Advertisement

ಸಿಯೆಟ್‌ ಪ್ರಶಸ್ತಿ ಪ್ರದಾನ: ಕೊಹ್ಲಿ ವರ್ಷದ ಶ್ರೇಷ್ಠ  ಕ್ರಿಕೆಟಿಗ

06:00 AM May 30, 2018 | Team Udayavani |

ಮುಂಬಯಿ: ಐಪಿಎಲ್‌ ಕ್ರಿಕೆಟ್‌ ಮುಗಿದ ತತ್‌ಕ್ಷಣವೇ ಸಿಯೆಟ್‌ ಪ್ರಶಸ್ತಿ ವಿಜೇತರಿಗೆ ಇಲ್ಲಿ ನಡೆದ ಭವ್ಯ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಭಾರತ ತಂಡದ ಯಶಸ್ವಿ ನಾಯಕ ವಿರಾಟ್‌ ಕೊಹ್ಲಿ ಅವರು ವರ್ಷದ ಶ್ರೇಷ್ಠ ಅಂತಾರಾಷ್ಟ್ರೀಯ ಕ್ರಿಕೆಟಿಗ ಪ್ರಶಸ್ತಿ ಪಡೆದಿದ್ದಾರೆ.

Advertisement

ಕಳೆದ ಋತುವಿನಲ್ಲಿ 29ರ ಹರೆಯದ ಕೊಹ್ಲಿ ಬ್ಯಾಟಿಂಗ್‌ನಲ್ಲಿ ನೀಡಿದ ಅಮೋಘ ನಿರ್ವಹಣೆಯಿಂದಾಗಿ ಈ ಪ್ರಶಸ್ತಿ ಗೆಲ್ಲುವಂತಾಯಿತು. ಆದರೆ ಕೊಹ್ಲಿ ಸಮಾರಂಭದಲ್ಲಿ ಉಪಸ್ಥಿತರಿರಲಿಲ್ಲ. ಅವರ ಬದಲಿಗೆ ರೋಹಿತ್‌ ಶರ್ಮ ಪ್ರಶಸ್ತಿ ಸ್ವೀಕರಿಸಿದರು.

ಭಾರತೀಯ ಆರಂಭಿಕ ಶಿಖರ್‌ ಧವನ್‌ ವರ್ಷದ ಶ್ರೇಷ್ಠ ಅಂತಾರಾಷ್ಟ್ರೀಯ ಬ್ಯಾಟ್ಸ್‌ಮನ್‌ ಪ್ರಶಸ್ತಿ ಪಡೆದರೆ ನ್ಯೂಜಿಲ್ಯಾಂಡಿನ ವೇಗಿ ಟ್ರೆಂಟ್‌ ಬೌಲ್ಟ್ ವರ್ಷದ ಶ್ರೇಷ್ಠ ಅಂತಾರಾಷ್ಟ್ರೀಯ ಬೌಲರ್‌ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಐಪಿಎಲ್‌ನಲ್ಲಿ ಅವಿಸ್ಮರಣೀಯ ಬೌಲಿಂಗ್‌ ದಾಳಿ ಸಂಘಟಿಸಿ ಗಮನ ಸೆಳೆದಿದ್ದ ಅಫ್ಘಾನಿಸ್ಥಾನದ ಲೆಗ್‌ ಸ್ಪಿನ್ನರ್‌ ರಶೀದ್‌ ಖಾನ್‌ ಅವರು ವರ್ಷದ ಶ್ರೇಷ್ಠ ಟಿ20 ಬೌಲರ್‌ ಪ್ರಶಸ್ತಿ ಪಡೆದಿದ್ದಾರೆ. ನ್ಯೂಜಿಲ್ಯಾಂಡಿನ ಸ್ಫೋಟಕ ಆರಂಭಿಕ ಕಾಲಿನ್‌ ಮುನ್ರೊ ವರ್ಷದ ಶ್ರೇಷ್ಠ ಟಿ20 ಬ್ಯಾಟ್ಸ್‌ಮನ್‌ ಪ್ರಶಸ್ತಿ ಜಯಿಸಿದ್ದಾರೆ. 

