Advertisement

ಒಗ್ಗೂಡಿ ಹಬ್ಬ ಆಚರಿಸಿ

04:08 PM Oct 14, 2018 | Team Udayavani |

ದಾವಣಗೆರೆ: ಯಾವುದೇ ರೀತಿಯ ವದಂತಿಗಳಿಗೆ ಕಿವಿಗೊಡದೇ ನಗರದ ಎಲ್ಲಾ ಜನರು ಶಾಂತಿ, ಸೌಹಾರ್ದತೆಯಿಂದ ವಿಜಯದಶಮಿ ಹಬ್ಬ ಆಚರಣೆಗೆ ಸಹಕರಿಸಬೇಕು ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಆರ್‌. ಚೇತನ್‌ ಮನವಿ ಮಾಡಿದ್ದಾರೆ.

Advertisement

ವಿಜಯದಶಮಿ ಶೋಭಾಯಾತ್ರೆ ನಿಮಿತ್ತ ಶನಿವಾರ ತಮ್ಮ ಕಚೇರಿ ಸಭಾಂಗಣದಲ್ಲಿ ಆಯೋಜಸಿದ್ದ ನಾಗರಿಕ ಸೌಹಾರ್ದ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಹಿರಿಯರು ಹಿಂದಿನ ತಲೆಮಾರಿನಿಂದಲೂ ಎಲ್ಲಾ ಧರ್ಮದ ಹಬ್ಬಗಳನ್ನು ಐಕ್ಯತಾ ಭಾವದಿಂದ ಆಚರಿಸಿಕೊಂಡು ಬಂದಿದ್ದಾರೆ. ಅಂತಹ ಹಬ್ಬದ ಆಚರಣೆ, ಸಂಪ್ರದಾಯ, ಸಂಸ್ಕೃತಿಯನ್ನು
ಪ್ರಜ್ಞಾವಂತ ನಾಗರಿಕರು ಸಹ ಒಳ್ಳೆಯತನದಿಂದ ಮುಂದುವರಿಸಿಕೊಂಡು ಹೋಗಬೇಕಿದೆ ಎಂದರು.

ದುಷ್ಟರ ಸಂಹಾರ, ಶಿಷ್ಟರ ರಕ್ಷಣೆ ನಿಟ್ಟಿನ ನವರಾತ್ರಿ ಹಬ್ಬ ವೈಶಿಷ್ಟ್ಯಪೂರ್ಣವಾದದ್ದು. ಇಂತಹ ಹಬ್ಬವನ್ನು ಒಳ್ಳೆಯ ಮನಸ್ಸಿನಿಂದ ಯಾವುದೇ ಜಾತಿ, ಭೇದ-ಭಾವ ಮಾಡದೇ ಒಗ್ಗೂಡಿ ಎಲ್ಲಾ ಸಮಾಜದವರು ಆಚರಣೆ ಮಾಡಬೇಕು. ಆ ಮೂಲಕ ಹಬ್ಬದ ಶ್ರೇಷ್ಠತೆ ಎತ್ತಿಹಿಡಿಯುವ ಮೂಲಕ ಸಮಾಜದಲ್ಲಿ ಶಾಂತಿಯುತ ವಾತಾವರಣ ನಿರ್ಮಾಣಕ್ಕೆ ಸಹಕಾರ ನೀಡಬೇಕು ಎಂದು ಹೇಳಿದರು.

