Advertisement

Rajyotsava Award 2023 ಶತಾಯುಷಿ ಹುಸೇನಾಬಿ ಸಿದ್ದಿಗೆ ರಾಜ್ಯೋತ್ಸವದ ಗರಿ‌

07:51 PM Oct 31, 2023 | Team Udayavani |

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ತಾಲ್ಲೂಕಿನ ಸಾಂಬ್ರಾಣಿ ಗ್ರಾಮದ ಹುಸೇನಾಬಿಗೆ ಜಾನಪದ ಕ್ಷೇತ್ರಕ್ಕೆ ಸಲ್ಲಿಸಿದ ಸೇವೆಗಾಗಿ ರಾಜ್ಯೋತ್ಸವ ಪ್ರಶಸ್ತಿ ದೊರೆತಿದೆ.

Advertisement

ಹುಸೇನಾಬಿ ಬುಡೇನಸಾಬ್ ಸಿದ್ದಿ ಅವರಿಗೆ ಈಗ 103 ವರ್ಷಗಳಾಗಿವೆ. ಅತ್ಯಂತ ಕ್ರಿಯಾಶೀಲವಾಗಿರುವ ಈ ಕಲಾವಿದೆಗೆ ತಡವಾಗಿಯಾದರೂ ರಾಜ್ಯೋತ್ಸವ ಪ್ರಶಸ್ತಿ ಹುಡುಕಿ ಬಂದಿದೆ. ಇವರ ಶ್ರಮಕ್ಕೆ ಪ್ರತಿಫಲ ದಕ್ಕಿದೆ. ಸಿದ್ದಿ ಮುಸ್ಲಿಂ ಮದುವೆಗಳಲ್ಲಿ ಹಾಡುವ ಸಿದ್ದಿ ಜಾನಪದ ಹಾಡು ಸಿದ್ದನಾಸ ಹಾಡುವಲ್ಲಿ ಈ ಕಲಾವಿದೆ ಅಜ್ಜಿ ಹೆಸರು ಮಾಡಿದ್ದರು.

ನೂರಾರು ಮದುವೆಗಳಲ್ಲಿ, ಸಭೆ ಸಮಾರಂಭಗಳಲ್ಲಿ ಸಿದ್ದಿನಾಸ ಹಾಡಿದ್ದಾರೆ‌. ಸಿದ್ದಿಗಳ ಜಾನಪದ ಕಲೆಯನ್ನು ಉಳಿಸಿದ ಕೀರ್ತಿ ಅವರದ್ದು. ಹಾಗೆ ಸಿದ್ದಿಗಳ ಪ್ರಸಿದ್ಧ , ಜನಪ್ರಿಯ ಡಾಮಾಮಿ ಜಾನಪದ ನೃತ್ಯ ಸಹ ಇವರು ಯೌವ್ವನದ ಕಾಲದಲ್ಲಿ ಮಾಡಿದವರು. ಆ ಕಲೆಯು ತನ್ನ ನಂತರ ಉಳಿಯಬೇಕೆಂದು ಮಕ್ಕಳಿಗೆ ಡಮಾಮಿ ನೃತ್ಯ ಕಲಿಸುವ ಕಾಯಕವನ್ನು ನಿರಂತರ ಮಾಡಿದವರು. ಇದನ್ನು ಗುರುತಿಸಿ ರಾಜ್ಯ ಸರಕಾರ ಹುಸೇನಾಬಿ ಬುಡೇನ್ ಸಾಬ್ ಸಿದ್ದಿಗೆ ರಾಜ್ಯೋತ್ಸವ ಘೋಷಿಸಿದೆ. ಅವರು ಈ ಪ್ರಶಸ್ತಿ ಬಂದಿರುವುದಕ್ಕೆ ಉದಯವಾಣಿ ಜೊತೆ ಮಾತನಾಡಿ, ” ಅನೇಕ ಸಂಘ ಸಂಸ್ಥೆಗಳು ನನಗೆ ಗೌರವಿಸಿ ಸನ್ಮಾನಿಸಿವೆ. ಆದರೆ ರಾಜ್ಯದ ಸಿದ್ದರಾಮಯ್ಯ ಸರ್ಕಾರ ನನ್ನ ಗುರುತಿಸಿ, ಈ ಇಳಿವಯಸ್ಸಿನಲ್ಲಿ ರಾಜ್ಯೋತ್ಸವ ಪ್ರಶಸ್ತಿ ಕೊಟ್ಟಿದೆ. ಇದು ನನಗೆ ಭಾರೀ ಸಂತೋಷ ತಂದಿದೆ ” ಎಂದರು.

ಸಿದ್ದಿ ಸಮುದಾಯ ಮತ್ತು ಜಿಲ್ಲೆಯ ಕಲಾವಿದರಲ್ಲಿ ಹುಸೇನಾಬಿ ಅವರಿಗೆ ಸಂದ ಪ್ರಶಸ್ತಿಗೆ ಅಭಿನಂದನೆಗಳ ಸುರಿಮಳೆಯಾಗಿದೆ. ಹಳ್ಳಿಯ ಮೂಲೆಯಲ್ಲಿದ್ದು, ಪ್ರಶಸ್ತಿಗೆ ಲಾಬಿ ಮಾಡದ ವಯೋವೃದ್ಧರನ್ನು ಸರ್ಕಾರ ಗುರುತಿಸಿದೆ ಎಂಬ ಮಾತು ಕೇಳಿಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next