Advertisement

ಪರಿಶಿಷ್ಟರಿಗೆ ಸ್ಮಶಾನವೇ ಶೌಚಾಲಯ!

12:58 PM Aug 27, 2018 | |

ವಾಡಿ: ಬಯಲು ಶೌಚಮುಕ್ತ ಭಾರತ ಮಾಡಲು ಕೇಂದ್ರ ಸರಕಾರ ಪಣ ತೊಟ್ಟಿದ್ದು, ಸಾರ್ವಜನಿಕರು ವೈಯಕ್ತಿಕ ಶೌಚಾಲಯ ನಿರ್ಮಿಸಿಕೊಳ್ಳಲು ಸಾಕಷ್ಟು ಅನುದಾನ ಬಿಡುಗಡೆಯಾಗಿದೆ. ಆದರೆ, ಈ ಶೌಚದ ಗುಂಡಿಗಳು ದಲಿತರ ಓಣಿಗೆ ಬರದೆ ಕೇವಲ ಕಾಗದದಲ್ಲಿ ಉಳಿದಿದ್ದು, ಸ್ಮಶಾನಗಳ ಜಾಗವೇ ಬಯಲು ಶೌಚಾಲಯಗಳಾಗಿ ಬಳಕೆಯಾಗುವ ಮೂಲಕ ಸ್ವತ್ಛ ಭಾರತ ಯೋಜನೆ ಹಿನ್ನಡೆಗೆ ಕನ್ನಡಿ ಹಿಡಿದಿದೆ.

Advertisement

ಪುರಸಭೆ ವ್ಯಾಪ್ತಿಯ ಅಂಬೇಡ್ಕರ್‌ ಕಾಲೋನಿ, ಜಾಂಬವೀರ ಕಾಲೋನಿ, ಚೌಡೇಶ್ವರ ಕಾಲೋನಿ, ಶಿವರಾಯ ಚೌಕಿ, ಪಿಲಕಮ್ಮ ಏರಿಯಾ, ಭೀಮನಗರ ಸೇರಿದಂತೆ ವಿವಿಧ ಬಡಾವಣೆಗಳಲ್ಲಿ ಬಹಿರ್ದೆಸೆ ಪದ್ಧತಿ ಜೀವಂತವಿದೆ. ಅಧಿಕಾರಿಗಳ ವಿಳಂಬ ಧೋರಣೆಯಿಂದ ಸರಕಾರದ ಶೌಚದ ಗುಂಡಿಗಳು ದಲಿತರ ಮನೆಗಳಿಗೆ ಬರಲು ಹಿಂದೇಟು ಹಾಕುತ್ತಿದ್ದು, ಮಕ್ಕಳು, ಮಹಿಳೆಯರು, ಯುವತಿಯರು ಮತ್ತು ವೃದ್ಧರು ಚೆಂಬು ಹಿಡಿದು ಹೊಲ ಗದ್ದೆಗಳತ್ತ ಹೊರಡುತ್ತಾರೆ.
 
ಅಂಬೇಡ್ಕರ್‌ ಕಾಲೋನಿ ಹೊರ ವಲಯದ ಕುಂದನೂರ ಹಾಗೂ ಚಾಮನೂರು ಗ್ರಾಮಗಳ ರಸ್ತೆಗಳು ಬೆಳಗ್ಗೆ, ಸಂಜೆ ವೇಳೆಯಲ್ಲಿ ಸಾರ್ವಜನಿಕ ಶೌಚಾಲಯಗಳಾಗಿ ಬಳಕೆಯಾಗುತ್ತಿವೆ. ನೈಸರ್ಗಿಕ ಕ್ರಿಯೆ ಪೂರೈಸಿಕೊಳ್ಳಲು ಮಹಿಳೆಯರು ಜಾಂಬವೀರ (ಎಡಗೈ) ಸಮಾಜದ ರುದ್ರಭೂಮಿ ಬಳಕೆ ಮಾಡಿಕೊಳ್ಳುತ್ತಿದ್ದರೆ, ಪುರುಷರು ಚಾಮನೂರ ಮಾರ್ಗದ ರಸ್ತೆ ಮತ್ತು ಹೊಲಗಳನ್ನು ಉಪಯೋಗಿಸುತ್ತಿದ್ದಾರೆ.