ಐಸಿಸಿ ವನಿತಾ ವಿಶ್ವಕಪ್‌ನಲ್ಲಿ ಭಾರತೀಯ ತಂಡ ಫೈನಲಿಗೇರುವಲ್ಲಿ ಪ್ರಮುಖ ಕಾರಣರಾಗಿದ್ದ ಹರ್ಮನ್‌ಪ್ರೀತ್‌ ಕೌರ್‌ ವರ್ಷದ ಶ್ರೇಷ್ಠ ಇನ್ನಿಂಗ್ಸ್‌ ಪ್ರಶಸ್ತಿ ಪಡೆದಿದ್ದಾರೆ. ಆಸ್ಟ್ರೇಲಿಯ ವಿರುದ್ಧ ನಡೆದ ಸೆಮಿಫೈನಲ್‌ ಪಂದ್ಯದಲ್ಲಿ ಕೌರ್‌ ವೀರೋಚಿತ ಬ್ಯಾಟಿಂಗ್‌ನಿಂದ ಅಜೇಯ 171 ರನ್‌ ಸಿಡಿಸಿ ಭಾರತ ತಂಡ ಫೈನಲ್‌ ತಲುಪುವಂತೆ ಮಾಡಿದ್ದರು. 

ಅಗರ್ವಾಲ್‌ ದೇಶೀಯ ಶ್ರೇಷ್ಠ
ಕರ್ನಾಟಕ ತಂಡದ ದೇಶೀಯ ಕ್ರಿಕೆಟ್‌ನಲ್ಲಿ ಗಮನಾರ್ಹ ಬ್ಯಾಟಿಂಗ್‌ ಪ್ರದರ್ಶಿಸಿದ್ದ ಮಯಾಂಕ್‌ ಅಗರ್ವಾಲ್‌ ಅವರಿಗೆ ವರ್ಷದ ಶ್ರೇಷ್ಠ ದೇಶೀಯ ಕ್ರಿಕೆಟಿಗ ಪ್ರಶಸ್ತಿ ನೀಡಲಾಗಿದೆ. ಅವರು ಲೆಜೆಂಡರಿ ಬ್ಯಾಟ್ಸ್‌ಮನ್‌ ದುಲೀಪ್‌ ವೆಂಗ್‌ಸರ್ಕಾರ್‌ ಅವರಿಂದ ಈ ಪ್ರಶಸ್ತಿ ಸ್ವೀಕರಿಸಿದರು. 

