಗಡಿ : ಕ್ಷಣಿಕ ಸುಖ- ಸಂತೋಷಕ್ಕಾಗಿ ಪಂಚೇಂದ್ರಿಯಗಳ ದಾಸರಾಗಬೇಡಿ. ಅವುಗಳ ಯಜಮಾನರಾಗಿ ಪಂಚೇಂದ್ರಿಯಗಳ ನಿಯಂತ್ರಣದೊಂದಿಗೆ ವ್ಯಸನ ಮುಕ್ತರಾಗಿ ಆರೋಗ್ಯಪೂರ್ಣ ಹಾಗೂ ನೆಮ್ಮದಿಯ ಜೀವನ ನಡೆಸಬೇಕು ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಹೇಳಿದರು. 

Advertisement

ಅವರು ಮಂಗಳವಾರ ಧರ್ಮಸ್ಥಳಕ್ಕೆ ಬಂದ ಒಂದು ಸಾವಿರಕ್ಕೂ ಮಿಕ್ಕಿದ ಮದ್ಯ ವ್ಯಸನ ಮುಕ್ತರಾಗಿ ದೇವರ ದರ್ಶನ ಪಡೆದು ಧನ್ಯತೆಯನ್ನು ಹೊಂದಿದ ನವ ಜೀವನ ಸಮಿತಿ ಸದಸ್ಯರನ್ನು ಉದ್ದೇಶಿಸಿ ಮಾತನಾಡಿದರು. ಮದ್ಯವ್ಯಸನ ಮುಕ್ತರಾಗಿ ದೇವರ ದರ್ಶನ ಮಾಡಿದವರೆಲ್ಲ ಪವಿತ್ರಾತ್ಮರಾಗಿದ್ದೀರಿ. ಮುಂದೆ ಸಹವಾಸ ದೋಷ ಅಥವಾ ಯಾವುದೇ ಆಮಿಷಕ್ಕೆ ಒಳಗಾಗದೆ ದೃಢ ಸಂಕಲ್ಪದಿಂದ ಪರಿಶುದ್ಧ ಜೀವನ ನಡೆಸಬೇಕು ಎಂದರು.

ಮದ್ಯ ವ್ಯಸನ ಮುಕ್ತರಾದವರು ಪರಿವರ್ತನೆ ಹೊಂದಿ ಹೊಸ ಮನೆ ನಿರ್ಮಾಣ, ವಾಹನ ಖರೀದಿ, ಉತ್ತಮ ಸಂಪಾದನೆ ಮಾಡಿ ಕುಟುಂಬದವರೊಂದಿಗೆ ಆದರ್ಶ ಜೀವನ ನಡೆಸುತ್ತಿರುವುದನ್ನು ಡಾ| ಹೆಗ್ಗಡೆ ಅವರು ಉದಾಹರಣೆ ಸಹಿತ ವಿವರಿಸಿದರು. ನಿರ್ದೇಶಕ ವಿವೇಕ್‌ ಪಾಯಸ್‌ ಶತದಿನೋತ್ಸವ ಕಾರ್ಯಕ್ರಮದ ಮಹತ್ವ ವಿವರಿಸಿದರು.

ರಾಜ್ಯದ ವಿವಿಧ ಭಾಗಗಳಿಂದ 1,173 ಮದ್ಯ ವ್ಯಸನ ಮುಕ್ತರು ಪಾನ ಮುಕ್ತ ಜೀವನದ ಶತ ದಿನೋತ್ಸವವನ್ನು ಧರ್ಮಸ್ಥಳದಲ್ಲಿ ಆಚರಿಸಿದರು. ಯೋಜನಾಧಿಕಾರಿ ತಿಮ್ಮಯ್ಯ ನಾಯ್ಕ ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿದರು. ಶಿಬಿರಾಧಿಕಾರಿ ಗಣೇಶ್‌ ವಂದಿಸಿದರು. ಶಿಬಿರಾಧಿಕಾರಿಗಳಾದ ಗಣೇಶ್‌ ಆಚಾರ್ಯ, ದೇವಿಪ್ರಸಾದ್‌, ನಂದ ಕುಮಾರ್‌, ಚಿತ್ರಾ, ವಿದ್ಯಾಧರ್‌ ಸಹಕರಿಸಿದರು.

ಪಂಚೇಂದ್ರಿಯಗಳ ಸದುಪಯೋಗ
ಪಂಚೇಂದ್ರಿಯಗಳನ್ನು ಒಳ್ಳೆಯ ಆಚಾರ – ವಿಚಾರಗಳಿಗೆ ಸದುಪಯೋಗ ಮಾಡಬೇಕು. ಮಾನಸಿಕ ದೌರ್ಬಲ್ಯದಿಂದ
ಸಹವಾಸ ದೋಷದಿಂದ ಮತ್ತೆ ಎಂದೂ ಮದ್ಯವ್ಯಸನಕ್ಕೆ ಬಲಿಯಾಗಬಾರದು, ಸೋಲಬಾರದು. ಮನಸ್ಸು ಚಂಚಲವಾಗದಂತೆ ಎಚ್ಚರಿಕೆ ವಹಿಸಬೇಕು.
-ಡಾ| ಡಿ. ವೀರೇಂದ್ರ ಹೆಗ್ಗಡೆ 

Advertisement
Advertisement

Udayavani is now on Telegram. Click here to join our channel and stay updated with the latest news.

Next