Advertisement

ಸಚಿವರ ಆಗಮನಕ್ಕೆ ಕಾದಿದೆ ಸಿಬಿಟಿ

05:13 PM May 31, 2018 | |

ಹುಬ್ಬಳ್ಳಿ: ಎರಡೆರಡು ಬಾರಿ ಶಿಲಾನ್ಯಾಸ ಕಂಡು, ನಿರ್ಮಾಣದಲ್ಲಿ ಎದುರಾದ ಹಲವು ಅಡೆತಡೆಗಳ ಅಂಕ ಮುಗಿಸಿರುವ ಇಲ್ಲಿನ ನಗರ ಸಾರಿಗೆ ಬಸ್‌ ಟರ್ಮಿನಲ್‌ (ಸಿಬಿಟಿ) ಬಹುತೇಕ ಪೂರ್ಣಗೊಂಡು ಉದ್ಘಾಟನೆಗೆ ನೂತನ ಸಾರಿಗೆ ಸಚಿವರು ಬರುವುದೊಂದೇ ಬಾಕಿ ಇದೆ.

Advertisement

ಸಿಬಿಟಿಯಲ್ಲಿ ಆಧುನಿಕ ಸೌಕರ್ಯಗಳ ಬಿ+ಜಿ+5 ಮಾದರಿಯ ಬಹು ಮಹಡಿಯ ಬಹುಪಯೋಗಿ ಕಟ್ಟಡ ನಿರ್ಮಿಸಲಾಗಿದೆ. ನಿರ್ಮಾಣ ಕಾರ್ಯದಲ್ಲಿ ಆಮೆ ವೇಗಕ್ಕೆ ಸವಾಲು ಹಾಕಿದ್ದ ಕಟ್ಟಡ ಕೊನೆಗೂ ಪೂರ್ಣಗೊಂಡು ನಿಟ್ಟುಸಿರು ಬಿಟ್ಟಿದೆ. 2008ರಲ್ಲಿ ಶಿಲಾನ್ಯಾಸ ಮಾಡಲಾಗಿದ್ದ ಕಟ್ಟಡ 2018ರಲ್ಲಿ ಉದ್ಘಾಟನೆಗೆ ಸಜ್ಜುಗೊಂಡಿದೆ.

ಅಂದಾಜು 17 ಕೋಟಿ ರೂ. ವೆಚ್ಚದಲ್ಲಿ ಸುಮಾರು 8047 ಚದುರ ಅಡಿ ವಿಸ್ತೀರ್ಣದಲ್ಲಿ ನಿರ್ಮಾಣಗೊಳ್ಳುತ್ತಿರುವ ಈ ಕಟ್ಟಡದ ಬೇಸ್‌ಮೆಂಟ್‌ನಲ್ಲಿ ಅಂದಾಜು 10 ಸಾವಿರ ಚದರ ಅಡಿಯಲ್ಲಿ ಸಾರ್ವಜನಿಕರ ವಾಹನಗಳ ನಿಲುಗಡೆಗಾಗಿ ಸ್ಥಳಾವಕಾಶ ಕಲ್ಪಿಸಲಾಗಿದೆ. ಎರಡು ಲಿಫ್ಟ್ ವ್ಯವಸ್ಥೆ ಮಾಡಲಾಗಿದೆ.

ನೆಲಮಹಡಿ ನಗರ ಸಾರಿಗೆ ಬಸ್‌ಗಳ ಸಂಚಾರಕ್ಕೆ ಮೀಸಲಾಗಿದ್ದು, ಇನ್ನುಳಿದ ಅಂತಸ್ತುಗಳು ಪಾಲಿಕೆ, ಎಚ್‌ಡಿಬಿಆರ್‌ಟಿಎಸ್‌ ಕಚೇರಿ, ವಾಣಿಜ್ಯ ಮಳಿಗೆ, ವಿವಿಧ ಇಲಾಖೆಯ ಕಚೇರಿಗಳಿಗೆ ಮೀಸಲಿಡಲು ಯೋಜಿಸಲಾಗಿದೆ. ಈಗಾಗಲೇ ಕಟ್ಟಡದ ಬಹುತೇಕ ಕಾಮಗಾರಿ ಮುಕ್ತಾಯ ಹಂತದಲ್ಲಿದ್ದು, ಅಂತಿಮ ಕಾಮಗಾರಿ ನಡೆದಿದೆ.

