Advertisement

ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ ಸಿಬಿಎಸ್‌ಇ ಅಧಿಕಾರಿ ಸಸ್ಪೆಂಡ್‌

07:26 AM Apr 02, 2018 | Team Udayavani |

ಹೊಸದಿಲ್ಲಿ: ಸಿಬಿಎಸ್‌ಇ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಡಳಿಯ ಅಧಿಕಾರಿಯೊಬ್ಬರನ್ನು ಸಸ್ಪೆಂಡ್‌ ಮಾಡಲಾಗಿದೆ. ಅವರ ವಿರುದ್ಧ ಇಲಾಖಾ ವಿಚಾರಣೆಗೆ ಆದೇಶಿಸಲಾಗಿದೆ. ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಪ್ರಕಾಶ್‌ ಜಾವಡೇಕರ್‌ ಸೂಚನೆ ಮೇರೆಗೆ ಕೆ.ಎಸ್‌.ರಾಣಾ ಎಂಬ ಅಧಿಕಾರಿ ವಿರುದ್ಧ  ಕ್ರಮ ಕೈಗೊಳ್ಳಲಾಗಿದೆ ಎಂದು ಶಿಕ್ಷಣ ಇಲಾಖೆ ಕಾರ್ಯದರ್ಶಿ ಅನಿಲ್‌ ಸ್ವರೂಪ್‌ ಪ್ರಕಟಿಸಿದ್ದಾರೆ. ರಾಣಾ ಅವರು ಹೊಸದಿಲ್ಲಿ ಹೊರವಲಯದ ಬವಾನಾ ಎಂಬ ಕೇಂದ್ರ ಅಧಿಕಾರಿಯಾಗಿದ್ದರು.

Advertisement

ಇದೇ ಕೇಂದ್ರದ ಇಬ್ಬರು ಅಧ್ಯಾಪಕರು ಮತ್ತು ಕೋಚಿಂಗ್‌ ಸೆಂಟರ್‌ನ ಒಬ್ಬನನ್ನು ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ದಸ್ತಗಿರಿ ಮಾಡಿದ್ದಾರೆ. ಈ ಮೂವರು 12ನೇ ತರಗತಿಯ ಇಕನಾಮಿಕ್ಸ್‌  ಪರೀಕ್ಷೆಯ ಒಂದು ವಾರ ಮೊದಲೇ ಪ್ರಶ್ನೆ ಪತ್ರಿಕೆಯನ್ನು ವಾಟ್ಸ್‌ಆ್ಯಪ್‌ ಮೂಲಕ ಸೋರಿಕೆ ಮಾಡಲು ಯೋಜನೆ ರೂಪಿಸಿದ್ದರು ಎಂದು ಹೇಳಲಾಗಿದೆ.

ಹೊಸದಿಲ್ಲಿ ಪೊಲೀಸ್‌ ಇಲಾಖೆಯ ಅಪ ರಾಧ ವಿಭಾಗದ ಜಂಟಿ ಆಯುಕ್ತ ಅಲೋಕ್‌ ಕುಮಾರ್‌ ನೀಡಿದ ಮಾಹಿತಿ ಪ್ರಕಾರ ಪರೀಕ್ಷೆ ಆರಂಭವಾಗುವ 40 ನಿಮಿಷಗಳ ಮೊದಲು ಪ್ರಶ್ನೆ ಪತ್ರಿಕೆಗಳು ಇರುವ ಕವರ್‌ ತೆರೆದು, ಅದರ ಫೋಟೋ ತೆಗೆದು ಕೋಚಿಂಗ್‌ ಸೆಂಟರ್‌ನ ತಖೀರ್‌ ಎಂಬಾತನಿಗೆ ಬಂಧಿತ ಶಿಕ್ಷಕರು ವಾಟ್ಸ್‌ ಆ್ಯಪ್‌ನಲ್ಲಿ ಕಳುಹಿಸಿದ್ದರು. ತಖೀರ್‌ ಅದನ್ನು ವಿದ್ಯಾರ್ಥಿಗಳಿಗೆ ಫಾರ್ವರ್ಡ್‌ ಮಾಡಿದ್ದ.

ಇದೇ ವೇಳೆ ಕಾಂಗ್ರೆಸ್‌ ನಾಯಕ ಪವನ್‌ ಖೇರಾ ಮಾತನಾಡಿ ಪ್ರಧಾನಿ ಮೋದಿ ಪ್ರಶ್ನೆ ಪತ್ರಿಕೆ ಸೋರಿಕೆ ಬಗ್ಗೆ ಮೌನ ಮುರಿಯಲೇಬೇಕು ಎಂದು ಒತ್ತಾಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next