ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ದಾಖಲಾಗಿರುವ ಅರ್ಜಿಯಲ್ಲಿ ತನ್ನ ವಾದವನ್ನೂ ಆಲಿಸುವಂತೆ ಕೋರಿ ಸಂತ್ರಸ್ತೆ ಯುವತಿ ಸಲ್ಲಿಸಿದ್ದ ಮಧ್ಯಂತರ ಅರ್ಜಿಯನ್ನು ಹೈಕೋರ್ಟ್ ಮಾನ್ಯ ಮಾಡಿದೆ.
ಇದೇ ವೇಳೆ, ಪ್ರಕರಣಕ್ಕೆ ಸಂಬಂಧಿಸಿದಂತೆ ಏಕಸದಸ್ಯ ನ್ಯಾಯಪೀಠಗಳಲ್ಲಿ ದಾಖಲಾಗಿರುವ ಪ್ರತ್ಯೇಕ ತಕರಾರು ಅರ್ಜಿಗಳನ್ನೂ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳೊಂದಿಗೆ ವಿಚಾರಣೆ ನಡೆಸಲು ಹೈಕೋರ್ಟ್ ಸಮ್ಮತಿಸಿದೆ.
ಸಿಡಿ ಪ್ರಕರಣದ ತನಿಖೆಗೆ ಎಸ್‌ಐಟಿ ರಚನೆ ಮಾಡಿ ನಗರ ಪೊಲೀಸ್ ಆಯುಕ್ತರು ಹೊರಡಿಸಿರುವ ಆದೇಶ ರದ್ದುಪಡಿಸುವಂತೆ ಕೋರಿ ನಗರದ ವಕೀಲೆ ಗೀತಾ ಮಿಶ್ರಾ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ್ ನೇತೃತ್ವದ ವಿಭಾಗೀಯ ಪೀಠ ಶುಕ್ರವಾರ ವಿಚಾರಣೆ ನಡೆಸಿತು.
ಈ ವೇಳೆ ಯುವತಿ ಪರವಾಗಿ ಸುಪ್ರೀಂಕೋರ್ಟ್ ಹಿರಿಯ ವಕೀಲೆ ಇಂದಿರಾ ಜೈಸಿಂಗ್ ವಾದ ಮಂಡಿಸಿ, ಸಿಡಿ ಪ್ರಕರಣ ಸಂಬಂಧ ಎಸ್‌ಐಟಿ ನಡೆಸುತ್ತಿರುವ ತನಿಖೆ ಬಗ್ಗೆ ಸಂತ್ರಸ್ತೆಗೂ ಆಕ್ಷೇಪವಿದ್ದು, ಎಸ್‌ಐಟಿ ರಚನೆ ಆದೇಶ ರದ್ದು ಪಡಿಸುವಂತೆ ಕೋರಿ ಸಲ್ಲಿಕೆಯಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ಆಕೆಯನ್ನೂ ಪ್ರತಿವಾದಿಯನ್ನಾಗಿಸಿ, ವಾದ ಆಲಿಸಬೇಕು ಎಂದು ಕೋರಿದರು. ಯುವತಿಯನ್ನು ಪ್ರತಿವಾದಿಯನ್ನಾಗಿಸಲು ಯಾವುದೇ ಆಕ್ಷೇಪಣೆ ಇಲ್ಲವೆಂದು ಮೂಲ ಅರ್ಜಿದಾರರು ಹಾಗೂ ಸರ್ಕಾರದ ಪರ ವಕೀಲರು ತಿಳಿಸಿದರು. ಈ ಹಿನ್ನೆಲೆಯಲ್ಲಿ ನ್ಯಾಯಪೀಠ ಯುವತಿಯನ್ನೂ ಪ್ರತಿವಾದಿಯನಾಗಿಸ್ನಿ , ನೋಟಿಸ್ ಜಾರಿಗೊಳಿಸಿತು.
ಎಲ್ಲಾ ಅರ್ಜಿಗಳ ಒಟ್ಟಿಗೆ ವಿಚಾರಣೆ: ಇದೇ ವೇಳೆ, ಎಸ್‌ಐಟಿ ತನಿಖೆ ಪ್ರಶ್ನಿಸಿ ಯುವತಿ ಏಕಸದಸ್ಯ ನ್ಯಾಯಪೀಠದಲ್ಲಿ ಮತ್ತೂಂದು ತಕರಾರು ಅರ್ಜಿಸಲ್ಲಿಸಿದ್ದು,ಆ ಅರ್ಜಿಯನ್ನೂ ಇದೇ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದಿಗೆ ವಿಚಾರಣೆ ನಡೆಸಬೇಕೆಂದು ಇಂದಿರಾ ಜೈಸಿಂಗ್ ನ್ಯಾಯಪೀಠಕ್ಕೆ ಮನವಿ ಮಾಡಿದರು. ಎಲ್ಲರ ಸಮ್ಮತಿ ಮೇರೆಗೆ ನ್ಯಾಯಪೀಠ, ಎಲ್ಲ ಅರ್ಜಿಗಳನ್ನೂ ಒಟ್ಟಾಗಿ ವಿಚಾರಣೆ ನಡೆಸುವುದಾಗಿ ತಿಳಿಸಿ, ಜು.5ಕ್ಕೆ ವಿಚಾರಣೆ ಮುಂದೂಡಿತು