ಅಹ್ಮದಾಬಾದ್ : ಇಶ್ರತ್ ಜಹಾನ್ ಫೇಕ್ ಎನ್‌ಕೌಂಟರ್ ಕೇಸಿನಲ್ಲಿ ಆರೋಪಿಗಳಾಗಿರುವ ನಿವೃತ್ತ ಪೊಲೀಸ್ ಅಧಿಕಾರಿಗಳಾಗಿರುವ ಡಿ ಜಿ ವಂಜಾರಾ ಮತ್ತು ಎನ್ ಕೆ ಅಮೀನ್ ಅವರಿಗೆ ಇಂದು ಗುರುವಾರ ಸಿಬಿಐ ವಿಶೇಷ ನ್ಯಾಯಾಲಯ ಕ್ಲೀನ್ ಚಿಟ್ ನೀಡಿದೆ.
ಗುಜರಾತ್ ಸರಕಾರ ಈ ಇಬ್ಬರ ವಿರುದ್ಧ ಕಾನೂನು ಕ್ರಮಕೈಗೊಳ್ಳುವುದಕ್ಕೆ ಅನುಮತಿ ನಿರಾಕರಿಸಿರುವ ಹಿನ್ನೆಲೆಯಲ್ಲಿ ಈ ವಿದ್ಯಮಾನ ನಡೆದಿದೆ.
ಮಾಜಿ ಐಪಿಎಸ್ ಅಧಿಕಾರಿ ಡಿ ಜಿ ವಂಜಾರಾ ಮತ್ತು ಎನ್ ಕೆ ಅಮೀನ್ ಅವರು ಈಚೆಗಷ್ಟೇ ಪೊಲೀಸ್ ಸುಪರಿಂಟೆಂಡೆಂಟ್ ಹುದ್ದೆಯಿಂದ ನಿವೃತ್ತರಾಗಿದ್ದರು.
ಗುಜರಾತ್ ಸರಕಾರ ತನಗೆ ಈ ಇಬ್ಬರು ಆರೋಪಿಗಳ ವಿರುದ್ದ ಕಾನೂನು ಕ್ರಮ ಕೈಗೊಳ್ಳುವುದಕ್ಕೆ ಅನುಮತಿ ನಿರಾಕರಿಸಿದೆ ಎಂದು ಸಿಬಿಐ ನ್ಯಾಯಾಲಯಕ್ಕೆ ತಿಳಿಸಿತು.
ಈ ಹಿನ್ನೆಲೆಯಲ್ಲಿ ವಂಜಾರಾ ಮತ್ತು ಅಮೀನ್ ಅವರು ತಮ್ಮ ವಿರುದ್ಧದ ಈ ಕೇಸಿನ ವಿಚಾರಣೆಯನ್ನು ಕೈಬಿಡುವಂತೆ ನ್ಯಾಯಾಲಯವನ್ನು ಕೋರಿದರು.
19 ವರ್ಷ ಪ್ರಾಯದ ಮುಂಬಯಿ ಸಮೀಪ ಮುಂಬ್ರಾ ನಿವಾಸಿ ಇಶ್ರತ್ ಜಹಾನ್, ಜಾವೇದ್ ಶೇಖ್ ಅಲಿಯಾಸ್ ಪ್ರಾಣೇಶ್ ಪಿಳ್ಳೆ, ಅಮ್ಜದಾಲಿ ಅಕ್‌ಬರಾಲಿ ರಾಣಾ ಮತ್ತು ಝೀಶನ್ ಜೋಹರ್ ಅವರು 2004ರಲ್ಲಿ ಅಹ್ಮದಾಬಾದ್ ಹೊರವಲಯದಲ್ಲಿ ಗುಜರಾತ್ ಪೊಲೀಸರು ನಡೆಸಿದ್ದ ನಕಲಿ ಎನ್‌ಕೌಂಟರ್‌ನಲ್ಲಿ ಹತರಾಗಿದ್ದರು.