Advertisement

ರೈಲ್ವೆ ಟಿಕೆಟ್‌ ವ್ಯವಸ್ಥೆ ಬುಡಮೇಲು: ಸಿಬಿಐ ಟೆಕ್ಕಿ ಅರೆಸ್ಟ್

11:31 AM Dec 28, 2017 | Team Udayavani |

ಹೊಸದಿಲ್ಲಿ : ತತ್ಕಾಲ್‌ ವರ್ಗದಡಿ ಕೆಲವು ಏಜಂಟರಿಗೆ ಕ್ಷಣಾರ್ಧದಲ್ಲಿ ದೃಢೀಕೃತ ರೈಲ್ವೇ ಟಿಕೆಟ್‌ಗಳನ್ನು ಬುಕ್‌ ಮಾಡಲು ಹೇಗೆ ಸಾಧ್ಯವಾಗುತ್ತದೆ ಮತ್ತು ಅದೇ ವೇಳೆ ಶತ ಪ್ರಯತ್ನ ನಡೆಸಿದರೂ ಸಹಸ್ರಾರು ಪ್ರಯಾಣಿಕರಿಗೆ ತಮ್ಮ ಕಂಪ್ಯೂಟರ್‌ಗಳಲ್ಲಿ ಅಥವಾ ರಿಸರ್ವೇಶನ್‌ ಕೌಂಟರ್‌ಗಳಲ್ಲಿ ಟಿಕೆಟ್‌ ಬುಕ್‌ ಮಾಡಲು ಏಕೆ ಸಾಧ್ಯವಾಗುತ್ತಿಲ್ಲ ?

Advertisement

ಈ ಯಕ್ಷ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ.

ಭ್ರಷ್ಟಾಚಾರ ನಿಗ್ರಹ ಸಿಬಿಐ ದಳದಲ್ಲೇ ಕೆಲಸ ಮಾಡಿಕೊಂಡಿರುವ ಸಾಫ್ಟ್ ವೇರ್‌ ಪ್ರೋಗ್ರಾಮರ್‌ ಒಬ್ಬ  ಏಜಂಟರಿಗೆ ಅನುಕೂಲ ಮಾಡಿಕೊಡುವ ಕಳ್ಳ ತಂತ್ರಾಂಶವೊಂದನ್ನು ರೂಪಿಸಿರುವುದನ್ನು ಪತ್ತೆ ಹಚ್ಚಲಾಗಿದ್ದು ಆತನೇ ಈ ಬೃಹತ್‌ ಕಳ್ಳ ಜಾಲದ ಮಾಸ್ಟರ್‌ ಮೈಂಡ್‌ ಎಂಬುದು ಬಯಲಾಗಿದೆ. ರೈಲ್ವೆ ಟಿಕೆಟಿಂಗ್‌ ವ್ಯವಸ್ಥೆಯನ್ನು ಆ ಮೂಲಕ ಬುಡುಮೇಲು ಗೊಳಿಸಿದ ಆರೋಪದ ಮೇಲೆ ಸಿಬಿಐನ ಆ ಟೆಕ್ಕಿಯನ್ನು ಬಂಧಿಸಲಾಗಿದೆ.

ಸಿಬಿಐನಿಂದ ಬಂಧಿತನಾಗಿರುವ ಸಹಾಯಕ ಪ್ರೋಗ್ರಾಮರ್‌ ನ ಹೆಸರು ಅಜಯ್‌ ಗರ್ಗ್‌; ಈತನಿಗೆ ಈ ಕಳ್ಳ ತಂತ್ರಾಶವನ್ನು ಟ್ರಾವೆಲ್‌ ಏಜಂಟರುಗಳಿಗೆ ಮಾರಾಟ ಮಾಡಿ ಭಾರೀ ಹಣ ಮಾಡುವಲ್ಲಿ ನೆರವಾಗುತ್ತಿದ್ದವನು ಅನಿಲ್‌ ಗುಪ್ತಾ.