Advertisement

ಆಸ್ಟ್ರೇಲಿಯದಲ್ಲಿ ನಡೆದ ಅಂಡರ್‌ 19 ವಿಶ್ವಕಪ್‌ನಲ್ಲಿ ಗಮನಾರ್ಹ ನಿರ್ವಹಣೆ ನೀಡಿದ್ದ 18ರ ಹರೆಯದ ಶುಭ್‌ಮನ್‌ ಗಿಲ್‌ ಅವರು ವರ್ಷದ ಶ್ರೇಷ್ಠ ಅಂಡರ್‌ 19 ಆಟಗಾರ ಪ್ರಶಸ್ತಿ ಗೆದ್ದಿದ್ದಾರೆ. ಐಪಿಎಲ್‌ನಲ್ಲಿ ಕೋಲ್ಕತಾ ನೈಟ್‌ರೈಡರ್ ಪರ ಅವರು ಆಡಿದ್ದರು. ಆಟದ ಬಗ್ಗೆ ಗಿಲ್‌ ಅವರು ಬಹಳಷ್ಟು  ಎಚ್ಚರಿಕೆಯಿಂದ ಇರುತ್ತಾರೆ ಎಂದು ಹೈದರಾಬಾದ್‌ ತಂಡದ ಕೋಚ್‌ ಟಾಮ್‌ ಮೂಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ವೆಸ್ಟ್‌ಇಂಡೀಸ್‌ನ ಸ್ಫೋಟಕ ಬ್ಯಾಟ್ಸ್‌ಮನ್‌ ಕ್ರಿಸ್‌ ಗೇಲ್‌ ಅವರು ಜನಪ್ರಿಯ ಆಯ್ಕೆ ಪ್ರಶಸ್ತಿ ಪಡೆದಿದ್ದರೆ ಜೀವಮಾನ ಸಾಧನೆ ಪ್ರಶಸ್ತಿಯನ್ನು ಭಾರತ ತಂಡದ ಮಾಜಿ ಸ್ಟಂಪರ್‌ ಫಾರೂಖ್‌ ಎಂಜಿನಿಯರ್‌ ಪಡೆದರು. ಎಂಜಿನಿಯರ್‌ ಡೈನಾಮಿಕ್‌ ಓಪನಿಂಗ್‌ ಬ್ಯಾಟ್ಸ್‌ಮನ್‌ ಮತ್ತು ಅತ್ಯದ್ಭುತ ವಿಕೆಟ್‌ಕೀಪರ್‌ ಆಗಿದ್ದರು ಎಂದು ಲೆಜೆಂಡರಿ ಬ್ಯಾಟ್ಸ್‌ಮನ್‌ ಸುನೀಲ್‌ ಗಾವಸ್ಕರ್‌ ಹೇಳಿದ್ದಾರೆ.

ಸಿಯೆಟ್‌ ಪ್ರಶಸ್ತಿ   
ವರ್ಷದ ಶ್ರೇಷ್ಠ ಕ್ರಿಕೆಟಿಗ: ವಿರಾಟ್‌ ಕೊಹ್ಲಿ
ವರ್ಷದ ಶ್ರೇಷ್ಠ ಬ್ಯಾಟ್ಸ್‌ಮನ್‌:     ಶಿಖರ್‌ ಧವನ್‌
ವರ್ಷದ ಶ್ರೇಷ್ಠ ಬೌಲರ್‌: ಟ್ರೆಂಟ್‌ ಬೌಲ್ಟ್
ವರ್ಷದ ಶ್ರೇಷ್ಠ ಟಿ20 ಬೌಲರ್‌: ರಶೀದ್‌ ಖಾನ್‌
ವರ್ಷದ ಶ್ರೇಷ್ಠ ಟಿ20 ಬ್ಯಾಟ್ಸ್‌ಮನ್‌: ಕಾಲಿನ್‌ ಮುನ್ರೊ
ವರ್ಷದ ಶ್ರೇಷ್ಠ ಇನ್ನಿಂಗ್ಸ್‌: ಹರ್ಮನ್‌ಪ್ರೀತ್‌ ಕೌರ್‌
ವರ್ಷದ ಶ್ರೇಷ್ಠ ದೇಶೀಯ ಕ್ರಿಕೆಟಿಗ: ಮಯಾಂಕ್‌ ಅಗರ್ವಾಲ್‌
ವರ್ಷದ ಶ್ರೇಷ್ಠ ಅಂಡರ್‌ 19 ಆಟಗಾರ: ಶುಭ್‌ಮನ್‌ ಗಿಲ್‌
ಜನಪ್ರಿಯ ಆಯ್ಕೆ  ಪ್ರಶಸ್ತಿ: ಕ್ರಿಸ್‌ ಗೇಲ್‌
ಜೀವಮಾನ ಸಾಧನೆ ಪ್ರಶಸ್ತಿ: ಫಾರೂಖ್‌ ಎಂಜಿನಿಯರ್‌

Advertisement

Udayavani is now on Telegram. Click here to join our channel and stay updated with the latest news.

Next