ಹೊಸದಿಲ್ಲಿ : ಸಿಬಿಐ ವರ್ಸಸ್ ಮಮತಾ ಪ್ರಕರಣ ಬಿಸಿ ಏರುತ್ತಿರುವ ನಡುವೆಯೇ ಇಂದು ಸೋಮವಾರ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರು ಪಶ್ಚಿಮ ಬಂಗಾಲ ರಾಜ್ಯಪಾಲ ಕೇಸರಿ ನಾಥ ತ್ರಿಪಾಠಿ ಅವರೊಂದಿಗೆ ಮಾತನಾಡಿದ್ದಾರೆ. ಅಂತೆಯೇ ಕೇಂದ್ರ ಗೃಹ ಸಚಿವಾಲಯ ರಾಜ್ಯ ರಾಜಧಾನಿಯಲ್ಲಿನ ಪರಿಸ್ಥಿತಿ ಮೇಲೆ ತೀವ್ರ ನಿಗಾ ಇರಿಸಿದೆ.
ಬಹು ಕೋಟಿ ಶಾರದಾ ಚಿಟ್ ಫಂಡ್ ಹಗರಣದಲ್ಲಿ ಕೋಲ್ಕತ ಪೊಲೀಸ್ ಕಮಿಷನರ್ ಇಲೆಕ್ಟ್ರಾನಿಕ್ ಸಾಕ್ಷ್ಯವನ್ನು ನಾಶ ಮಾಡಿದ್ದಾರೆ ಎಂಬ ಸಿಬಿಐ ಆರೋಪದ ಹಿನ್ನೆಲೆಯಲ್ಲಿ ಸಿಬಿಐ ಅಧಿಕಾರಿಗಳು ತಮ್ಮ ಕರ್ತವ್ಯವನ್ನು ನಿರ್ವಹಿಸುವುದಕ್ಕೆ ತಡೆ ಒಡ್ಡಲಾಯಿತೆಂಬ ಘಟನೆ ಹಿನ್ನೆಲೆಯಲ್ಲಿ ಗೃಹ ಸಚಿವ ರಾಜನಾಥ್ ಸಿಂಗ್ ಅವರು ಪ.ಬಂ. ರಾಜ್ಯಪಾಲರೊಡನೆ ಮಾತುಕತೆ ನಡೆಸಿರುವುದು ಪ್ರಮುಖ ರಾಜಕೀಯ ಬೆಳವಣಿಗೆ ಎಂದು ತಿಳಿಯಲಾಗಿದೆ.
ಸಿಬಿಐ ಅಧಿಕಾರಿಗಳು ನಿನ್ನೆ ಭಾನುವಾರ ಕೋಲ್ಕತದಲ್ಲಿ ತಮ್ಮ ತನಿಖಾ ಕರ್ತವ್ಯವನ್ನು ನಿರ್ವಹಿಸುವಾಗ ಅವರ ವೈಯಕ್ತಿಕ ಸುರಕ್ಷೆಗೆ ಸುರಕ್ಷೆಗೆ ಬೆದರಿಕೆ ಎದುರಾದ ಹಿನ್ನೆಲೆಯಲ್ಲಿ ಕೋಲ್ಕತದಲ್ಲಿನ ಸಿಬಿಐ ಕಾರ್ಯಾಲಯ ಮತ್ತು ಸಿಬಿಐ ಅಧಿಕಾರಿಗಳ ನಿವಾಸಗಬಿಗà ಭದ್ರತೆ ಒದಗಿಸಲು ಕೇಂದ್ರ ಪಡೆಗಳನ್ನು ನಿಯೋಜಿಸಲು ಕೇಂದ್ರ ಗೃಹ ಸಚಿವಾಲಯ ನಿರ್ಧರಿಸಿತು.
ಕೋಲ್ಕತದಲ್ಲಿ ನಡೆದಿರುವ ವಿದ್ಯಮಾನಗಳು ದುರದೃಷ್ಟಕರ ಮತ್ತು ಅಭೂತಪೂರ್ವ ಎಂದು ರಾಜನಾಥ್ ಸಿಂಗ್, ರಾಜ್ಯಪಾಲರ ಜತೆಗಿನ ಮಾತುಕತೆಯಲ್ಲಿ ಹೇಳಿದರು.
ಇದಕ್ಕೆ ಉತ್ತರವಾಗಿ ರಾಜ್ಯಪಾಲ ತ್ರಿಪಾಠಿ ಅವರು ತಾನು ರಾಜ್ಯದ ಮುಖ್ಯ ಕಾರ್ಯದರ್ಶಿ ಮತ್ತು ಪೊಲೀಸ್ ಮಹಾ ನಿರ್ದೇಶಕರನ್ನು (ಡಿಜಿಪಿ) ಕರೆಸಿಕೊಂಡ ಬಿಕ್ಕಟ್ಟನ್ನು ಪರಿಹರಿಸುವ ನಿಟ್ಟಿನಲ್ಲಿ ಕೂಡಲೇ ಕ್ರಮ ತೆಗೆದುಕೊಳ್ಳುವಂತೆ ಆದೇಶಿಸಿರುವುದಾಗಿ ತಿಳಿಸಿದರು.