ಅಜಯ್‌ ಗರ್ಗ್‌ ತಯಾರಿಸಿದ ಕಳ್ಳ ತಂತ್ರಾಂಶವನ್ನು ಅನಿಲ್‌ ಗುಪ್ತಾ ಭಾರೀ ಬೆಲೆಗೆ ರೈಲ್ವೇ ಟಿಕೆಟ್‌ ಬುಕ್ಕಿಂಗ್‌ ಏಜಂಟರಿಗೆ ಮಾರುತ್ತಿದ್ದ ಎಂದು ಸಿಬಿಐ ವಕ್ತಾರ ಅಭಿಷೇಕ್‌ ದಯಾಳ್‌ ತಿಳಿಸಿದ್ದಾರೆ.

Advertisement

ಗರ್ಗ್‌ ಮತ್ತು ಗುಪ್ತಾ ಮಾತ್ರವಲ್ಲದೆ ಈ ಕಳ್ಳ ಜಾಲದಲ್ಲಿ ಶಾಮೀಲಾಗಿರುವ ಇನ್ನೂ 13 ಮಂದಿಯ ವಿರುದ್ಧ ಸಿಬಿಐ ಕೇಸು ದಾಖಲಿಸಿಕೊಂಡಿದೆ. ಇವರಲ್ಲಿ ಗರ್ಗ್‌ ಅವರ ಕುಟುಂಬ ಸದಸ್ಯರು ಮತ್ತು ಕೆಲವು ಟ್ರಾವೆಲ್‌ ಏಜಂಟರುಗಳು ಇದ್ದಾರೆ.

ಗರ್ಗ್‌ ನ ಕಳ್ಳ ತಂತ್ರಾಂಶವನ್ನು ಬಳಸುವ ಟ್ರಾವೆಲ್‌ ಏಜಂಟರಿಂದ ಹಣ ವಸೂಲಿ ಮಾಡುವ ಕೆಲಸವನ್ನು ಗರ್ಗ್‌ನ ಹೆತ್ತವರು, ಸಹೋದರಿಯರು ಮತ್ತು ಭಾವಂದಿರು ಮಾಡುತ್ತಿದ್ದರು.

ಇನ್ನೂ ವಿಶೇಷ ಸಂಗತಿ ಎಂದರೆ ಟ್ರಾವೆಲ್‌ ಏಜಂಟರಿಂದ ಗರ್ಗ್‌ ಕುಟುಂಬ ಸದಸ್ಯರು ಬಿಟ್‌ ಕಾಯಿನ್‌ ಮತ್ತು ಹವಾಲಾ ಮೂಲಕ ಹಣ ಸಂಗ್ರಹಿಸುತ್ತಿದ್ದರು ಮತ್ತು ಆ ಮೂಲಕ ಭದ್ರತಾ ವಿಚಕ್ಷಣೆಯಿಂದ ತಪ್ಪಿಸಿಕೊಳ್ಳುತ್ತಿದ್ದರು. ಈ ರೀತಿ ಬಿಟ್‌ ಕಾಯಿನ್‌ ಅಥವಾ ಹವಾಲಾ ಮೂಲಕ ಹಣ ಪಾವತಿಸುತ್ತಿದ್ದ ಟ್ರಾವೆಲ್‌ ಏಜಂಟರುಗಳ ಪೈಕಿ 7 ಮಂದಿದ ಜೌನ್‌ಪುರದವರು ಮತ್ತು ಮೂವರು ಮುಂಬಯಿಯವರು. ಸಿಬಿಐ ಅಧಿಕಾರಿಗಳು ಈ ಎಲ್ಲ ಹತ್ತು ಮಂದಿಯನ್ನು ಗುರುತಿಸಿ ಅವರ ವಿರುದ್ಧ ಕೇಸು ದಾಖಲಿಸಿಕೊಂಡಿದ್ದಾರೆ. 

ಗರ್ಗ್‌ ಮತ್ತು ಗುಪ್ತಾ ಅವರನ್ನು ನ್ಯಾಯಾಲಯವು ಐದು ದಿನಗಳ ಸಿಬಿಐ ಕಸ್ಟಡಿಗೆ ಒಪ್ಪಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next