ಆಲಮಟ್ಟಿ: ಈ ಭಾಗದ ಆರಾಧ್ಯ ದೈವ ಸಾಕ್ಷಾತ್ ಚಾಮುಂಡೇಶ್ವರಿ ಅವತಾರವೆಂದೇ ಖ್ಯಾತಿವೆತ್ತ ಚಂದ್ರಮ್ಮದೇವಿ ಜಾತ್ರಾ ಮಹೋತ್ಸವ ಮೂರು ದಿನ ವಿಜೃಂಭಣೆಯಿಂದ ನಡೆಯಿತು.
ಗುರುವಾರದಿಂದ ಆರಂಭಗೊಂಡಿದ್ದ ಜಾತ್ರಾ ಮಹೋತ್ಸವದಲ್ಲಿ ಮಹಾರಾಷ್ಟ್ರ, ಆಂಧ್ರಪ್ರದೇಶ ಹಾಗೂ ರಾಜ್ಯದ ವಿವಿಧ ಭಾಗಗಳಿಂದ ಸಾವಿರಾರು ಭಕ್ತರು ಜಾತಿ, ಮತ, ಪಂಥ ಭೇದವಿಲ್ಲದೇ ಸರ್ವಧರ್ಮೀಯರೂ ಭಾಗವಹಿಸಿದ್ದರು. ಸಹಸ್ರಾರು ಭಕ್ತರು ಕೃಷ್ಣೆಯಲ್ಲಿ ಮಿಂದೆದ್ದು ಸಾಲಾಗಿ ನಿಂತು ದೇವಿ ದರ್ಶನ ಪಡೆದು ಪುನೀತರಾದರು.
ಚಂದ್ರಮ್ಮ ದೇವಿ ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುತ್ತಾಳೆಂಬ ನಂಬಿಕೆಯಿಂದ ಪ್ರತಿ ವರ್ಷವೂ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿರುವ ಭಕ್ತರು ತಮಗೆ ಸಂತಾನಭಾಗ್ಯ, ಆರೋಗ್ಯ, ಕೌಟುಂಬಿಕ ಸಮಸ್ಯೆಗಳನ್ನು ತಮ್ಮ ಮನದಲ್ಲಿಯೇ ಬಗೆಹರಿಸುವಂತೆ ದೇವಿಯ ಕುರಿತು ಪ್ರಾರ್ಥಿಸಿದರೆ ಸಮಸ್ಯೆಗಳು ಪರಿಹಾರವಾಗುತ್ತವೆ ಎಂಬ ನಂಬಿಕೆಯಿದೆ. ಆದ್ದರಿಂದ ನಮ್ಮ ಕುಟುಂಬದ ಸದಸ್ಯರೊಂದಿಗೆ ಆಗಮಿಸುತ್ತಿದ್ದೇನೆ ಎನ್ನುತ್ತಾರೆ ಮಹಾರಾಷ್ಟ್ರದ ಸಂಭಾಜಿ.
ಮನಸೋತ ಮಕ್ಕಳು: ಜಾತ್ರೆಯಲ್ಲಿ ವಿಶೇಷವಾಗಿ ಅಲಂಕರಿಸಿ ಎತ್ತರವಾಗಿ ಅಳವಡಿಸಿದ್ದ ಜಂಪಿಂಗ್ ಸ್ಟ್ಯಾಂಡ್, ಚಕ್ರ, ತೊಟ್ಟಿಲು, ಪುಟಾಣಿ ರೈಲು, ಜಾರುಬಂಡಿ ಸೇರಿದಂತೆ ಮನೋರಂಜನೆಗಾಗಿಯೇ ಆಗಮಿಸಿದ್ದ ವಿವಿಧ ಪರಿಕರಗಳಲ್ಲಿ ಮಕ್ಕಳು ಕುಳಿತು ಸಂಭ್ರಮಿಸುತ್ತಿದ್ದರೆ ಅವರ ಪಾಲಕರು ಮಕ್ಕಳ ಸಂಭ್ರಮವನ್ನು ಕಣ್ತುಂಬಿಕೊಂಡು ಸಂಭ್ರಮಿಸಿದರು.
