Advertisement
ಹಗರಣದಲ್ಲಿ ಸಿಸಿಬಿ ತನಿಖಾಧಿಕಾರಿಗಳು ಇಲ್ಲದಿದ್ದ ಕಡತಗಳನ್ನು ಸೃಷ್ಟಿಸಿ ಸಾಕ್ಷ್ಯಾಧಾರ ತಿರುಚುವ, ಸಾಕ್ಷ್ಯ ನಾಶಪಡಿಸುವ ಮೂಲಕ ಅಪರಾಧಿಕ ದುರುಪಯೋಗ, ಅವುಗಳ ಸಾಕ್ಷಿಗಳ ಮೌಲ್ಯವನ್ನು ಅಪಮೌಲ್ಯಗೊಳಿಸಿರುವುದು ವಿಧಿ ವಿಜ್ಞಾನ ಪ್ರಯೋಗಾಲಯ (ಎಫ್ಎಸ್‌ಎಲ್)ದ ವರದಿಯಿಂದ ಬಹಿರಂಗಗೊಂಡಿದೆ. ಪ್ರಕರಣದ ತನಿಖೆಯನ್ನು ಸಿಸಿಬಿ ಕೈಗೆತ್ತಿಕೊಂಡ ಬಳಿಕವೇ ಸಾಕ್ಷ್ಯಗಳನ್ನು ತಿರುಚಿರುವುದು ಗೊತ್ತಾಗಿದೆ.
ಎಸ್‌ಐಟಿ ತನಿಖಾ ತಂಡದ ಅಧಿಕಾರಿ ಹಾಗೂ ಸಿಐಡಿ ಡಿವೈಎಸ್‌ಪಿ ಕೆ. ರವಿಶಂಕರ್ ನೀಡಿರುವ ದೂರಿನ ಆಧಾರದ ಮೇಲೆ ಕಾಟನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಸಿಸಿಬಿ ತನಿಖಾಧಿಕಾರಿಗಳ ವಿರುದ್ಧ ಎಫ್ಐಆರ್ ದಾಖಲಾಗಿದೆ. ಹಿಂದಿನ ಸಿಸಿಬಿ ತನಿಖಾಧಿಕಾರಿಗಳು ಆರೋಪಿಗಳು ಕೃತ್ಯಕ್ಕೆ ಉಪಯೋಗಿಸಿದ್ದ ಎಲೆಕ್ಟ್ರಾನಿಕ್ ಉಪಕರಣಗಳಾದ ಮೊಬೈಲ್, ಲ್ಯಾಪ್‌ಟಾಪ್, ಕಂಪ್ಯೂಟರ್‌ಗಳು, ಹಾರ್ಡ್‌ಡಿಸ್ಕ್ಗಳು, ಪೆನ್ ಡ್ರೈವ್ ಮತ್ತಿತರ ವಸ್ತುಗಳನ್ನು ಪರೀಕ್ಷೆಗಾಗಿ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ರವಾನಿಸಿದ್ದರು. ಜು. 19ರಂದು ಎಫ್ಎಸ್‌ಎಲ್ ನೀಡಿದ ವರದಿಯನ್ನು ಎಸ್‌ಐಟಿ ತಂಡ ಪರಿಶೀಲಿಸಿತ್ತು. 