Advertisement

ಸೇಫ್ ನಗರಕ್ಕಾಗಿ ಸಿಸಿಟಿವಿ

12:28 PM Feb 19, 2018 | Team Udayavani |

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಮಹಿಳೆಯರ ಸುರಕ್ಷತೆಗಾಗಿ ಅತ್ಯಾಧುನಿಕ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಚಯಿಸಲು ಬಿಬಿಎಂಪಿ ಹಾಗೂ ಹಾಗೂ ಬೆಂಗಳೂರು ನಗರ ಪೊಲೀಸ್‌ ಇಲಾಖೆ ಮುಂದಾಗಿದ್ದು, ಕೇಂದ್ರದಿಂದ ಅನುದಾನ ಸಿಕ್ಕರೆ ಶೀಘ್ರದಲ್ಲಿಯೇ ನಗರದ 5,500 ಸ್ಥಳಗಳಲ್ಲಿ ಕ್ಯಾಮೆರಾಗಳು ಕಾರ್ಯಾರಂಭಿಸಲಿವೆ.

Advertisement

ನಗರದಲ್ಲಿ ಇತ್ತೀಚಿನ ದಿನಗಳಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ, ಕಿರುಕುಳ ಪ್ರಕರಣಗಳು ಹೆಚ್ಚಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಮಹಿಳೆಯರ ಸುರಕ್ಷತೆಗಾಗಿ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಲು ಸ್ಥಳೀಯ ಸಂಸ್ಥೆಗಳು ಜಂಟಿಯಾಗಿ ಕೆಲಸ ಮಾಡಲು ಮುಂದಾಗಿವೆ. ಅದರಂತೆ ನಗರದ ಪ್ರಮುಖ ಸ್ಥಳಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಕೆಯೊಂದಿಗೆ, ಶಾಲಾ-ಕಾಲೇಜು ಹಾಗೂ ಬಸ್‌ನಿಲ್ದಾಣಗಳ ಬಳಿ ಮಹಿಳಾ ಹೊರಠಾಣೆಗಳನ್ನು ಆರಂಭಿಸಲು ಚಿಂತನೆ ನಡೆಸಿದ್ದಾರೆ. 

ಮಹಾನಗರಗಳಲ್ಲಿ ಮಹಿಳೆಯರ ಸುರಕ್ಷತೆಗೆ ಸ್ಥಳೀಯ ಸಂಸ್ಥೆಗಳು ಕೈಗೊಳ್ಳುವ ಯೋಜನೆಗಳಿಗೆ “ಸೇಫ್ ಸಿಟಿ’ ಯೋಜನೆಯಡಿ ನಿರ್ಭಯಾ ನಿಧಿಯಿಂದ ಅನುದಾನ ನೀಡಲು ಕೇಂದ್ರ ಸರ್ಕಾರ ಸಿದ್ಧವಿದೆ. ಆ ಹಿನ್ನೆಲೆಯಲ್ಲಿ ಬಿಬಿಎಂಪಿ ಹಾಗೂ ಬೆಂಗಳೂರು ನಗರ ಪೊಲೀಸರು, ನಗರದಲ್ಲಿ 5,500 ಕಡೆಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳ ಅಳವಡಿಕೆಯೊಂದಿಗೆ, ಸುರಕ್ಷಾ ಮಿತ್ರ ಆ್ಯಪ್‌, ರಕ್ಷಾ ಬ್ಯಾಂಡ್‌ ವಿತರಣೆ, ನಿರ್ವಹಣಾ ಕೇಂದ್ರ ಸೇರಿ ಹಲವು ಯೋಜನೆಗಳ ಪಟ್ಟಿಯನ್ನು ಕೇಂದ್ರಕ್ಕೆ ಸಲ್ಲಿಸಿದೆ.

