ನವದೆಹಲಿ: ಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿ (ಸಿಬಿಎಸ್‌ಇ)ಯ 10, 12ನೇ ತರಗತಿಯ ಬಾಕಿ ಉಳಿದ 29 ವಿಷಯಗಳಲ್ಲಿನ ಪರೀಕ್ಷೆಗಳನ್ನು ಜು.1-15ರ ನಡುವೆ ನಡೆಸಲಾಗುತ್ತದೆ. ಆಗಸ್ಟ್ ಅಂತ್ಯದ ಒಳಗಾಗಿ ಫಲಿತಾಂಶ ಪ್ರಕಟಿಸಲಾಗುತ್ತದೆ ಎಂದು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ರಮೇಶ್ ಪೋಖ್ರಿಯಾಲ್ ನಿಶಾಂಕ್ ಶುಕ್ರವಾರ ನವದೆಹಲಿಯಲ್ಲಿ ಪ್ರಕಟಿಸಿದ್ದಾರೆ.
ಐಐಟಿ, ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಗಳಿಗೆ ನಡೆಯುವ ಜಾಯಿಂಟ್ ಎಂಟ್ರೆನ್ಸ್ ಎಕ್ಸಾಮಿನೇಷನ್ ಜು.18-23ರ ನಡುವೆ ನಡೆಯಲಿದೆ. ಅದಕ್ಕೆ ಮೊದಲು ಬಾಕಿ ಉಳಿದಿರುವ ಪರೀಕ್ಷೆ ನಡೆಸಲು ಸಿಬಿಎಸ್‌ಇ ತೀರ್ಮಾನಿಸಿದೆ.
ದೇಶದಲ್ಲಿ ಕೋವಿಡ್-19 ಹಿನ್ನೆಲೆಯಲ್ಲಿ ಲಾಕ್‌ಡೌನ್ ಘೋಷಣೆಯಾಗಿದ್ದರಿಂದ ಬಾಕಿ ಉಳಿದಿರುವ ಪರೀಕ್ಷೆ ಮುಂದೂಡಲಾಗಿತ್ತು.
ಟೀವಿ ಪಾಠಕ್ಕೆ 12 ಹೊಸ ಚಾನಲ್: ಒಂದೂವರೆ ತಿಂಗಳಿನಿಂದ ಮನೆಯಲ್ಲೇ ಕುಳಿತು, ಶಾಲೆ ಯಾವಾಗ ಶುರುವಾಗುತ್ತೆ ಎಂದು ಕಾಯುತ್ತಾ ಕುಳಿತಿರುವ ವಿದ್ಯಾರ್ಥಿಗಳ ನೆರವಿಗೆ ಧಾವಿಸಿರುವ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ, ಸದ್ಯದಲ್ಲೇ 12 ಹೊಸ ಡೈರೆಕ್ಟ್-ಟು-ಹೋಮ್ (ಡಿಟಿಎಚ್) ಚಾನಲ್‌ಗಳನ್ನು ಆರಂಭಿಸಲು ನಿರ್ಧರಿಸಿದೆ. ಇಲ್ಲಿ ಒಂದೊಂದು ಚಾನಲ್ ಒಂದೊಂದು ತರಗತಿಗೆ ಮೀಸಲಿರಲಿದೆ ಎಂದು ಸಚಿವಾಲಯ ತಿಳಿಸಿದೆ.
ಈಗಾಗಲೇ ಆನ್ ಲೈನ್ ಮೂಲಕ ಪಾಠ ನಡೆಯುತ್ತಿದ್ದರೂ ಅಂತರ್ಜಾಲ ಸಂಪರ್ಕದ ಅಲಭ್ಯತೆ ಮತ್ತು ನಿಧಾನ ಗತಿಯ ಇಂಟರ್‌ನೆಟ್‌ನಿಂದಾಗಿ ಲಕ್ಷಾಂತರ ವಿದ್ಯಾರ್ಥಿಗಳಿಗೆ ಅದು ತಲುಪುತ್ತಿಲ್ಲ. ಹೀಗಾಗಿ ಒನ್ ಕ್ಲಾಸ್, ಒನ್ ಚಾನಲ್ ಯೋಜನೆ ಆರಂಭಿಸಲಾಗಿದೆ. ಪ್ರತಿಯೊಂದು ಚಾನಲ್‌ನಲ್ಲಿ ಏನೇನು ವಿಷಯ ಇರಬೇಕೆಂದು ಶಾಲಾ ಶಿಕ್ಷಣ ಇಲಾಖೆ ನಿರ್ಧರಿಸಲಿದೆ. ಜತೆಗೆ ವಿಷಯ ಅಭಿವೃದ್ಧಿಪಡಿಸಲು ಎನ್‌ಸಿಇಆರ್‌ಟಿ ಮತ್ತು ಸಿಬಿಎಸ್‌ಇ ಸಂಸ್ಥೆಗಳ ತಜ್ಞರ ನೆರವು ಪಡೆಯಲು ಇಲಾಖೆ ಚಿಂತನೆ ನಡೆಸಿದೆ.
1ರಿಂದ 12ನೇ ತರಗತಿಗೆ ಮೀಸಲಾಗಿರುವ ಈ ಚಾನಲ್‌ಗಳು ಉಚಿತವಾಗಿರಲಿದ್ದು, ಇವು ಆರಂಭವಾದ ಬಳಿಕ ಕೇಬಲ್ ಆಪರೇಟರ್‌ಗೆ ತಿಳಿಸಿ, ಚಾನಲ್ ಸಂಪರ್ಕ ಪಡೆಯಬಹುದು.