Advertisement
ಗುರುವಾರ ಜಿಲ್ಲಾ ರಕ್ಷಣಾಧಿಕಾರಿ ಕಚೇರಿ ಸಭಾಂಗಣದಲ್ಲಿ ಹೋಳಿ ಹಬ್ಬ ಮತ್ತು ಷಬ್ -ಎ-ಬರಾತ್ ಹಬ್ಬದ ಪ್ರಯುಕ್ತ ನಡೆದ ನಾಗರಿಕ ಸೌಹಾರ್ದ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಹಬ್ಬಗಳ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶ ನೀಡಬಾರದು. ಸಡಗರ, ಸಂಭ್ರಮದಿಂದ ಹಬ್ಬಗಳಾಚರಣೆ ಮಾಡಬೇಕು ಎಂದರು.
Related Articles
Advertisement
ಮೇಯರ್ ಜಯಮ್ಮ ಗೋಪಿನಾಯ್ಕ ಮಾತನಾಡಿ, ಹೋಳಿ ಹಬ್ಬದಲ್ಲಿ ಕೆಲವು ಕಿಡಿಗೇಡಿಗಳು ಮುಖಕ್ಕೆ ಬಟ್ಟೆ ಕಟ್ಟಿಕೊಂಡು ರೋಡಿನಲ್ಲಿ ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳಿಗೆ ಬಣ್ಣ ಎರಚುವುದು ಹಾಗೂ ನೀರು ಹಾಕುವುದು, ಬಲವಂತವಾಗಿ ಮೊಟ್ಟೆ ಹೊಡೆಯುವುದು ಅಲ್ಲಲ್ಲಿ ಕಂಡುಬರುತ್ತದೆ. ಈ ಬಗ್ಗೆ ಪೊಲೀಸರು ಗಮನ ಹರಿಸಬೇಕು ಎಂದು ತಿಳಿಸಿದರು.
ಹೋಳಿ, ಷಬ್ ಎ ಬರಾತ್ ಹಬ್ಬ ಹಾಗೂ ದುರ್ಗಾದೇವಿ ಜಾತ್ರೆಯ ಪ್ರಯುಕ್ತ ನಗರದಲ್ಲಿ ನೀರು, ಸ್ವತ್ಛತೆ, ವಿದ್ಯುತ್ ಹಾಗೂ ಎಲ್ಲ ರೀತಿಯ ಅಗತ್ಯ ಮೂಲಸೌಕರ್ಯಗಳ ವ್ಯವಸ್ಥೆ ಮಾಡಲಾಗುವುದು ಎಂದರು.
ದೂಡಾ ಮಾಜಿ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್ ಮಾತನಾಡಿ, ಇಡೀ ಜಗತ್ತಿನಲ್ಲೇ ನಾವು ಭಾರತಿಯರು ಎಂದು ಹೇಳಿಕೊಳ್ಳಲು ಹೆಮ್ಮೆಯಾಗುತ್ತದೆ. ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೂ ಯಾವುದೇ ಮಸೀದಿಗಳಲ್ಲಿ ಮಂದಿರಗಳಲ್ಲಿ ಹಿಂದೂ ಮುಸ್ಲಿಂ ಗಲಾಟೆಗಳು ಕಂಡುಬಂದಿಲ್ಲ, ಆದರೂ, ಕೆಲವು ಕಿಡಿಗೇಡಿಗಳು ಸುಮ್ಮನೆ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟರ್ ಹಂಚಿಕೊಂಡು ಕೋಮುಗಲಭೆಸೃಷ್ಟಿಸುತ್ತಾರೆ. ಆದ್ದರಿಂದ ನಾವು ಅಂತಹವುಗಳ ಬಗ್ಗೆ ಗಮನಹರಿಸದೆ ಎಲ್ಲರೂ ಶಾಂತಿ ಸೌಹಾರ್ದತೆಯಿಂದ ಹಬ್ಬಗಳನ್ನು ಆಚರಿಸೋಣ ಎಂದರು.
ಮುಸ್ಲಿಂ ಸಮಾಜದ ಮುಖಂಡ ಸಾದಿಕ್ ಪೈಲ್ವಾನ್ ಮಾತನಾಡಿ, ಮುಸ್ಲಿಮರು ಸಂಪ್ರದಾಯದಂತೆ ನಮಾಜ್ ನಂತರ ಹಿರಿಯರಿಗೆ ಪ್ರಾರ್ಥನೆ ಸಲ್ಲಿಸುವುದು ಕೇವಲ 10 ರಿಂದ 15 ನಿಮಿಷದಲ್ಲಿ ಮುಗಿದು ಹೋಗುತ್ತದೆ. ಈ ಹಿಂದೆ ಸೂಕ್ಷ್ಮ ಪ್ರದೇಶದಲ್ಲಿರುವ ಜನರಿಗೆ ಯಾವುದೇ ಅಹಿತಕರ ಘಟನೆಗಳು ಆಗದಂತೆ ತಿಳಿ ಹೇಳಿದ್ದೇವೆ. ಮುಂದೆಯೂ ಕೂಡ ಇದೇ ರೀತಿ ಸಹಕರಿಸಲಿದ್ದೇವೆ. ಹಿಂದೂ-ಮುಸ್ಲಿಮರು ಒಂದೇ ತಟ್ಟೆಯಲ್ಲಿ ಊಟ ಮಾಡಿದ್ದೇವೆ. ಒಂದೇ ತಾಯಿಯ ಮಕ್ಕಳಂತೆ ಶಾಂತಿ ಸೌಹಾರ್ದತೆಯಿಂದ ಬಾಳಿ ಬದುಕಿದ್ದೇವೆ. ಇತರ ಜಿಲ್ಲೆಗೂ ಮಾದರಿಯಾಗುವಂತೆ ಹಬ್ಬ ಆಚರಿಸೋಣ ಎಂದು ಮನವಿ ಮಾಡಿದರು.
ಹೆಚ್ಚುವರಿ ಪೊಲೀಸ್ ಅಧೀಕ್ಷಕ ಆರ್.ಬಿ ಬಸರಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಖಂಡರಾದ ಎಲ್.ಡಿ. ಗೋಣೆಪ್ಪ, ದೂಡಾ ಮಾಜಿ ಅಧ್ಯಕ್ಷ ಅಯೂಬ್ ಪೈಲ್ವಾನ್, ಉಪಮೇಯರ್ ಗಾಯತ್ರಿಬಾಯಿ, ಕೆ.ಬಿ. ಶಂಕರನಾರಾಯಣ್, ಮಹಮ್ಮದ್ ಸಿರಾಜ್, ಹಿಂದೂ ಜಾಗರಣ ವೇದಿಕೆ ಮುಖಂಡ ಸತೀಶ್ ಪೂಜಾರ್ ಇತರರು ಭಾಗವಹಿಸಿದ್ದರು.