ಕಳೆದ ಮೂರು ವರ್ಷಗಳಲ್ಲಿ ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಒಟ್ಟು 1,73,700 ಕೇಸುಗಳು ದಾಖಲಾಗಿದ್ದು, ಆ ಪೈಕಿ 7,338 ಪ್ರಕರಣಗಳು ಮಹಿಳೆಯ ಮೇಲಿನ ದೌರ್ಜನ್ಯಕ್ಕೆ ಸಂಬಂಧಿಸಿವೆ. ಮಹಿಳೆಯರು ಕೆಲಸಕ್ಕೆ ಹೋಗುವ ಸ್ಥಳಗಳು ಹಾಗೂ ಕೊಳೆಗೇರಿ ಭಾಗಗಳಲ್ಲಿ ಮಹಿಳೆಯ ಮೇಲೆ ಹೆಚ್ಚು ದೌರ್ಜನ್ಯಗಳು ನಡೆಯುತ್ತಿರುವುದು ಕಂಡುಬಂದಿದೆ. ಹೀಗಾಗಿ ಮಹಿಳೆಯರಿಗೆ ತೊಂದರೆ ನೀಡುವ ಪುಂಡರ ಪತ್ತೆಗೆ ಅತ್ಯಾಧುನಿಕ ತಂತ್ರಜ್ಞಾನದ ಕ್ಯಾಮೆರಾಗಳ ಬಳಕೆಗೆ ಯೋಜನೆ ರೂಪಿಸಿದ್ದಾರೆ. 

ಮುಖ ಗುರುತಿಸುವ ಕ್ಯಾಮೆರಾ ಅಳವಡಿಕೆ: ನಗರದಲ್ಲಿ ನಡೆಯುವ ಹಲವಾರು ಅಪರಾಧದ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾದರೂ, ಮುಖದ ಚಹರೆ ಗುರುತಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಅಪರಾಧಿಗಳ ಪತ್ತೆ ಮಾಡುವುದು ಕಷ್ಟವಾಗುತ್ತದೆ. ಆ ಹಿನ್ನೆಲೆಯಲ್ಲಿ ಮುಖದ ಚಹರೆಯನ್ನು ತೀಕ್ಷ್ಣವಾಗಿ ಸೆರೆ ಹಿಡಿಯುವ (ಫೇಶಿಯಲ್‌ ರೆಕಗ್ನೆ„ಸೇಷನ್‌) 500 ಕ್ಯಾಮೆರಾಗಳನ್ನು ಅಳಡಿಸಲು ಸಂಸ್ಥೆಗಳು ಮುಂದಾಗಿವೆ.

Advertisement

ಮಹಿಳಾ ಹೊರಠಾಣೆ ರಚನೆ: ನಗರದ ವ್ಯಾಪ್ತಿಯ ಶಾಲಾ-ಕಾಲೇಜುಗಳು, ಬಸ್‌ ನಿಲ್ದಾಣಗಳು, ರೈಲ್ವೆ ನಿಲ್ದಾಣ, ಮಾಲ್‌, ಉದ್ಯಾನ ಸೇರಿ ನಗರದ ಪ್ರಮುಖ 100 ಕಡೆಗಳಲ್ಲಿ ಮಹಿಳಾ ಹೊರಠಾಣೆಯ ಕುರಿತು ಪ್ರಸ್ತಾವನೆಯಲ್ಲಿ ಉಲ್ಲೇಖೀಸಲಾಗಿದೆ. ಅದರಂತೆ ಪ್ರತಿ ಹೊರಠಾಣೆಯಲ್ಲಿ ಇಬ್ಬರು ಮಹಿಳಾ ಸಿಬ್ಬಂದಿ ಕಾರ್ಯನಿರ್ವಹಿಸಲಿದ್ದು, ಮಹಿಳೆಯರಿಗೆ ಶೀಘ್ರ ಸ್ಪಂದಿಸಲಿದ್ದಾರೆ.

