ಕುಂದಾಪುರ: ನಗರದ ಪ್ರಮುಖ ಕೇಂದ್ರ ಪ್ರದೇಶ ಶಾಸ್ತ್ರಿ ವೃತ್ತಕ್ಕೆ ಸಿಸಿ ಕೆಮರಾ ಕಣ್ಗಾವಲು ಬೇಕಿದೆ. ಉಡುಪಿಯಿಂದ ಬರುವ ರಸ್ತೆ ನಗರದ ಒಳಗೆ ಹಾಗೂ ಭಟ್ಕಳ ಕಡೆಗೆ ವಿಭಜನೆಯಾಗುವುದು ಇಲ್ಲಿಯೇ. ಒಂದು ಲೆಕ್ಕದಲ್ಲಿ ಇದೊಂದು ಅಪಾಯಕಾರಿ ಜಾಗವೂ ಹೌದು. ಅಪಘಾತ ತಾಣವೂ ಹೌದು. ಏಕೆಂದರೆ ಕೊಲ್ಲೂರು, ಕಾರವಾರ ಕಡೆಗೆ ಹೋಗುವ ರಸ್ತೆಯ ಸೂಚನಾ ಫಲಕ ಇದ್ದರೂ ಅದು ಸಮರ್ಪಕವಾಗಿ ಚಾಲಕರಿಗೆ ಕಾಣದ ಕಾರಣ ಅನೇಕ ವಾಹನದವರು ನಗರದ ಒಳಗೆ ಬರುವ ರಸ್ತೆಯೆಡೆಗೆ ತಿರುಗಿಸುತ್ತಾರೆ. ನಂತರ ಯಾರಲ್ಲಾದರೂ ದಾರಿ ಕೇಳಿ ಮತ್ತೆ ದಾರಿ ಬದಲಿಸುತ್ತಾರೆ. ಇಂತಹ ಸಂದರ್ಭದಲ್ಲೂ ಅಪಘಾತವಾಗುತ್ತದೆ. ಇದು ಸಾಲದು ಎಂಬಂತೆ ಆಮೆಗತಿಯಲ್ಲಿ ಸಾಗುತ್ತಿರುವ ಫ್ಲೈ ಓವರ್ ಕಾಮಗಾರಿಯ ಕೊಡುಗೆಯೂ ಸಾಕಷ್ಟಿದೆ. ಕಾಮಗಾರಿಯಿಂದಾಗಿ ರಸ್ತೆ ಇಕ್ಕಟ್ಟಾದ ಕಾರಣ ವಾಹನಗಳ ಓಡಾಟ ಸರಾಗವಾಗುತ್ತಿಲ್ಲ.
ಸಿದ್ದಾಪುರ, ಹಾಲಾಡಿ, ಬೈಂದೂರು, ಕೊಲ್ಲೂರು, ಮಂಗಳೂರು, ಉಡುಪಿ ಮೊದಲಾದೆಡೆಗೆ ಹೋಗಲು ಜನ ಬಸ್ ಗೆ ಕಾಯುವುದು ಇಲ್ಲಿಯೇ. ಬೇರೆ ಊರಿನಿಂದ ಬಂದ ಜನ ರಿಕ್ಷಾಗಳನ್ನು ಆಶ್ರಯಿಸುವುದು ಇಲ್ಲಿಯೇ. ಭಂಡಾರ್ಕಾರ್ಸ್, ಆರ್.ಎನ್. ಶೆಟ್ಟಿ ಕಾಲೇಜಿಗೆ ವಿದ್ಯಾರ್ಥಿಗಳು ಬರುವುದು ಈ ವೃತ್ತದ ಮೂಲಕವೇ. ಆದ್ದರಿಂದ ಅಪರಾಧಗಳ ತಡೆಗೆ ಇಲ್ಲೊಂದು ಸಿಸಿ ಕೆಮರಾ ಹಾಕಬೇಕೆಂದು ಸಾರ್ವಜನಿಕರ ಬೇಡಿಕೆ ಇದೆ.
ಶೀಘ್ರ ಕೆಮರಾ ಹಾಕುವ ಕಾರ್ಯ
ಶಾಸ್ತ್ರಿ ಸರ್ಕಲ್‌ನಲ್ಲಿ ಸಿಸಿ ಕೆಮರಾ ಹಾಕಲಾಗುವುದು. ಈ ಕುರಿತು ಬೇಡಿಕೆ ಬಂದಿದ್ದು ಕಾರ್ಯಯೋಜನೆ ಅಂತಿಮ ಹಂತದಲ್ಲಿದೆ. 1 ವಾರದಲ್ಲಿ ಕೆಮರಾ ಅಳವಡಿಸುವ ಚಿಂತನೆಯಿದೆ.
– ಹರೀಶ್ ಆರ್., ಕುಂದಾಪುರ ನಗರ ಠಾಣೆ ಉಪನಿರೀಕ್ಷಕರು