ಯುವಕರು ಬಾಟಲಿ ತುಂಬಿಕೊಂಡು ಬೈಕ್‌ ಸವಾರಿ ಹೊರಡುತ್ತಿದ್ದರೆ, ಮಕ್ಕಳು ಚೆಂಬು ಹಿಡಿದುಕೊಂಡು ಸೈಕಲ್‌ ಸವಾರಿ ಹೊರಡುತ್ತಾರೆ. ಇವರ ಮಧ್ಯೆ ವಯೋವೃದ್ಧರ ಕಷ್ಟ ಹೇಳತೀರದು. ಕಳೆದ ಹಲವು ವರ್ಷಗಳಿಂದ ಬಹಿರ್ದೆಸೆ ಪದ್ಧತಿಗೆ ಅಂಟಿಸಿಕೊಂಡು ಬಂದಿರುವ ಬಡಾವಣೆ ನಿವಾಸಿಗಳು, ವೈಯಕ್ತಿಕ ಶೌಚಾಲಯದ ಅಗತ್ಯತೆ ಅರಿಯುವಲ್ಲಿ ವಿಫಲರಾಗಿದ್ದಾರೆ. ಅನೇಕ ಜನರ ಮನೆಗಳಲ್ಲಿ ಶೌಚಾಲಯ ಸೌಲಭ್ಯ ಇದ್ದರೂ ಬಯಲು ಜಾಗ ಬಳಕೆ ಮಾಡುತ್ತಿದ್ದಾರೆ ಎನ್ನುವ ಆರೋಪ ಪುರಸಭೆ ಅಧಿ ಕಾರಿಗಳು ಮತ್ತು ಚುನಾಯಿತ ವಾರ್ಡ್‌ ಸದಸ್ಯರುಗಳಿಂದ ಕೇಳಿ ಬಂದಿದೆ. ಅಂಬೇಡ್ಕರ್‌ ಕಾಲೋನಿಯ ಸಾರ್ವಜನಿಕ
ಶೌಚಾಲಯ ಕಳೆದ ಐದಾರು ವರ್ಷಗಳಿಂದ ಬೀಗ ಹಾಕಿಕೊಂಡಿರುವುದು ಸಮಸ್ಯೆಗೆ ಕಾರಣವಾಗಿದೆ ಎನ್ನಬಹುದು. ಒಟ್ಟಾರೆ ಪಟ್ಟಣದ ನಾಗರಿಕರಿಗೆ ಆರೋಗ್ಯ ರಕ್ಷಣೆ ಹಾಗೂ ವೈಯಕ್ತಿಕ ಶೌಚಾಲಯದ ಅರಿವು ಮೂಡದಿರುವುದು ಅನಾಗರಿಕ ಪದ್ಧತಿ ಜೀವಂತಿಕೆಗೆ ಕಾರಣವಾಗಿದೆ ವೈಯಕ್ತಿಕ ಶೌಚಾಲಯ ನಿರ್ಮಿಸಿಕೊಳ್ಳಲು ಹಣದ ಕೊರತೆಯಿಲ್ಲ. ಅಕ್ಟೋಬರ್‌ ಒಳಗಾಗಿ ಕಲಬುರಗಿಯನ್ನು ಬಯಲು ಶೌಚಮುಕ್ತ ಜಿಲ್ಲೆಯನ್ನಾಗಿ ಮಾಡುವ ಗುರಿ ಹೊಂದಲಾಗಿದೆ. ಸಾರ್ವಜನಿಕವಾಗಿ ಜಾಗೃತಿ ಮೂಡಿಸಲಾಗಿದೆ.

