Advertisement

29ರ ವರೆಗೆ ಅಸ್ತಾನಾಗೆ ರಿಲೀಫ್

03:49 PM Oct 24, 2018 | |

ಹೊಸದಿಲ್ಲಿ:  ಅಗ್ರಗಣ್ಯ ತನಿಖಾ ಸಂಸ್ಥೆ ಸಿಬಿಐನ ಇಬ್ಬರು ಹಿರಿಯ ಅಧಿಕಾರಿಗಳ ಗುದ್ದಾಟ ಮಂಗಳವಾರವೂ ಮುಂದುವರಿದಿದೆ. ಸಂಸ್ಥೆಯ ವಿಶೇಷ ನಿರ್ದೇಶಕ ರಾಕೇಶ್‌ ಅಸ್ತಾನಾ ತಮ್ಮ ವಿರುದ್ಧದ ಕಾನೂನು ಪ್ರಕ್ರಿಯೆಗಳ ತಡೆ ಕೋರಿ ದಿಲ್ಲಿ ಹೈಕೋರ್ಟ್‌ಗೆ ಸಲ್ಲಿಸಿರುವ ಮನವಿಗೆ ಮನ್ನಣೆ ಸಿಕ್ಕಿದ್ದು, ಮುಂದಿನ ಸೋಮವಾರ (ಅ.29) ವರೆಗೆ ಅವರನ್ನು ಬಂಧಿಸಬಾರದು. ಯಥಾಸ್ಥಿತಿ ಕಾಯ್ದುಕೊಳ್ಳಬೇಕು ಎಂದು ಆದೇಶ ನೀಡಿದೆ. ಆದರೆ ಅವರ ವಿರುದ್ಧ ಇರುವ ಆರೋಪಗಳ ಗಂಭೀರತೆಯನ್ನು ಪರಿಗಣಿಸಿ ತನಿಖೆ ಮುಂದುವರಿಸಲು ನ್ಯಾ| ನಜೀಂ ವಝಿರಿ ಅವರನ್ನೊಳಗೊಂಡ ಪೀಠ ಸೂಚಿಸಿದೆ.

Advertisement

ಅಸ್ತಾನಾ ಜತೆಗೆ ಸಿಬಿಐನ ಬಂಧಿತ ಡಿವೈಎಸ್ಪಿ ದೇವೇಂದ್ರ ಕುಮಾರ್‌ ಕೂಡ ತಮ್ಮ ವಿರುದ್ಧ ದಾಖಲಾಗಿರುವ ಎಫ್ಐಆರ್‌ ವಜಾ ಮಾಡುವಂತೆ ಒತ್ತಾಯಿಸಿ ಹೈಕೋರ್ಟ್‌ಗೆ ಮನವಿ ಸಲ್ಲಿಸಿದ್ದರು. ಈ ಮನವಿಗಳ ಪರಿಶೀಲನೆ ನಡೆಸಿರುವ ಹೈಕೋರ್ಟ್‌, ಸಿಬಿಐ ನಿರ್ದೇಶಕ ಆಲೋಕ್‌ ಕುಮಾರ್‌ ವರ್ಮಾ ಮತ್ತು ಜಂಟಿ ನಿರ್ದೇಶಕ ಎ.ಕೆ.ಶರ್ಮಾ, ಕೇಂದ್ರ ಸಿಬಂದಿ ಮತ್ತು ತರಬೇತಿ ನಿರ್ದೇಶನಾ ಲಯಕ್ಕೂ ನೋಟಿಸ್‌ ನೀಡಿದೆ. ಮೊಬೈಲ್‌ ಫೋನ್‌ ಸೇರಿದಂತೆ ಎಲ್ಲ ದಾಖಲೆಗಳನ್ನೂ ಹೈಕೋರ್ಟ್‌ಗೆ ನೀಡುವಂತೆಯೂ ಸೂಚಿಸಿದೆ. 

7 ದಿನ ಅವಕಾಶ: ಈ ನಡುವೆ ಬಂಧಿತ ಡಿವೈಎಸ್‌ಪಿ ದೇವೇಂದ್ರ ಕುಮಾರ್‌ರನ್ನು ವಿಚಾರಣೆ ನಡೆಸಲು ಸಿಬಿಐಗೆ 7 ದಿನಗಳ ಅವಕಾಶ ನೀಡಿದೆ ವಿಶೇಷ ಕೋರ್ಟ್‌. ಆರೋಪಗಳನ್ನು ಗಂಭೀರ ಎಂದು ಪರಿಗಣಿಸಿರುವ ಕೋರ್ಟ್‌  ಬಂಧಿತ ಕುಮಾರ್‌ ಸಹಿತ ಸರಕಾರಿ ಅಧಿಕಾರಿಗಳ ವಿರುದ್ಧ ವಸೂಲಿ ಆರೋಪ ಸಹಿತ ಇತರ ಗುರುತರ ಆರೋಪಗಳು ಕಳವಳಕಾರಿ ಎಂದಿದೆ. ಬಿಕ್ಕಟ್ಟು ಬಿಗಡಾಯಿಸಿದ ಹಿನ್ನೆಲೆಯಲ್ಲಿ ಸೋಮವಾರವೇ ಪ್ರಧಾನಿ ನರೇಂದ್ರ ಮೋದಿಯವರು ಸಿಬಿಐ ನಿರ್ದೇಶಕ ಆಲೋಕ್‌ ಕುಮಾರ್‌ ಮತ್ತು ರಾಕೇಶ್‌ ಅಸ್ತಾನಾರನ್ನು ಭೇಟಿಯಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next