ಮಹಾನಗರ: ಸಮಯ ಪಾಲನೆ ವಿಷಯದಲ್ಲಿ ಸಿಟಿ ಬಸ್ ಸಿಬಂದಿ ಮತ್ತು ಮಾಲಕರ ನಡುವಣ ಸಮನ್ವಯ ಸಾಧಿಸುವ ನಿಟ್ಟಿನಲ್ಲಿ ಮಂಗಳೂರಿನ ಐದು ಕಡೆಗಳಲ್ಲಿ ಸೋಲಾರ್ ಸಿಸಿ ಕೆಮರಾ ಅಳವಡಿಸಲು ಬಸ್ ಮಾಲಕ ಒಕ್ಕೂಟ ನಿರ್ಧರಿಸಿದೆ.
ಮೊದಲನೇ ಹಂತದಲ್ಲಿ ನಂತೂರಿ ನಲ್ಲಿ ಈಗಾಗಲೇ ಸೋಲಾರ್ ಸಿಸಿ ಕೆಮರಾ ಅಳವಡಿಸಲಾಗಿದ್ದು, ಬಸ್‌ಗಳ ಚಲನವಲನಗಳ ಬಗ್ಗೆ ನಿಗಾ ಇಡಲಾ ಗುತ್ತಿದೆ. ಕೆಲವೊಂದು ಸಿಟಿ ಬಸ್‌ಗಳಲ್ಲಿ ಸಮರ್ಪಕ ಸಮಯ ಪಾಲನೆ ಆಗುತ್ತಿಲ್ಲ ಎಂಬ ಬಗ್ಗೆ ದೂರುಗಳು ಬಂದು ಸಿಬಂದಿ ನಡುವಣ ಜಗಳಕ್ಕೆ ಕಾರಣ ವಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಕರಾವಳಿ ವಲಯ ಸಿಟಿ ಬಸ್ ಮಾಲಕರ ಒಕ್ಕೂಟವು ನಗರದ ಕೆಲವು ಬಸ್ ಪಾಯಿಂಟ್‌ಗಳಲ್ಲಿ ಸಿಸಿ ಕೆಮರಾ ಅಳವಡಿಸಿ ನಿಗಾ ಇಡಲು ಮುಂದಾಗಿದೆ.
ಸದ್ಯ ಮಂಗಳಾದೇವಿ ಕಡೆಯಿಂದ ಕಂಕನಾಡಿ- ನಂತೂರು- ಲಾಲ್‌ಬಾಗ್ -ಕೂಳೂರು-ಸುರತ್ಕಲ್ -ಕಾಟಿಪಳ್ಳ ರೂಟ್‌ಗೆ ದಿನಂಪ್ರತಿ ಸುಮಾರು 38 ಬಸ್‌ಗಳು ಕಾರ್ಯಾಚರಿಸುತ್ತವೆ. ಈ ರೂಟ್‌ನ ಕೆಲವು ಬಸ್ ಗಳ ಸಮಯ ಪಾಲನೆಯ ಬಗ್ಗೆ ಚಾಲಕರು, ನಿರ್ವಾಹಕರ ಗಲಾಟೆಯ ದೂರುಗಳು ಮಾಲಕರಿಗೆ ಬರುತ್ತಿದ್ದವು. ಪೊಲೀಸ್ ಇಲಾಖೆಯಿಂದಲೂ ಹಲವು ಬಾರಿ ಸೂಚನೆ ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಅನುಮತಿಯೊಂದಿಗೆ ಸಿಸಿ ಕೆಮರಾ ಅಳವಡಿಸಲಾಗಿದೆ.
ಸೋಲಾರ್ ಸಿ.ಸಿ. ಕೆಮರಾ ವ್ಯವಸ್ಥೆ ಹೇಗೆ?