ಶೌಚಾಲಯ ಬೇಡಿಕೆಗಾಗಿ ಈಗಾಗಲೇ 1637 ಅರ್ಜಿಗಳು ಬಂದಿವೆ. 475 ವೈಯಕ್ತಿಕ ಶೌಚಾಲಯ ನಿರ್ಮಿಸಲಾಗಿದೆ. 106 ಶೌಚಾಲಯಗಳು ನಿರ್ಮಾಣ ಹಂತದಲ್ಲಿವೆ. ದಲಿತರ ಬಡಾವಣೆಗಳಿಗೂ ಶೌಚಾಲಯ ಗುಂಡಿಗಳು ತಲುಪಿವೆ. ಇನ್ನಷ್ಟು ವೇಗವಾಗಿ ಯೋಜನೆ ಜಾರಿಗೆ ತರಲು ಪ್ರಯತ್ನಿಸುತ್ತಿದ್ದೇವೆ. ಟೆಂಡರ್‌ ಪ್ರಕ್ರಿಯೆ ಮುಗಿದಿದ್ದು, ಕೆಲಸ ಶುರುವಾಗಲಿದೆ. ವಿವಿಧ ಬಡಾವಣೆಗಳಲ್ಲಿ ಮನೆ ಮನೆಗೆ ಹೋಗಿ ಹೇಳಿದರೂ ಅರ್ಜಿಗಳು ಬರುತ್ತಿಲ್ಲ. 
 ಮಲ್ಲೇಶ ಅಕ್ಕರಕಿ, ಪುರಸಭೆ ಮುಖ್ಯಾಧಿಕಾರಿ

ಅಧಿಕಾರಿಗಳ ಬೇಜವಾಬ್ದಾರಿಯಿಂದ ವೈಯಕ್ತಿಕ ಶೌಚಾಲಯದ ಕಾಮಗಾರಿ ಕುಂಟುತ್ತ ಸಾಗಿದೆ. ದಲಿತ ಬಡಾವಣೆಯಲ್ಲಿ ಬಹುತೇಕ ಮನೆಗಳಿಗೆ ವೈಯಕ್ತಿಕ ಶೌಚಾಲಯ ಸೌಲಭ್ಯವಿಲ್ಲ. ಸಾರ್ವಜನಿಕ ಶೌಚಾಲಯ ನಿರ್ಮಿಸಿ ಎಂಟು ವರ್ಷಗಳಾಗಿವೆ. ಅದನ್ನು ಬಳಕೆಗೆ ತೆರೆದಿಡಲಾಗಿಲ್ಲ. ಸಾರ್ವಜನಿಕವಾಗಿ ಜಾಗೃತಿ ಮೂಡಿಸುವಲ್ಲಿ ಪುರಸಭೆ ಆಡಳಿತ ವಿಫಲವಾಗಿದೆ. ನಮ್ಮ ಬಡಾವಣೆಯಲ್ಲಿ ಶೇ. 50ರಷ್ಟು ಜನರು ಬಯಲು ಶೌಚಾಲಯ ಬಳಕೆ ಮಾಡುತ್ತಿದ್ದಾರೆ. ತಂಬಿಗೆ ಹಿಡಿದು ದೂರದ ಬಯಲಿಗೆ ಹೋಗಲು ವಯಸ್ಸಾದವರು ತೊಂದರೆ ಅನುಭವಿಸುತ್ತಿದ್ದಾರೆ. ಯುವತಿಯರು ಮುಜುಗರ ಪಡುತ್ತಿದ್ದಾರೆ. ಈ ಕುರಿತು ಅನೇಕ ಸಲ ಹೋರಾಟ ಮಾಡಿದರೂ ಅಧಿಕಾರಿಗಳು ಎಚ್ಚೆತ್ತುಕೊಂಡಿಲ್ಲ.
 ರವಿ ಎಸ್‌.ಬಡಿಗೇರ, ಕರಾದಸಂಸ ಸಂಚಾಲಕ

Advertisement
Advertisement

Udayavani is now on Telegram. Click here to join our channel and stay updated with the latest news.

Next