ಹಿಂದೂ ಸಂಘಟನೆಯ ಮುಖಂಡ ಶಂಕರನಾರಾಯಣ ಮಾತನಾಡಿ, ಪ್ರತೀ ವರ್ಷದಂತೆ ಈ ವರ್ಷವೂ ಸಾರ್ವಜನಿಕ ವಿಜಯದಶಮಿ ಮಹೋತ್ಸವ ಸಮಿತಿಯಿಂದ ಅದ್ಧೂರಿಯಾಗಿ ಅ. 19ರಂದು ನಗರದ ಪ್ರಮುಖ ಬೀದಿಗಳಲ್ಲಿ ದಸರಾ ಹಬ್ಬದ ನಿಮಿತ್ತ ಶೋಭಾಯಾತ್ರೆ ಹಮ್ಮಿಕೊಳ್ಳಲಾಗಿದೆ. ಅಂದು ಬೇತೂರು ರಸ್ತೆಯ ಶ್ರೀ ವೆಂಕಟೇಶ್ವರ ವೃತ್ತದಿಂದ ಬೆಳಿಗ್ಗೆ 11.30ಕ್ಕೆ ಶೋಭಾಯಾತ್ರೆ ಆರಂಭ ಆಗಲಿದೆ. ಪ್ರಮುಖ ಬೀದಿಗಳಲ್ಲಿ ಶೋಭಾಯಾತ್ರೆ ಸಂಚರಿಸಲಿದೆ. ರಸ್ತೆ ಕಾಮಗಾರಿ ಇರುವ ಹಿನ್ನೆಲೆ ಕೆಲವು ಮಾರ್ಗಗಳ ಬದಲಾವಣೆ ಕೂಡ ಮಾಡಲಾಗಿದೆ ಎಂದು ತಿಳಿಸಿದರು.

ದಾವಣಗೆರೆಯಲ್ಲಿ ಮುಸ್ಲಿಂ-ಹಿಂದೂಗಳಲ್ಲಿ ಸಾಮರಸ್ಯದ ಭಾವನೆಯಿದೆ. ಹಾಗಾಗಿ ಇಲ್ಲಿ ಯಾವುದೇ ಗಲಾಟೆ, ಗದ್ದಲ ನಡೆಯುತ್ತಿಲ್ಲ. ಪರಸ್ಪರ ಎಲ್ಲರೂ ಸಹೋದರರಂತೆ ಒಗ್ಗಟ್ಟಿನಿಂದ ತಮ್ಮ ತಮ್ಮ ಹಬ್ಬಗಳನ್ನು ಆಚರಿಸುತ್ತಿರುವುದೇ ಶಾಂತಿಯುತ ವಾತವರಣಕ್ಕೆ ಮೂಲ ಕಾರಣ ಎಂದರಲ್ಲದೆ, ಶೋಭಾಯಾತ್ರೆಗೆ ಯಾವ ಸಮಾಜದವರು ಕೂಡ ಪಾನಮತ್ತರಾಗಿ ಬರಬೇಡಿ. ಇದರಿಂದ ಆಚರಣೆ ಭಂಗ ತಂದಂತಾಗುತ್ತದೆ ಎಂದು ಕೋರಿದರು.

Advertisement

ಮುಸ್ಲಿಂ ಸಮಾಜದ ಮುಖಂಡ ಸಾದಿಕ್‌ ಪೈಲ್ವಾನ್‌ ಮಾತನಾಡಿ, ಹಲವಾರು ವರ್ಷಗಳಿಂದಲೂ ಎಲ್ಲಾ ಸಮಾಜದವರ ನಡುವೆ ಐಕ್ಯತೆ ಮುಂದುವರೆಯುತ್ತಲೇ ಬಂದಿದೆ. ಮುಂದೆಯೂ ಹಾಗೆಯೇ ಇರುತ್ತದೆ. ಪೊಲೀಸ್‌ ಇಲಾಖೆ ಹಬ್ಬದ ಆಚರಣೆಗೂ ಒಂದು ದಿನ ಮುಂಚಿತವಾಗಿ ಬಾರ್‌ ಗಳನ್ನು ಮುಚ್ಚಿಸಬೇಕು ಹಾಗೂ ಕಳ್ಳತನದಿಂದ
ಮಾರಾಟ ಮಾಡುವವರ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಸಿಎಸ್‌ಐ ಚರ್ಚ್‌ ಧರ್ಮಗುರು ಫಾದರ್‌ ಡ್ಯಾನಿಯಲ್‌ ಮಾತನಾಡಿ, ಧರ್ಮ ಮತ್ತು ಆಚರಣೆ ಒಂದೇ ನಾಣ್ಯದ ಎರಡು ಮುಖಗಳು. ಅವುಗಳನ್ನು ವ್ಯವಸ್ಥಿತವಾಗಿ ಕಾಪಾಡಬೇಕು. ಎಲ್ಲಾ ಜನರಲ್ಲೂ ಧರ್ಮ ಸಮ್ಮೇಳನಕ್ಕಿಂತ ಧರ್ಮ ಸಮ್ಮಿಲನ ಆಗಬೇಕು. ಆಗ ಮಾತ್ರ ಸಮಾಜದಲ್ಲಿ ಶಾಂತಿ, ಸೌಹಾರ್ದತೆ ನಿರ್ಮಾಣ ಆಗಲು ಸಾಧ್ಯ ಎಂದರು.
ಪಾಲಿಕೆ ಸದಸ್ಯ ದಿನೇಶ್‌ ಕೆ. ಶೆಟ್ಟಿ, ಉತ್ಸವ ಸಮಿತಿ ಅಧ್ಯಕ್ಷ ದೇವರಮನಿ ಶಿವಕುಮಾರ್‌, ವಕ್ಫ್ ಮಂಡಳಿ ಅಧ್ಯಕ್ಷ ಸಿರಾಜ್‌, ದುರ್ಗಾಂಬಿಕಾ ದೇವಸ್ಥಾನದ ಕಮಿಟಿ ಧರ್ಮದರ್ಶಿ ಗೌಡ್ರು ಚನ್ನಬಸಪ್ಪ, ವೈ. ಮಲ್ಲೇಶ್‌ ಮಾತನಾಡಿದರು.
 
