ಬಂಗಾರಪೇಟೆ: ಪಟ್ಟಣದ ಪ್ರವಾಸಿ ಮಂದಿರದಲ್ಲಿ ತಹಶೀಲ್ದಾರ್ ಚಂದ್ರಮೌಳೇಶ್ವರ್ ಅಧ್ಯಕ್ಷತೆಯಲ್ಲಿ ಹೂವರಸನಹಳ್ಳಿಯ ಸರ್ಕಾರಿ ಖರಾಬು ಜಮೀನು, ಸ್ಮಶಾನ, ರಸ್ತೆ ಒತ್ತುವರಿ ತೆರವುಗೊಳಿಸಲು ಸಹಕಾರ ಮತ್ತು ಸಲಹೆ ನೀಡಲು ಗ್ರಾಮಸ್ಥರ ಸಭೆ ನಡೆಯಿತು. ಸಭೆಯಲ್ಲಿ ಮಾತನಾಡಿದ ಜನಾಧಿಕಾರ ಸಂಘಟನೆಯ ಜಿಲ್ಲಾ ಹಿರಿಯ ಮುಖಂಡ ಹೂವರಸನಹಳ್ಳಿ ರಾಜಪ್ಪ, ತಾಲೂಕಿನ ಬಹುತೇಕ ಗ್ರಾಮಗಳಲ್ಲಿನ ದಶಕಗಳ ಒತ್ತುವರಿ ಸಮಸ್ಯೆಗಳನ್ನು ಬಗೆಹರಿಸುವಂತೆ ತಹಶೀಲ್ದಾರ್ ಅವರಲ್ಲಿ ಮನವಿ ಮಾಡಿದರು.
ಹೂವರಸನಹಳ್ಳಿ ಗ್ರಾಮದ ರಸ್ತೆ ಪಕ್ಕದಲ್ಲಿ ಕೊಳವೆಬಾವಿ ಕೊರೆಸಲು ವಿರೋಧಿಸಿದವರ ಮನವೊಲಿಸಿ ಕುಡಿಯುವನೀರಿನ ಕೊಳವೆಬಾವಿ ಕೊರೆಯುವಂತೆ ಮಾಡುವಲ್ಲಿ ತಹಶೀಲ್ದಾರರು ಯಶಸ್ವಿಯಾಗಿದ್ದಾರೆ ಎಂದು ತಿಳಿಸಿದರು.
ತಹಶೀಲ್ದಾರ್ ಕೆ.ಬಿ.ಚಂದ್ರಮೌಳೇಶ್ವರ್ ಮಾತನಾಡಿ, ಅಧಿಕಾರಿಗಳು ಇರುವುದೇ ಅಭಿವೃದಿ ಕೆಲಸ ಮಾಡಲು ಮತ್ತು ಸಮಸ್ಯೆಗಳನ್ನು ಬಗೆಹರಿಸಲು. ಅವರ ಬಳಿ ಜನ ನೈಜ ಸಮಸ್ಯೆಗಳನ್ನು ವಿವರಿಸಬೇಕು. ಅಧಿಕಾರಿಗಳಿಗೆ ಅನೇಕ ರೀತಿಯ ಒತ್ತಡಗಳಿರುತ್ತವೆ. ಆದ ಕಾರಣ ಕೆಲಸಗಳು ಆಗುವುದು ತಡವಾ ದರೆ ತಾಳ್ಮೆಯಿಂದ ಕಾದು ಸಹಕರಿಸುವ ಅಭ್ಯಾಸ ಮಾಡಿಕೊಳ್ಳಿ ಎಂದು ಗ್ರಾಮಸ್ಥರಲ್ಲಿ ಮನವಿ ಮಾಡಿದರು.
ಒತ್ತುವರಿ ತೆರವಿನ ವೇಳೆ ಸ್ವಲ್ಪ ವ್ಯತ್ಯಾಸಗಳಾಗುವುದು ಸಹಜ. ಅಧಿಕಾರಿಗಳಿಗೆ ಗ್ರಾಮಸ್ಥರು ಸಹಕಾರ ನೀಡಬೇಕು ಎಂದರು. ಸಭೆಯ ನಂತರ ಅಲ್ಲಿಂದ ಗ್ರಾಮಕ್ಕೆ ಭೇಟಿ ನೀಡಿ ಸರ್ವೇ ಅಧಿಕಾರಿಗಳೊಂದಿಗೆ ಗ್ರಾಮದ ಸ್ಮಶಾನ ಮತ್ತು ರಸ್ತೆ ಒತ್ತುವರಿ ತೆರವುಗೊಳಿಸಲಾಯಿತು. ಮುಖಂಡರಾದವೆಂಕಟೇಶಪ್ಪ, ಗ್ರಾಪಂ ಮಾಜಿ ಸದಸ್ಯ ಮುರುಗ, ಯುವ ಮುಖಂಡ ಮಂಜುನಾಥ್, ರವಿ, ಹೂವರಸನಹಳ್ಳಿ ಚಂದ್ರು, ಅಬ್ಬಯ್ಯಪ್ಪ ಮೊದಲಾದವರಿದ್ದರು.