2020ರ ನ. 9ರಂದು ವಶಪಡಿಸಿಕೊಂಡಿದ್ದ ಎರಡು ಪೆನ್‌ಡ್ರೈವ್‌ಗಳನ್ನು 2020 ನ. 11ರಂದು ಮಿರರ್ ಇಮೇಜ್ ಪ್ರಕ್ರಿಯೆಗೆ ಒಳಪಡಿಸಲಾಗಿದೆ. ಅಮಾನತುಪಡಿಸಿರುವ ಮೂಲ ಆರ್ಟಿಕಲ್‌ನಲ್ಲಿಯೇ ಹೆಚ್ಚುವರಿಯಾಗಿ ಕಡತಗಳು ಸೃಷ್ಟಿಯಾಗಿರುವುದು ಪತ್ತೆಯಾಗಿದೆ. ಒಂದು ಹಾರ್ಡ್ ಡಿಸ್ಕ್ ಮತ್ತು ಒಂದು ಆ್ಯಪಲ್ ಮ್ಯಾಕ್‌ಬುಕ್‌ಗಳನ್ನು 2020ರ ನ. 17ರಂದು ಜಪ್ತಿ ಮಾಡಿ 2020ರ ನ. 22ರಿಂದ ಡಿ. 11ರ ನಡುವೆ ಮಿರರ್ ಇಮೇಜ್ ಪ್ರಕ್ರಿಯೆಗೆ ಒಳಪಡಿಸಲಾಗಿದೆ. ಆದರೆ 2020ರ ನ. 18ರಿಂದ ನ. 21ರ ನಡುವೆ ಮೂಲ ಆರ್ಟಿಕಲ್‌ನಲ್ಲಿಯೇ ಹೆಚ್ಚುವರಿಯಾಗಿ ಕಡತ ಸೃಷ್ಟಿಯಾಗಿರುವ ಅಂಶ ಎಫ್ಎಸ್‌ಎಲ್ ವರದಿಯಿಂದ ತಿಳಿದುಬಂದಿದೆ.
Related Articles
Advertisement
ಮುಂದೇನು?2020ರಲ್ಲಿ ಬಿಟ್‌ಕಾಯಿನ್ ತನಿಖೆ ನಡೆಸಿದ ಸಿಸಿಬಿ ತನಿಖಾಧಿಕಾರಿಗಳು, ಯಾವ ಹಿರಿಯ ಐಪಿಎಸ್ ಅಧಿಕಾರಿಗಳ ನೇತೃತ್ವದಲ್ಲಿ ತನಿಖೆ ನಡೆದಿದೆ, ಬಿಟ್‌ಕಾಯಿನ್ ಹಗರಣದ ಪ್ರಮುಖ ಆರೋಪಿ ಶ್ರೀಕೃಷ್ಣ ಅಲಿಯಾಸ್ ಶ್ರೀಕಿ ಕೊಟ್ಟ ಹೇಳಿಕೆಗೂ ಸಿಸಿಬಿ ಸೃಷ್ಟಿಸಿರುವ ಕಡತಗಳಿಗೆ ಲಿಂಕ್ ಇದೆಯೇ, ಸಿಸಿಬಿ ತನಿಖಾಧಿಕಾರಿಗಳು ಯಾರ ಪ್ರಭಾವಕ್ಕೆ ಒಳಗಾಗಿ ಕೃತ್ಯ ಎಸಗಿದ್ದಾರೆ ಎಂಬ ಬಗ್ಗೆ ಎಸ್‌ಐಟಿ ಮಾಹಿತಿ ಕಲೆ ಹಾಕುತ್ತಿದೆ. ಎಫ್ಎಸ್‌ಎಲ್ ವರದಿ ಕಂಡು ದಂಗಾದ ಎಸ್‌ಐಟಿ ಅಧಿಕಾರಿಗಳು ಈಗ ಬಿಟ್‌ಕಾಯಿನ್ ಹಗರಣ ಬೆಳಕಿಗೆ ಬಂದ ಬಳಿಕ ನಡೆದ ತನಿಖೆಗಳ ಬಗ್ಗೆ ಸಮಗ್ರ ದಾಖಲೆ ಕಲೆ ಹಾಕುವಲ್ಲಿ ನಿರತರಾಗಿದ್ದಾರೆ. ಶೀಘ್ರದಲ್ಲೇ ಸಂಬಂಧಪಟ್ಟ ಸಿಸಿಬಿ ಅಧಿಕಾರಿಗಳಿಗೆ ನೋಟಿಸ್ ಕೊಟ್ಟು ವಿಚಾರಣೆ ನಡೆಸಲು ಸಿದ್ಧತೆ ನಡೆಸಲಾಗುತ್ತಿದೆ ಎಂದು ತಿಳಿದು ಬಂದಿದೆ.