ದೇವದುರ್ಗ: 188 ಕಂದಾಯ ಗ್ರಾಮಗಳ ವ್ಯಾಪ್ತಿಯಲ್ಲಿ ಸ್ಮಶಾನ ಸಂಕಟ ಎದುರಾಗಿದ್ದು, ಅಂತ್ಯಸಂಸ್ಕಾರಕ್ಕೆ ಅಲೆದಾಡುವ ಸ್ಥಿತಿ ಇದೆ. ತಾಂಡಾ, ದೊಡ್ಡಿಯಲ್ಲಿ ಸ್ಮಶಾನ ಸಮಸ್ಯೆ ಇರುವ ಹಿನ್ನೆಲೆಯಲ್ಲಿ ಅವರವರ ಸ್ವಂತ ಜಮೀನಿನಲ್ಲಿ ಅಂತ್ಯಸಂಸ್ಕಾರ ಮಾಡುವ ಅನಿವಾರ್ಯತೆ ಇದೆ.
ತಾಲೂಕು ವ್ಯಾಪ್ತಿಯಲ್ಲಿ 60ರಿಂದ 70 ಅಧಿಕ ತಾಂಡಾ, ದೊಡ್ಡಿಗಳಿವೆ. ಮಸರಕಲ್ ಗ್ರಾಮದ ಸರ್ವೇ ನಂಬರ್ 4ರಲ್ಲಿ ರುದ್ರಭೂಮಿಗೆ ಕಾಯ್ದಿರಿಸಿದ ಜಾಗದಲ್ಲಿ ಸರಕಾರ ಕಟ್ಟಡಗಳನ್ನು ನಿರ್ಮಿಸಿದ್ದರಿಂದ ಜಾಗ ಒತ್ತುವರಿ ಆಗಿದೆ.
ಸ್ಮಶಾನಭೂಮಿ ಒತ್ತುವರಿ: ಮಸರಕಲ್ ಗ್ರಾಮದ ಸಾರ್ವಜನಿಕ ರುದ್ರಭೂಮಿ ಒತ್ತುವರಿ ಆಗಿದೆ. ಸರ್ವೇ ನಂಬರ್ 4ರಲ್ಲಿರುವ ಸ್ಮಶಾನ ಭೂಮಿ ವಿವಿಧ ಸರಕಾರಿ ಕಟ್ಟಡಗಳ ನಿರ್ಮಾಣಕ್ಕೆ ಒತ್ತುವರಿ ಮಾಡಲಾಗಿದೆ. ಜನವಸತಿ ರಹಿತ ಗ್ರಾಮ: ಕಂದಾಯ ಇಲಾಖೆಯಿಂದ 20 ಹಳ್ಳಿಗಳು ಜನವಸತಿ ರಹಿತ ಗ್ರಾಮಗಳೆಂದು ಗುರುತಿಸಿ ಕಾಯ್ದಿರಿಸಲಾಗಿದೆ. ಅಕ್ಕಪಕ್ಕದ ಹಳ್ಳಿಗಳ ಗ್ರಾಮಸ್ಥರು ಮೃತಪಟ್ಟರೆ ಕಾಯ್ದಿರಿಸಿದ ಜಾಗದಲ್ಲೇ ಅಂತ್ಯಸಂಸ್ಕಾರ ಮಾಡಲು ಅನುಕೂಲ ಕಲ್ಪಿಸಲಾಗಿದೆ.
ಖಾಸಗಿ ಜಮೀನು ಖರೀದಿ: ಸಾರ್ವಜನಿಕ ರುದ್ರಭೂಮಿ ಸೌಲಭ್ಯ ಇಲ್ಲದ ಕಾರಣ ಜಾಗಟಗಲ್, ಅಂಜಳ, ಬುದ್ದಿನ್ನಿ, ಸೂಲದಗುಡ್ಡ, ಬಸ್ಸಪೂರು, ಗಾಜಲದಿನ್ನಿ, ಹಿರೇಕೂಡ್ಲಿಗಿ, ಗೋವಿಂದಪಲ್ಲಿ ಸೇರಿದಂತೆ 27 ಗ್ರಾಮಗಳಲ್ಲಿ ಕಂದಾಯ ಇಲಾಖೆಯಿಂದ ಜಾಗ ಖರೀದಿಸಲಾಗಿದೆ.
ದೊಡ್ಡಿಯಲ್ಲೂ ಸಮಸ್ಯೆ: ಶಂಕರಬಂಡಿ, ಗೋಗೇರದೊಡ್ಡಿ, ಗಾಲೇರದೊಡ್ಡಿ, ಮಟ್ಟಲರದೊಡ್ಡಿ, ಹಳೆ ವೆಂಗಳಪೂರು, ವೆಂಗಳಪೂರು ಸೇರಿದಂತೆ ಹಲವು ದೊಡ್ಡಿಯಲ್ಲಿ ಸಾರ್ವಜನಿಕ ರುದ್ರಭೂಮಿ ಸಮಸ್ಯೆ ಇರುವ ಹಿನ್ನೆಲೆಯಲ್ಲಿ ಅವರವರ ಜಮೀನಿನಲ್ಲೇ ಅಂತ್ಯಸಂಸ್ಕಾರ ಮಾಡಬೇಕಿದೆ.
ದೊಡ್ಡಿಯಲ್ಲಿ ಸಾರ್ವಜನಿಕರ ಸ್ಮಶಾನ ಕೊರತೆ ಹಿನ್ನೆಲೆ ಖರೀದಿಸಲು ವಾರ್ಡ್‌ನ ಸದಸ್ಯರು ಗಮನಕ್ಕೆ ತಂದಿದ್ದಾರೆ. ಸ್ಥಳ ಪರಿಶೀಲನೆ ನಂತರ ಕ್ರಮ ವಹಿಸಲಾಗುತ್ತದೆ.
-ಸಾಬಣ್ಣ ಕಟ್ಟಿಕಾರ್, ಪುರಸಭೆ ಮುಖ್ಯಾಧಿಕಾರಿ
ರುದ್ರಭೂಮಿ ಸಮಸ್ಯೆ ಇರುವ 27 ಗ್ರಾಮಗಳಲ್ಲಿ ಖಾಸಗಿ ವ್ಯಕ್ತಿಯ ಜಮೀನು ಖರೀದಿಸಲಾಗಿದೆ. ಮಸರಕಲ್ ಗ್ರಾಮದ ಸರ್ವೇ ನಂಬರ್ 17 ಸಶ್ಮಾನಕ್ಕೆ ಪ್ರಸ್ತಾವನೆ ಕಳಿಸಲಾಗಿದೆ.
-ಶ್ರೀನಿವಾಸ ಚಾಪಲ್, ತಹಶೀಲ್ದಾರ್
-ನಾಗರಾಜ ತೇಲ್ಕರ್