ಹೊಸದಿಲ್ಲಿ : ಈಚಿನ ದಿನಗಳಲ್ಲಿ ವಿಶ್ವಾಸಾರ್ಹತೆಯ ನಷ್ಟ ಮತ್ತು ಸ್ವೇಚ್ಛಾಚಾರದ ಕಳಂಕಕ್ಕೆ ಗುರಿಯಾಗಿರುವ ದೇಶದ ಪರಮೋಚ್ಚ ತನಿಖಾ ಸಂಸ್ಥೆ ಸಿಬಿಐ ಯನ್ನು ಶುದ್ಧೀಕರಿಸುವ ನಿಟ್ಟಿನಲ್ಲಿ ಮಧ್ಯಾವಧಿ ಮುಖ್ಯಸ್ಥ ಎಂ ನಾಗೇಶ್ವರ ರಾವ್ ಅವರು ಸುಮಾರು 20ರಷ್ಟು ಉನ್ನತ ಅಧಿಕಾರಿಗಳನ್ನು ವರ್ಗಾಯಿಸಿದ್ದಾರೆ.
ಸಿಬಿಐ ನಲ್ಲಿ ಅಧಿಕಾರದ ಹತೋಟಿ ಮತ್ತು ಸಂತುಲನೆಯನ್ನು ಕಾಪಿಡುವ ಸಲುವಾಗಿ ಮತ್ತು ಈಗಿರುವ ಮಾನವ ಸಂಪನ್ಮೂಲವನ್ನು ಗರಿಷ್ಠವಾಗಿ ಬಳಸಿಕೊಳ್ಳುವ ಧ್ಯೇಯದಲ್ಲಿ ಈ ನಿರ್ಣಾಯಕ ವರ್ಗಾವಣೆಗಳನ್ನು ಮಾಡಲಾಗಿದೆ ಎಂದು ಸಿಬಿಐ ಅಧಿಕಾರಿಗಳು ಹೇಳಿದ್ದಾರೆ.
ಸಿಬಿಐ ನ ವಿವಿಧ ಮಟ್ಟಗಳಲ್ಲಿನ ಈ ವರ್ಗಾವಣೆ ಮತ್ತು ನಿಯೋಜನೆ ಪ್ರಕ್ರಿಯೆ ಇನ್ನೂ ಒಂದು ವಾರ ಕಾಲ ಮುಂದುವರಿಯಲಿದೆ ಎಂದವರುಹೇಳಿದ್ದಾರೆ.
ಸಿಬಿಐ ನಲ್ಲಿ ಕೈಗೊಳ್ಳಲಾಗಿರುವ ಈ ಮಹತ್ವದ ಸರ್ಜರಿಯಲ್ಲಿ 20ಕ್ಕೂ ಅಧಿಕ ಅಧಿಕಾರಿಗಳನ್ನು ವರ್ಗಾಯಿಸಲಾಗಿದೆ ಇಲ್ಲವೇ ಹೊಸ ಹೊಣೆಗಾರಿಕೆಯೊಂದಿಗೆ ಪುನರ್ ನಿಯೋಜಿಸಲಾಗಿದೆ.
2ಜಿ ತರಂಗಾಂತರ ಹಗರಣದಂತಹ ಪ್ರಮುಖ ಕೇಸುಗಳನ್ನು ನಿರ್ವಹಿಸುತ್ತಿರುವ ಅಧಿಕಾರಿಗಳನ್ನು ಕೂಡ ವರ್ಗಾಯಿಸಲಾಗಿರುವುದಾಗಿ ತಿಳಿದು ಬಂದಿದೆ.