ಹೊಸದಿಲ್ಲಿ : ದಿಲ್ಲಿಯ ಎಲ್ಲ ಶಾಲೆಗಳಿಗೆ ಈ ವರ್ಷ ನವೆಂಬರ್‌ನೊಳಗೆ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗುವುದು ಎಂದಿರುವ ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್, ಇದೊಂದು ಐತಿಹಾಸಿಕ ಮೈಲುಗಲ್ಲಾಗಲಿದೆ ಎಂದು ಹೇಳಿಕೊಂಡಿದ್ದಾರೆ.
ಲಾಜಪತ್ ನಗರದ ಶಹೀದ್ ಹೇಮು ಕಲಾನಿ ಸರ್ವೋದಯ ಬಾಲ ವಿದ್ಯಾಲಯದಲ್ಲಿ ಸಿಸಿಟಿವಿ ಯೋಜನೆಯನ್ನು ಆರಂಭಿಸಿದ ಸಿಎಂ ಕೇಜ್ರಿವಾಲ್, ಈ ವರ್ಷ ನವೆಂಬರ್ ಒಳಗಾಗಿ ದಿಲ್ಲಿಯ 1,000ಕ್ಕೂ ಅಧಿಕ ಸರಕಾರಿ ಶಾಲೆಗಳು ಸಿಸಿಟಿವಿ ಹೊಂದಲಿವೆ ಎಂದು ಹೇಳಿದರು.
ಇದೇ ರೀತಿ ಖಾಸಗಿ ಶಾಲೆಗಳಿಗೆ ಕೂಡ ಸಿಸಿಟಿವಿ ಅಳವಡಿಸಿಕೊಳ್ಳಲು ಸೂಚಿಸಲಾಗಿದೆ ಎಂದ ಕೇಜ್ರಿವಾಲ್, ಈ ಕುರಿತ ಸರಕಾರಿ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಅವುಗಳಿಗೆ ಆದೇಶಿಸಲಾಗಿದೆ ಎಂದು ಹೇಳಿದರು.