Advertisement

ವರ್ಮಾ ಮೇಲೆ ಗೂಢಚಾರಿಕೆ!

07:55 AM Oct 26, 2018 | Team Udayavani |

ಹೊಸದಿಲ್ಲಿ: ಸಿಬಿಐ ಒಳಜಗಳದಿಂದಾಗಿ ಇಬ್ಬರು ಮುಖ್ಯಸ್ಥರನ್ನು ಕಡ್ಡಾಯ ರಜೆ ಮೇಲೆ ಕಳುಹಿಸಿದ ನಂತರದಲ್ಲಿ ಪ್ರಕರಣಕ್ಕೆ ಹೊಸದೊಂದು ತಿರುವು ಸಿಕ್ಕಿದೆ. ರಜೆ ಮೇಲಿರುವ ಸಿಬಿಐ ನಿರ್ದೇಶಕ ಅಲೋಕ್‌ ವರ್ಮಾ ಬಗ್ಗೆ ಗೂಢಚಾರಿಕೆ ಮಾಡಲಾಗುತ್ತಿದೆ ಎಂದು ಆರೋಪಿಸಲಾಗಿದೆ. ವರ್ಮಾ ಮನೆಯ ಬಳಿ ನಾಲ್ವರನ್ನು ಅನುಮಾನಾಸ್ಪದ ಚಟುವಟಿಕೆಯ ಆರೋಪದಲ್ಲಿ ಬಂಧಿಸಲಾಗಿದೆ. ಮೂಲಗಳ ಪ್ರಕಾರ ಈ ವ್ಯಕ್ತಿಗಳು ಗುಪ್ತಚರ ದಳದವರಾಗಿದ್ದು, ಇವರನ್ನು ಅಲೋಕ್‌ ತಡೆದಿದ್ದಾರೆ ಎಂದು ಹೇಳಲಾಗಿದೆ. ನಾಲ್ವರನ್ನು ತುಘಲಕ್‌ ರೋಡ್‌ ಪೊಲೀಸ್‌ ಸ್ಟೇಷನ್‌ಗೆ ಕರೆದುಕೊಂಡು ಹೋಗಿ ವಿಚಾರಣೆ ನಡೆಸಲಾಗಿದೆ.

Advertisement

ಪರಸ್ಪರ ಭ್ರಷ್ಟಾಚಾರದ ಆರೋಪ ಮಾಡಿಕೊಂಡಿದ್ದ ಸಿಬಿಐ ನಿರ್ದೇಶಕ ಅಲೋಕ್‌ ವರ್ಮಾ ಹಾಗೂ ವಿಶೇಷ ನಿರ್ದೇಶಕ ರಾಕೇಶ್‌ ಅಸ್ತಾನಾರನ್ನು ಮಂಗಳವಾರ ತಡರಾತ್ರಿ ನಡೆಸಿದ ಹಠಾತ್‌ ಕಾರ್ಯಾಚರಣೆಯಲ್ಲಿ ಕಡ್ಡಾಯ ರಜೆ ಮೇಲೆ ಕಳುಹಿಸಲಾಗಿದೆ. ಹಂಗಾಮಿ ನಿರ್ದೇಶಕರನ್ನಾಗಿ ನಾಗೇಶ್ವರ ರಾವ್‌ರನ್ನು ನೇಮಿಸಿ, ಈ ಭ್ರಷ್ಟಾಚಾರ ಆರೋಪಗಳ ತನಿಖೆ ನಡೆಸುವ ಅಧಿಕಾರ ನೀಡಲಾಗಿದೆ. ಈ ಬಗ್ಗೆ ಗುರುವಾರ ಸ್ಪಷ್ಟನೆ ನೀಡಿದ ಸಿಬಿಐ, ವರ್ಮಾ ನಿರ್ದೇಶಕರಾಗಿಯೇ ಮುಂದುವರಿಯುತ್ತಾರೆ ಮತ್ತು ಅಸ್ತಾನಾ ವಿಶೇಷ ನಿರ್ದೇಶಕರಾಗಿಯೇ ಇರುತ್ತಾರೆ. ಸಂಸ್ಥೆಯ ಹಂಗಾಮಿ ಉಸ್ತುವಾರಿಯನ್ನು ನಾಗೇಶ್ವರ ರಾವ್‌ ಅವರಿಗೆ ನೀಡಲಾಗಿದೆ ಎಂದಿದೆ.

