ಶಹಾಪುರ: ಪುರಾಣ, ಪುಣ್ಯಕಥೆ, ಧಾರ್ಮಿಕ ಕಾರ್ಯಕ್ರಮ ಸೇರಿದಂತೆ ಜಾತ್ರೆಗಳು, ಸಾಂಸ್ಕೃತಿಕ ಉತ್ಸವಗಳು ಮತ್ತು ಮನರಂಜನೆ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದು ಅಗತ್ಯವಿದೆ ಎಂದು ಫಕೀರೇಶ್ವರ ಮಠದ ಗುರುಪಾದ ಶ್ರೀಗಳು ಹೇಳಿದರು.
ನಗರದ ಆರಬೋಳ ಕಲ್ಯಾಣ ಮಂಟಪದಲ್ಲಿ ನವರಾತ್ರಿ ಅಂಗವಾಗಿ ಇಲ್ಲಿನ ಹ್ಯಾಪಿ ಕ್ಲಬ್ ಆಯೋಜಿಸಿದ್ದ ದಾಂಡಿಯ ಉತ್ಸವ ಉದ್ಘಾಟಿಸಿ ಅವರು ಮಾತನಾಡಿದರು.
ನವರಾತ್ರಿಯಲ್ಲಿ ದೇವಿ ಆರಾಧನಾ ಬಹು ಮುಖ್ಯವಾಗಿದೆ. ಸಾಂಪ್ರದಾಯಿಕ ಆರಾಧನೆ ಮಾಡುವವರು ಮನೆಯ ಜಗುಲಿ ಮೇಲೆ ಘಟ ಸ್ಥಾಪನೆ ಮಾಡುವ ಮೂಲಕ 9 ದಿನಗಳವರೆಗೂ ದೀಪರಾಧನೆ ಸಲ್ಲಿಸುವ ಮೂಲಕ ನಿತ್ಯ ಪೂಜೆ ಸಲ್ಲಿಸುತ್ತಾರೆ. ಮೈಸೂರಲ್ಲಿ ದಸಾರವನ್ನು ನಾಡ ಹಬ್ಬವಾಗಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ನಾಡಿನ ಜನತೆಗೆ ವಿಭಿನ್ನ ಮನರಂಜನೆ ಜೊತೆಗೆ ನಾಡಿನ ಹಲವು ಜಾನಪದ ಕಲೆಗಳಿಗೆ ಪ್ರೋತ್ಸಾಹಿಸುವ ಕೆಲಸ ಮಾಡಲಾಗುತ್ತದೆ ಎಂದು ತಿಳಿಸಿದರು.
ಚರಬಸವೇಶ್ವರ ಗದ್ದುಗೆಯ ಬಸಯ್ಯ ಶರಣರು, ಅಧ್ಯಕ್ಷತೆ ವಹಿಸಿದ್ದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರ ಆರಬೋಳ ಮಾತನಾಡಿದರು. ಮುಖಂಡ ಸುರೇಂದ್ರ ಪಾಟೀಲ್, ದಿನೇಶ ಜೈನ್, ಮನೋಹರ ಜೈನ್, ಗುರು ಮಣಿಕಂಠ, ಸಿದ್ದು ಆರಬೋಳ, ಮಲ್ಲಿಕಾರ್ಜುನ ಆಲೂರ, ಶ್ರೀಕಾಂತ ಉಪಸ್ಥಿತರಿದ್ದರು. ಮಹಿಳೆಯರು, ಯುವಕ, ಯುವತಿಯರು ಮತ್ತು ಮಕ್ಕಳು ಪ್ರಮುಖವಾಗಿ ಜೋಡಿಗಳು ಡಿಜೆ ಸಂಗೀತಕ್ಕೆ ತಕ್ಕ ನೃತ್ಯ, ಕೋಲಾಟ ಹೆಜ್ಜೆ ಹಾಕಿ ಆನಂದಿಸಿದರು. ಸರ್ವರಿಗೂ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.