ಈಗಾಗಲೇ 2 ಪ್ಲಾಟ್‌ ಫಾರಂನ್ನು ನಗರ ಸಾರಿಗೆ ಸಂಸ್ಥೆಗೆ ನೀಡಲಾಗಿದ್ದು, ಇನ್ನುಳಿದಂತೆ ಬಿಆರ್‌ಟಿಎಸ್‌ಗೆ ನೀಡಲಾಗುತ್ತಿದೆ. ಕಟ್ಟಡದ ಬಹುತೇಕ ಪ್ರದೇಶಗಳಲ್ಲಿ ಬಿಆರ್‌ಟಿಎಸ್‌ ಕಚೇರಿಗಳು ತಲೆ ಎತ್ತಲಿವೆ.

Advertisement

ಈಗಾಗಲೇ ಆರಂಭಗೊಂಡ ಸಿಬಿಟಿ ಬಸ್‌ ನಿಲ್ದಾಣದಲ್ಲಿ ಬಸ್‌ ಸಂಚಾರ ಆರಂಭಿಸಿದ್ದು, ಅದರಲ್ಲಿ 117 ಶೆಡೊÂಲ್‌ನಲ್ಲಿ 1214 ಟ್ರಿಪ್‌ ಬಸ್‌ ಸಂಚಾರ ಮಾಡುತ್ತಿವೆ. ಬಿಆರ್‌ಟಿಎಸ್‌ ನಂತರ ನಗರ ಸಾರಿಗೆ ಬಸ್‌ ಸಂಚಾರದಲ್ಲಿ ಗಣನೀಯವಾಗಿ ಇಳಿಕೆಯಾಗಲಿದ್ದು, ಸಾರಿಗೆ ಬಸ್‌ಗಳು ಬಿಆರ್‌ಟಿಎಸ್‌ ಮುಖ್ಯ ರಸ್ತೆಯನ್ನು ಬಿಟ್ಟು ಎಲ್ಲಾ ಒಳರಸ್ತೆಯಲ್ಲಿ ಸಂಚರಿಸಲಿವೆ.

ನಿಲ್ದಾಣದ ಸುತ್ತಲೂ ಬಿಆರ್‌ಟಿಎಸ್‌ ಕಾಮಗಾರಿ ಪೂರ್ಣಗೊಳ್ಳಬೇಕಿದ್ದು, ಇದು ಮುಗಿದ ಕೂಡಲೇ ಉದ್ಘಾಟನೆಗೆ ಮುಹೂರ್ತ ನಿಗದಿ ಮಾಡಲಾಗುತ್ತದೆಯಂತೆ.

ಇಲ್ಲಿನ ಸಿಟಿ ಬಸ್‌ ಟರ್ಮಿನಲ್‌ (ಸಿಬಿಟಿ) ನೂತನ ಕಟ್ಟಡ ಕಾಮಗಾರಿ ಬಹುತೇಕ ಮುಕ್ತಾಯಗೊಂಡಿದ್ದು ಫಿನಿಶಿಂಗ್‌ ವರ್ಕ್‌ ನಡೆಯುತ್ತಿದೆ. ಈ ಹಿಂದೆಯೇ ಬಸ್‌ ನಿಲ್ದಾಣ ಉದ್ಘಾಟನೆಗೆ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿತ್ತು. ಆದರೆ ಕಾರಣಾಂತರಗಳಿಂದ ಅದು ಮುಂದಕ್ಕೆ ಹೋಗಿದ್ದು ಶೀಘ್ರದಲ್ಲೇ ಈ ಕುರಿತು ತೀರ್ಮಾನ ಕೈಗೊಳ್ಳಲಾಗುವುದು.
ಪಾಂಡುರಂಗ ನಾಯಕ,
ವಾಕರಸಾ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ

ಈಗಾಗಲೇ ನೂತನ ಸಿಟಿ ಬಸ್‌ ನಿಲ್ದಾಣದ ಕಾಮಗಾರಿ ಬಹುತೇಕ ಮುಕ್ತಾಯಗೊಂಡಿದ್ದು, ಶೀಘ್ರದಲ್ಲೇ ಉದ್ಘಾಟನೆಗೆ ಮುಹೂರ್ತ ನಿಗದಿ ಪಡಿಸಬೇಕಿದೆ. ನೂತನ ಸಚಿವ ಸಂಪುಟ ನಂತರ ಉದ್ಘಾಟನೆಗೆ ದಿನಾಂಕ ನಿಗದಿ ಪಡಿಸಲಾಗುವುದು. ಇನ್ನು ಬಿಆರ್‌ ಟಿಎಸ್‌ ಕಾಮಗಾರಿ ಬಾಕಿ ಇದ್ದು ಕೂಡಲೇ ಮುಕ್ತಾಯಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು. 
ಪ್ರಸಾದ ಅಬ್ಬಯ್ಯ,
ಶಾಸಕ

ಬಸವರಾಜ ಹೂಗಾರ

Advertisement

Udayavani is now on Telegram. Click here to join our channel and stay updated with the latest news.

Next