ಹೊಸದಿಲ್ಲಿ : ಬಿಹಾರ ಸರಕಾರದ ಸುಮಾರು 1,000 ಕೋಟಿ ರೂ. ಹಣವನ್ನು ಸರಕಾರೇತರ ಸಂಘಟನೆಯೊಂದಕ್ಕೆ ವರ್ಗಾಯಿಸಲಾದ ಬಿಹಾರದ ಶ್ರೀಜನ ಹಗರಣದ ತನಿಖೆಯನ್ನು ಇದೀಗ ಸಿಬಿಐ ಕೈಗೆತ್ತಿಕೊಂಡಿದೆ.
ಸುಮಾರು 10 ಎಫ್ಐಆರ್‌ಗಳನ್ನು ದಾಖಲಿಸಿದ್ದ ಕೇಂದ್ರ ತನಿಖಾ ದಳದ ಈ ಕೇಸುಗಳ ತನಿಖೆಯನ್ನು ಬಿಹಾರ ಪೊಲೀಸ್‌ನ ಆರ್ಥಿಕ ಅಪರಾಧಗಳ ಘಟಕ ನಡೆಸುತ್ತಿತ್ತು.
ಬಿಹಾರ ಸರಕಾರದ ಕೋರಿಕೆಯ ಪ್ರಕಾರ ಈ ಹಗರಣದ ತನಿಖೆಯನ್ನು ಇದೀಗ ಸಿಬಿಐ ಕೈಗೆತ್ತಿಕೊಂಡಿದೆ. ತನಿಖಾ ನಿಯಮಗಳ ಪ್ರಕಾರ ಸಿಬಿಐ, ರಾಜ್ಯ ಪೊಲೀಸರಿಂದ ಕೇಸುಗಳ ತನಿಖೆಯನ್ನು ಕೈಗೆತ್ತಿಕೊಂಡಾಗ ಹೊಸ ಎಫ್ಐಆರ್‌ಗಳನ್ನು ದಾಖಲಿಸುತ್ತದೆ. ಇಲ್ಲವೇ ಅವುಗಳ ಸಾರಾಂಶವನ್ನು ತನ್ನ ಅಂತಿಮ ವರದಿಯಲ್ಲಿ ಅಥವಾ ಮುಚ್ಚುಗಡೆ ವರದಿಯಲ್ಲಿ ಉಲ್ಲೇಖೀಸುತ್ತದೆ.
ಎನ್‌ಜಿಓ – ಶ್ರೀಜನ ಮಹಿಳಾ ವಿಕಾಸ್ ಸಮಿತಿಯ ನಿರ್ದೇಶಕಿ ಮನೋರಮಾ ದೇವಿ, ಸಂಘಟನೆಯ ಇತರ ಅಧಿಕಾರಿಗಳು ಮತ್ತು ಬ್ಯಾಂಕ್ ಅಧಿಕಾರಿಗಳ ವಿರುದ್ಧ ಸಿಬಿಐ ಎಫ್ಐಆರ್ ದಾಖಲಿಸಿದೆ. ಹಗರಣಕ್ಕೆ ಸಂಬಂಧಿಸಿದಂತೆ ರಾಜ್ಯ ಪೊಲೀಸರಿಗೆ ಸಂಬಂಧಿತ ದಾಖಲೆ ಪತ್ರಗಳನ್ನು ತೆಗೆದುಕೊಳ್ಳಲು ಕೇಂದ್ರ ಸರಕಾರ ಸಿಬಿಐಗೆ ಸೂಚಿಸಿದೆ.
ಶ್ರೀಜನ ಸಂಸ್ಥೆಯ ಕಾರ್ಯದರ್ಶಿ ಪ್ರಿಯಾ ಕುಮಾರ್ ಮತ್ತು ಆಕೆಯ ಪತಿಯ ವಿರುದ್ಧ 950 ಕೋಟಿ ರೂ.ಗಳ ಸರಕಾರಿ ನಿಧಿಯನ್ನು ಭಾಗಲ್ಪುರದಲ್ಲಿ ವರ್ಗಾಯಿಸಿಕೊಂಡ ಹಗರಣಕ್ಕೆ ಸಂಬಂಧಿಸಿ ಬಿಹಾರ ಪೊಲೀಸರು ಲುಕೌಟ್ ನೊಟೀಸ್ ಜಾರಿ ಮಾಡಿದ್ದರು.
ಪ್ರಿಯಾ ಕುಮಾರ್ ಅವರು ಈ ವರ್ಷದ ಆದಿಯಲ್ಲಿ ನಿಧನ ಹೊಂದಿದ ಎನ್‌ಜಿಓ ಸ್ಥಾಪಕಿ ಮನೋರಮಾ ದೇವಿ ಅವರ ಸೊಸೆ. ಮನೋರಮಾ ದೇವಿ ನಿಧನಾನಂತರ ಪ್ರಿಯಾ ಅವರು ಈ ಎನ್‌ಜಿಓ ಸಂಘಟನೆಯನ್ನು ನಡೆಸುತ್ತಿದ್ದರು.