ಸೌರ ವಿದ್ಯುತ್ ಸಹಾಯದಿಂದ ಈ ಸಿಸಿ ಕೆಮರಾ ಕಾರ್ಯನಿರ್ವಹಿಸುತ್ತದೆ. ನಂತೂರಿನಲ್ಲಿ ಸುಮಾರು 15 ಅಡಿ ಎತ್ತರದ ಕಂಬದಲ್ಲಿ ಸಿಸಿ ಕೆಮರಾ ಅಳವಡಿಸಲಾಗಿದೆ. ಸೋಲಾರ್ ಪ್ಯಾನಲ್ ಮುಖೇನ ಇದರಲ್ಲಿ ವಿದ್ಯುತ್ ಉತ್ಪಾದನೆಯಾಗುತ್ತದೆ. 5 ಜಿ ವೈಫೈ ರೂಟರ್ ಅಳವಡಿಸಲಾಗಿದ್ದು, ಅದಕ್ಕೆ ಮೊಬೈಲ್ ಸಿಮ್ ಜೋಡಿಸಲಾಗಿದೆ. ಮೂರು ಮೆಗಾಪಿಕ್ಸೆಲ್ ಕೆಮರಾ ಅಳವಡಿಸಲಾಗಿದೆ. 40 ವ್ಯಾಟ್ ಸೋಲಾರ್ ಪ್ಯಾನಲ್‌ಗೆ 12 ಎಎಚ್ ಬ್ಯಾಟರಿಯನ್ನು ಅಳವಡಿಸಲಾಗಿದೆ. 128 ಜಿ.ಬಿ. ಮೊಮೊರಿ ಕಾರ್ಡ್ ಮುಖೇನ ವೀಡಿಯೋ ಸಂಗ್ರಹವಾಗಿ ಈ ವೀಡಿಯೋ ಫೂಟೇಜ್‌ಗಳನ್ನು ನೆಟ್‌ವರ್ಕ್ ಮುಖೇನ ಮೊಬೈಲ್, ಕಂಪ್ಯೂಟರ್‌ಗಳಲ್ಲಿ ವೀಕ್ಷಿಸಲು ಸಾಧ್ಯವಾಗುತ್ತದೆ.
ಐದು ಕಡೆ ಕೆಮರಾ
ಕರಾವಳಿ ವಲಯ ಸಿಟಿ ಬಸ್ ಮಾಲಕರ ಒಕ್ಕೂಟದಿಂದ ನಂತೂರಿ ನಲ್ಲಿ ಈಗಾಗಲೇ ಸೋಲಾರ್ ಸಿಸಿ ಕೆಮರಾ ಅಳವಡಿಸಲಾಗಿದೆ. ಮುಂದಿನ ದಿನಗಳಲ್ಲಿ ಸುರತ್ಕಲ್ 2 ಕಡೆಗಳಲ್ಲಿ, ಬಿಜೈ ಕೆಎಸ್ಸಾರ್ಟಿಸಿ ಖಾಸಗಿ ಬಸ್ ತಂಗುದಾಣ ಬಳಿ, ಲಾಲ್‌ಬಾಗ್‌ನಲ್ಲಿ ಅಳವಡಿಸಲು ನಿರ್ಧರಿಸಲಾಗಿದೆ. ಸ್ಟೇಟ್‌ಬ್ಯಾಂಕ್‌ನಿಂದ ಲಾಲಾಬಾಗ್- ಕಾಟಿಪಳ್ಳ ನಡುವೆ ಸುಮಾರು 70 ಬಸ್‌ಗಳು ಸಂಚರಿಸುತ್ತವೆ. ಆ ಭಾಗದ ಕೆಲವು ಕಡೆಗಳಲ್ಲಿಯೂ ಕೆಲವು ಕಡೆ ಸಿಸಿ ಕೆಮರಾ ಅಳವಡಿಸಲು ಚಿಂತಿಸಲಾಗಿದೆ.
–ರಾಮಚಂದ್ರ ಪಿಲಾರ್, ಕರಾವಳಿ ವಲಯ ಸಿಟಿ ಬಸ್ ಮಾಲಕರ ಒಕ್ಕೂಟ ಪ್ರ.ಕಾರ್ಯದರ್ಶಿ