ಐಬಿ ಸ್ಪಷ್ಟನೆ: ಇದೇ ವೇಳೆ ಈ ನಾಲ್ವರು ಗುಪ್ತಚರ ದಳದವರು ಎಂಬುದನ್ನು ಗುಪ್ತಚರದಳ (ಐಬಿ) ಕೂಡ ಒಪ್ಪಿಕೊಂಡಿದೆ. ಆದರೆ ಇವರು ವರ್ಮಾ ಮೇಲೆ ಗೂಢಚಾರಿಕೆಗೆ ನೇಮಿಸಲ್ಪಟ್ಟವರಲ್ಲ. ಸಾಮಾನ್ಯ ಭದ್ರತಾ ಕ್ರಮಗಳಿಗಾಗಿ ಪರಿಸ್ಥಿತಿಯ ಮಾಹಿತಿ ಸಂಗ್ರಹಿಸಲು ನಿಯೋಜಿಸಲಾಗಿತ್ತು ಎಂದು ಗುಪ್ತಚರ ದಳ ಸ್ಪಷ್ಟನೆ ನೀಡಿದೆ. ಅಲೋಕ್‌ ಮನೆ ಸೂಕ್ಷ್ಮಪ್ರದೇಶದಲ್ಲಿದೆ. ಇಲ್ಲಿ ಇತರ ಗಣ್ಯರೂ ವಾಸಿಸುತ್ತಾರೆ. ಹೀಗಾಗಿ ಇದು ಸಾಮಾನ್ಯ ನಿಗಾ ಎಂದಿದೆ.

ಇಂದು ಕಾಂಗ್ರೆಸ್‌ ಪ್ರತಿಭಟನೆ: ಪ್ರಕರಣಕ್ಕೆ ಕಾಂಗ್ರೆಸ್‌ ಈಗ ರಾಜಕೀಯ ತಿರುವು ನೀಡಲು ಹೊರಟಿದೆ. ದೇಶಾದ್ಯಂತ ಎಲ್ಲ ಸಿಬಿಐ ಕಚೇರಿಗಳ ಮುಂದೆ ಕಾಂಗ್ರೆಸ್‌ ಶುಕ್ರವಾರ ಪ್ರತಿಭಟನೆ ಮಾಡಲು ತೀರ್ಮಾನಿಸಿದೆ. ಪ್ರಧಾನಿ ಈ ಬಗ್ಗೆ ಕ್ಷಮೆ ಕೇಳಬೇಕು ಎಂಬುದು ಕಾಂಗ್ರೆಸ್‌ನ ಬೇಡಿಕೆಯಾಗಿದೆ. ಎಲ್ಲ ರಾಜ್ಯಗಳಲ್ಲೂ ನಡೆಯಲಿರುವ ಈ ಪ್ರತಿಭಟನೆಯಲ್ಲಿ ಪಕ್ಷದ ಪ್ರಮುಖರು ಭಾಗವಹಿಸಲಿದ್ದಾರೆ.

ತ್ವರಿತ ವಿಚಾರಣೆಗೆ ಸಮ್ಮತಿ: ಸಿಬಿಐ ಅಧಿಕಾರಿಗಳು ಪರಸ್ಪರ ಭ್ರಷ್ಟಾಚಾರ ಆರೋಪ ಮಾಡಿಕೊಂಡಿರುವ ಹಿನ್ನೆಲೆಯಲ್ಲಿ ಈ ಬಗ್ಗೆ ಕೋರ್ಟ್‌ ನೇತೃತ್ವದಲ್ಲಿ ಎಸ್‌ಐಟಿ ತನಿಖೆ ನಡೆಯಬೇಕು ಎಂದು ಆಗ್ರಹಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ತ್ವರಿತ ವಿಚಾರಣೆಗೆ ಸುಪ್ರೀಂಕೋರ್ಟ್‌ ಸಮ್ಮತಿಸಿದೆ. ಹಿರಿಯ ವಕೀಲ ಪ್ರಶಾಂತ್‌ ಭೂಷಣ್‌ ಸಲ್ಲಿಸಿದ್ದ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೋಯ್‌ ನೇತೃತ್ವದ ಪೀಠ ವಿಚಾರಣೆಗೆ ಕೈಗೆತ್ತಿಕೊಂಡಿದೆ.