ಭರ್ಜರಿ ವ್ಯಾಪಾರ: ಬುಧವಾರ ಸಂಜೆಯಿಂದಲೇ ಆಗಮಿಸಿದ್ದ ಮಿಠಾಯಿ ಅಂಗಡಿಕಾರರು, ಬಳೆ ವ್ಯಾಪಾರಿಗಳು, ವಿವಿಧ ಖಾದ್ಯಗಳ ಹೋಟೆಲ್, ಕಬ್ಬಿನ ರಸ ತೆಗೆಯುವ ಯಂತ್ರಗಳ ವಾಹನಗಳು, ಹಲವಾರು ಬಗೆಯ ಐಸ್ಕ್ರೀಂ, ಕಲ್ಲಂಗಡಿ, ಕರಬೂಜ, ರೈತರಿಗೆ ಅವಶ್ಯವಾಗಿರುವ ಕೃಷಿ ಸಲಕರಣೆಗಳು, ಹಣ್ಣು ಕಾಯಿ, ಹೂವು, ಕಡು ಬಡವರಿಗೂ ಕೈಗೆಟಕುವ ದರದಲ್ಲಿ ಚೀನಿ ಮಣ್ಣಿನ ಕಪ್ಪು (ಪಿಂಗಾಣಿ), ಗಡಿಗೆ, ಮಡಿಕೆ, ಉಪ್ಪಿನಕಾಯಿ ಹಾಕುವ ಭರಣಿ, ಗೋಡೆ ಗಡಿಯಾರ, ಕೈಗಡಿಯಾರ ಸೇರಿದಂತೆ ನೂರಾರು ಬಗೆಯ ಅಂಗಡಿಗಳಲ್ಲಿ ಮೂರು ದಿನಗಳ ಕಾಲ ವ್ಯಾಪಾರ ಜೋರಾಗಿತ್ತು.
ದೇವಿ ದರ್ಶನಕ್ಕೆ ಆಗಮಿಸಿದ್ದ ಭಕ್ತರು ಕೇವಲ ಫಳಹಾರ ಖರೀದಿಸದೇ ಬಿದಿರಿನಿಂದ ತಯಾರಿಸಿದ ವಸ್ತುಗಳನ್ನು ಹಾಗೂ ಕುಂಕುಮ ಭಂಡಾರ ಖರೀದಿಯಲ್ಲಿ ತೊಡಗಿದ್ದರು.
ಲಂಬಾಣಿ ಉಡುಪಿಗೆ ಫಿದಾ: ಕಳೆದ ಮೂರು ದಿನಗಳಿಂದ ಚಂದ್ರಮ್ಮದೇವಿ ದರ್ಶನಕ್ಕೆ ಆಗಮಿಸುತ್ತಿರುವ ಲಂಬಾಣಿ ಮಹಿಳೆಯರು ದೇವಿ ದರ್ಶನ ಪಡೆದು ಬಾಗಲಕೋಟೆ ಹಾಗೂ ಇಳಕಲ್ಲಿನಿಂದ ಆಗಮಿಸಿದ್ದ ಲಂಬಾಣಿ ಉಡುಪುಗಳ ವ್ಯಾಪಾರಿಗಳಿಟ್ಟಿದ್ದ ಉಡುಪು ಪ್ರದರ್ಶನದಲ್ಲಿ ತಾ ಮುಂದು ನಾ ಮುಂದು ಖರೀದಿಯಲ್ಲಿ ತೊಡಗಿದ್ದರು.
ಭಕ್ತಿಗೆ ಬರವಿಲ್ಲ: ಇತ್ತೀಚೆಗೆ ರಾಜ್ಯದಲ್ಲಿ ಬರದ ಕರಾಳ ಛಾಯೆ ಆವರಿಸುತ್ತಿದ್ದರೂ ಕೂಡ ಭಕ್ತರು ಮಾತ್ರ ಪ್ರತಿ ವರ್ಷವೂ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ರಾಜ್ಯದಲ್ಲಿ ಸಮರ್ಪಕ ಮಳೆಗಾಲವಿಲ್ಲದೇ ಬೆಳೆಯಿಲ್ಲದೇ ಬರಗಾಲಕ್ಕೆ ತುತ್ತಾಗಿದ್ದರೂ ಕೂಡ ಭಕ್ತಿಗೆ ಬರವಿಲ್ಲ ಎನ್ನುವುದನ್ನು ತೋರಿದ್ದಾರೆ.