ತಹಶೀಲ್ದಾರ್‌ ಸಂತೋಷ್‌ ಕುಮಾರ್‌, ಡಿಸಿಆರ್‌ಬಿ ಪೊಲೀಸ್‌ ಅಧೀಕ್ಷಕ ಬಿ. ಗೋಪಾಲಗೌಡ್ರು, ನಗರದ ಉಪವಿಭಾಗ ಡಿವೈಎಸ್‌ಪಿ ನಾಗರಾಜ್‌, ಉಪಮೇಯರ್‌ ಚಮನ್‌ಸಾಬ್‌ ಸಭೆಯಲ್ಲಿ ಪಾಲ್ಗೊಂಡಿದ್ದರು. ಸಿಪಿಐ ಉಮೇಶ್‌ ನಿರೂಪಿಸಿದರು.

ಗಣಪತಿ ಹಬ್ಬ ಆಚರಣೆ ತಂದ ಮಹಾತ್ಮನಿಗೆ ಇಂದು ಅಗೌರವ ತರುವ ಕೆಲಸ ಆಗುತ್ತಿದೆ. ಜಾತಿ ಆಧಾರಿತವಾಗಿ ಕೇರಿಗೊಂದು ಗಣಪ ಇಟ್ಟು ಗಣಪತಿ ವಿಸರ್ಜನೆ ಮಾಡುವುದರಲ್ಲೂ ವೈಶಮ್ಯ ಆಗುತ್ತಿದೆ. ಈ ರೀತಿ ವಾತಾವರಣ ನಿಂತಾಗ ಮಾತ್ರ ಹಬ್ಬದ ಆಚರಣೆಯೂ ಕೂಡ ಕಳೆಗಟ್ಟಲು ಸಾಧ್ಯ. ಮುಂದಿನ ದಿನಗಳಲ್ಲಿ ಸಾರ್ವಜನಿಕವಾಗಿ ಎಲ್ಲಾ ಸಮಾಜದವರು ಕೂಡಿ ಆಚರಿಸುವ ಹಬ್ಬದ ಖರ್ಚನ್ನು ಮಹಾನಗರಪಾಲಿಕೆ ನೀಡುವಂತೆ ಸಭೆಯಲ್ಲಿ ಒತ್ತಾಯಿಸಿದ್ದೇವೆ.
 ಎಚ್‌.ಜಿ. ಉಮೇಶ್‌, ಪಾಲಿಕೆ ಸದಸ್ಯ

Advertisement

Udayavani is now on Telegram. Click here to join our channel and stay updated with the latest news.

Next