742 ಕೋಟಿ ರೂ.ಗೆ ಮನವಿ: ನಗರದ 5,500 ಸ್ಥಳಗಳಲ್ಲಿ ಅಳವಡಿಸಲು ಉದ್ದೇಶಿಸಿರುವ ಅತ್ಯಾಧುನಿಕ ತಂತ್ರಜ್ಞಾನದ ಸಿಸಿಟಿವಿ ಕ್ಯಾಮೆರಾಗಳು, ಇಂಟಿಗ್ರೇಟೆಡ್‌ ಕಮಾಂಡ್‌ ಸೆಂಟರ್‌, ಮೊಬೈಲ್‌ ಕಮಾಂಡ್‌ ಸೆಂಟರ್‌, ವಿವಿಧ ಆನ್‌ಲೈನ್‌ ವ್ಯವಸ್ಥೆ, ಸುರಕ್ಷಾ ಮಿತ್ರ ಆ್ಯಪ್‌ ಹಾಗೂ ಪೋರ್ಟಲ್‌, ಮಹಿಳೆಯರ ಸಹಾಯಕ್ಕೆ ಶೀಘ್ರ ಧಾವಿಸಲು 1000 ಬೈಕ್‌ಗಳು ಹಾಗೂ 300 ಕಾರುಗಳು ಹಾಗೂ ರಕ್ಷಾ ಬ್ಯಾಂಡ್‌ ಸೇರಿ ವಿವಿಧ ಯೋಜನೆಗಳ ಜಾರಿಗೆ ಒಟ್ಟು 742 ಕೋಟಿ ರೂ. ಅನುದಾನ ಒದಗಿಸುವಂತೆ ಕೇಂದ್ರವನ್ನು ಪಾಲಿಕೆ ಹಾಗೂ ನಗರ ಪೊಲೀಸ್‌ ಇಲಾಖೆ ಕೋರಿದೆ.

ಪ್ರಸ್ತಾವನೆಗೆ ಕೇಂದ್ರದಿಂದ ಮೆಚ್ಚುಗೆ: ಬಿಬಿಎಂಪಿ ಹಾಗೂ ಬೆಂಗಳೂರು ನಗರ ಪೊಲೀಸ್‌ ಇಲಾಖೆಯಿಂದ ಮಹಿಳಾ ಸುರಕ್ಷತೆಗಾಗಿ ಜಾರಿಗೊಳಿಸಲು ಉದ್ದೇಶಿಸಿರುವ ಯೋಜನೆಗಳಿಗೆ ಕೇಂದ್ರ ಸರ್ಕಾರ ಮೆಚ್ಚುಗೆ ವ್ಯಕ್ತಪಡಿಸಿ, ಪ್ರಸ್ತಾವನೆಯನ್ನು ಒಪ್ಪಿಕೊಂಡಿದೆ. ಆದರೆ, ಪ್ರಸ್ತಾವನೆಯಲ್ಲಿರುವ ಯಾವ ಯೋಜನೆಗೆ ಎಷ್ಟು ಅನುದಾನ ನೀಡಲಿದ್ದಾರೆ ಎಂಬ ಮಾಹಿತಿ ಸಿಕ್ಕಲ್ಲ. 
-ಎನ್‌.ಮಂಜುನಾಥ ಪ್ರಸಾದ್‌, ಬಿಬಿಎಂಪಿ ಆಯುಕ್ತ

ಪ್ರಮುಖ ಅಂಶಗಳು
– 3 ಸಾವಿರ ಬುಲೆಟ್‌ ಸಿಸಿಟಿವಿ ಕ್ಯಾಮೆರಾ 
– 1 ಸಾವಿರ ಪಿಟಿಜಡ್‌ ಕ್ಯಾಮೆರಾ
– 1 ಎಎನ್‌ಪಿಆರ್‌ ಕ್ಯಾಮೆರಾ
– 500 ಫೇಶಿಯಲ್‌ ರೆಕಗ್ನೆ„ಸೇಷನ್‌ ಕ್ಯಾಮೆರಾ
–  ಸ್ಪಂದನೆಗಾಗಿ 1000 ಬೈಕ್‌ ಹಾಗೂ 300 ಕಾರು ಬಳಕೆ
– 100 ಕಡೆಗಳಲ್ಲಿ ಮಹಿಳಾ ಹೊರಠಾಣೆ ರಚನೆ

* ವೆಂ. ಸುನೀಲ್‌ ಕುಮಾರ್‌

Advertisement

Udayavani is now on Telegram. Click here to join our channel and stay updated with the latest news.

Next