ಲಕ್ನೋ : ಉತ್ತರ ಪ್ರದೇಶದ ಉನ್ನಾವೋ ರೇಪ್ ಕೇಸ್ ಆರೋಪಿಯಾಗಿರುವ ಬಿಜೆಪಿ ಶಾಸಕ ಕುಲದೀಪ್ ಸಿಂಗ್ ಸೇಂಗರ್ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.
ಇದೇ ವೇಳೆ ಈ ರೇಪ್ ಕೇಸ್ ಮತ್ತು ರೇಪ್ ಸಂತ್ರಸ್ತೆಯ ತಂದೆಯ ಪೊಲೀಸ್ ಕಸ್ಟಡಿ ಸಾವಿನ ಕುರಿತಾಗಿ ತನಿಖೆ ನಡೆಸುವಂತೆ ಸಿಬಿಐಗೆ ಆದೇಶ ನೀಡಲಾಗಿದೆ.
ರೇಪ್ ಆರೋಪದ ಬಗ್ಗೆ ಮಾಧ್ಯಮದವರು ಪ್ರಶ್ನಿಸಿದಾಗ ನಿನ್ನೆ ಬುಧವಾರ ರಾತ್ರಿ ಸೇಂಗರ್ ಅವರ ಬೆಂಬಲಿಗರು ಮಾಧ್ಯಮದವರ ಮೇಲೆ ಹಲ್ಲೆ ನಡೆಸಿದರು. ಇದನ್ನು ಅನುಸರಿಸಿ ಸೇಂಗರ್ ವಿರುದ್ಧ ಎಫ್ಐಆರ್ ದಾಖಲಾಗಿರುವುದು ದೃಢಪಟ್ಟಿತು.
ಶಾಸಕ ಸೇಂಗರ್ ವಿರುದ್ಧ ಪೋಕ್‌ಸೋ ಕಾಯಿದೆ ಮತ್ತು ಐಪಿಸಿ ಸೆ.336, 363, 376ಮತ್ತು 506ರ ಅಡಿ ಪೊಲೀಸರು ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ತನ್ನ ವಿರುದ್ಧ ರೇಪ್ ಆರೋಪವನ್ನು ಅಲ್ಲಗಳೆದಿರುವ ಶಾಸಕ ಸೇಂಗರ್ ಅವರು ಸುಳ್ಳು ಆರೋಪಗಳಿಗಾಗಿ ತನ್ನ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ ಎಂದು ಪ್ರತಿಕ್ರಿಯಿಸಿದ್ದಾರೆ.
ಸೇಂಗರ್ ನಿನ್ನೆ ಬುಧಾವರ ರಾತ್ರಿ ಲಕ್ನೋದಲ್ಲಿನ ಹಿರಿಯ ಪೊಲೀಸ್ ಸುಪರಿಂಟೆಂಡರ ಕಚೇರಿಗೆ ಹೋಗಿದ್ದು ಅರ್ಧ ತಾಸಿನ ಬಳಿಕ ಹೊರ ಬಂದಿದ್ದರು.