ಕೋಲ್ಕತ : ರಾಜ್ಯ ಶಾಲೆಗಳಲ್ಲಿನ ನೇಮಕಾತಿ ಅಕ್ರಮಗಳಿಗೆ ಸಂಬಂಧಿಸಿದಂತೆ ಬಂಧಿತರಾಗಿರುವ ಪಶ್ಚಿಮ ಬಂಗಾಳದ ಮಾಜಿ ಸಚಿವ ಪಾರ್ಥ ಚಟರ್ಜಿ ಅವರ ಜಾಮೀನು ಅರ್ಜಿಯನ್ನು ಸಿಬಿಐ ನ್ಯಾಯಾಲಯ ಗುರುವಾರ ತಿರಸ್ಕರಿಸಿದೆ ಮತ್ತು ಅವರ ನ್ಯಾಯಾಂಗ ಬಂಧನವನ್ನು ಫೆಬ್ರವರಿ 16 ರವರೆಗೆ ವಿಸ್ತರಿಸಿದೆ.
ಪಶ್ಚಿಮ ಬಂಗಾಳ ಶಾಲಾ ಸೇವಾ ಆಯೋಗ (ಎಸ್‌ಎಸ್‌ಸಿ) ಬೋಧಕ ಮತ್ತು ಬೋಧಕೇತರ ಸಿಬಂದಿ ನೇಮಕಾತಿ ಹಗರಣದ ತನಿಖೆಯನ್ನು ತ್ವರಿತಗೊಳಿಸುವಂತೆ ನ್ಯಾಯಾಲಯವು ಸಿಬಿಐಗೆ ಸೂಚಿಸಿದೆ.
ಸಿಬಿಐ ವಕೀಲರ ಮನವಿಯ ಮೇರೆಗೆ ನ್ಯಾಯಾಲಯವು ಚಟರ್ಜಿಯ ನ್ಯಾಯಾಂಗ ಬಂಧನವನ್ನು ಫೆಬ್ರವರಿ 16 ರವರೆಗೆ ವಿಸ್ತರಿಸಿತು. ನ್ಯಾಯಾಲಯದ ಆದೇಶದ ಮೇರೆಗೆ ಸೆಪ್ಟೆಂಬರ್ 16 ರಂದು ಸಿಬಿಐ ಕಸ್ಟಡಿಗೆ ಪಡೆದಿದ್ದ ಮಾಜಿ ಸಚಿವ ಮಾಡಿದ ಜಾಮೀನು ಕೋರಿಕೆಯನ್ನು ಅದು ತಿರಸ್ಕರಿಸಿತು.ಅವರ ನಿಕಟವರ್ತಿ ಅರ್ಪಿತಾ ಮುಖರ್ಜಿ ಅವರ ಅಪಾರ್ಟ್‌ಮೆಂಟ್‌ಗಳಿಂದ ಭಾರೀ ಪ್ರಮಾಣದ ನಗದು, ಆಭರಣಗಳು ಮತ್ತು ಆಸ್ತಿ ಪತ್ರಗಳನ್ನು ವಶಪಡಿಸಿಕೊಂಡ ನಂತರ ಜುಲೈ 23 ರಂದು ಜಾರಿ ನಿರ್ದೇಶನಾಲಯ (ಇಡಿ) ಚಟರ್ಜಿ ಅವರನ್ನು ಮೊದಲು ಬಂಧಿಸಿತ್ತು.
ಜಾಮೀನು ಕೋರಿ ಅವರ ವಕೀಲರು ಕಳೆದ ರಿಮಾಂಡ್ ಆದೇಶದ ನಂತರ ತನಿಖೆಯಲ್ಲಿ ಯಾವುದೇ ಪ್ರಗತಿಯಾಗಿಲ್ಲ ಮತ್ತು ಅವರನ್ನು ಜೈಲಿನಲ್ಲಿ ಇಡುವುದು ಯಾವುದೇ ಉದ್ದೇಶವನ್ನು ಪೂರೈಸುತ್ತಿಲ್ಲ ಎಂದು ಪ್ರತಿಪಾದಿಸಿದರು.
ತನಿಖೆ ಮುಂದುವರಿದಿದ್ದು, ಈ ಹಂತದಲ್ಲಿ ಮಾಜಿ ಸಚಿವರನ್ನು ಬಿಡುಗಡೆ ಮಾಡಿದರೆ ತನಿಖೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂದು ಸಿಬಿಐ ವಕೀಲರು ವಾದಿಸಿದರು.
ಚಟರ್ಜಿ ಅವರು 2014 ಮತ್ತು 2021 ರ ನಡುವೆ ಶಿಕ್ಷಣ ಖಾತೆಯನ್ನು ಹೊಂದಿದ್ದರು, ರಾಜ್ಯ ಸರ್ಕಾರಿ ಪ್ರಾಯೋಜಿತ ಮತ್ತು ಅನುದಾನಿತ ಶಾಲೆಗಳಲ್ಲಿ ಬೋಧಕ ಮತ್ತು ಬೋಧಕೇತರ ಸಿಬಂದಿ ನೇಮಕಾತಿಯಲ್ಲಿ ಅಕ್ರಮಗಳು ನಡೆದಿವೆ ಎಂದು ಆರೋಪಿಸಲಾಗಿದೆ.
ಇಡಿ ಅವರನ್ನು ಬಂಧಿಸಿದ ನಂತರ ಮಮತಾ ಬ್ಯಾನರ್ಜಿ ಸರ್ಕಾರವು ಅವರನ್ನು ಮಂತ್ರಿ ಹುದ್ದೆಯಿಂದ ಮುಕ್ತಗೊಳಿಸಿತ್ತು. ಚಟರ್ಜಿ ಅವರನ್ನು ಬಂಧಿಸಿದಾಗ ಸಂಸದೀಯ ವ್ಯವಹಾರಗಳು, ಕೈಗಾರಿಕೆ ಮತ್ತು ವಾಣಿಜ್ಯ ಸೇರಿದಂತೆ ಹಲವು ಖಾತೆಗಳನ್ನು ಹೊಂದಿದ್ದರು.