Advertisement

ಕಸ್ಟಡಿ ವಿಸ್ತರಣೆ: ರಾಕೇಶ್‌ ವಿರುದ್ಧದ ಭ್ರಷ್ಟಾಚಾರ ಪ್ರಕರಣ ಸಂಬಂಧ ಬಂಧಿತ ಮಧ್ಯವರ್ತಿ ಮನೋಜ್‌ ಪ್ರಸಾದ್‌ರನ್ನು ಇನ್ನೂ ಐದು ದಿನಗಳವರೆಗೆ ಸಿಬಿಐ ಕಸ್ಟಡಿಗೆ ವಹಿಸಿ ದಿಲ್ಲಿ ಕೋರ್ಟ್‌ ಆದೇಶ ನೀಡಿದೆ.

ರಫೇಲ್‌ ಫೈಲ್‌ ವರ್ಮಾ ಬಳಿ ಇರಲಿಲ್ಲ: ಈ ನಡುವೆ, ರಫೇಲ್‌ ಡೀಲ್‌ ಸೇರಿ ಪ್ರಮುಖ ಪ್ರಕರಣಗಳ ತನಿಖೆಗೆ ಸಂಬಂಧಿಸಿದ ಕಡತಗಳು ಅಲೋಕ್‌ ಬಳಿ ಇತ್ತು ಎಂಬ ಸುದ್ದಿಯನ್ನು ಸಿಬಿಐ ತಳ್ಳಿಹಾಕಿದೆ. ಸಿಬಿಐ ವಕ್ತಾರ ಅಭಿಷೇಕ್‌ ದಯಾಳ್‌ ಈ ಸಂಬಂಧ ಮಾಹಿತಿ ನೀಡಿದ್ದು, ಇದು ಪಟ್ಟಭದ್ರ ಹಿತಾಸಕ್ತಿಗಳು ಹುಟ್ಟುಹಾಕಿದ ಸುದ್ದಿ ಎಂದಿದ್ದಾರೆ. 

ಮೋದಿಗೆ ಖರ್ಗೆ ಪತ್ರ


ಸಿಬಿಐ ನಿರ್ದೇಶಕರನ್ನು ರಜೆ ಮೇಲೆ ಕಳುಹಿಸಿ, ಹಂಗಾಮಿ ನಿರ್ದೇಶಕರನ್ನಾಗಿ ನೇಮಿಸುವ ಅಧಿಕಾರ ಪ್ರಧಾನಿ ಕಚೇರಿಗಾಗಲೀ, ಕೇಂದ್ರೀಯ ವಿಚಕ್ಷಣಾ ದಳಕ್ಕಾಗಲೀ ಇಲ್ಲ ಎಂದು ಕಾಂಗ್ರೆಸ್‌ ಆಕ್ಷೇಪಿಸಿದೆ. ಅಷ್ಟೇ ಅಲ್ಲ, ಈ ಕ್ರಮ ಕಾನೂನು ಬಾಹಿರ ಎಂದು ಲೋಕಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಧಾನಿ ಮೋದಿಗೆ 3 ಪುಟಗಳ ಪತ್ರ ಬರೆದಿದ್ದಾರೆ. ನಿರ್ದೇಶಕರನ್ನು ರಾತ್ರೋ ರಾತ್ರಿ ಮನೆಗೆ ಕಳುಹಿಸಿರುವುದರಿಂದಾಗಿ ಅವರು ನಿರ್ವಹಿಸುತ್ತಿದ್ದ ರಫೇಲ್‌ ಡೀಲ್‌ನಂತಹ ಪ್ರಮಖ ಪ್ರಕರಣಗಳ ತನಿಖೆಗೆ ಹಿನ್ನಡೆಯಾಗಲಿದೆ. ಈ ಪ್ರಕರಣಗಳನ್ನು ಹಾದಿ ತಪ್ಪಿಸಲೆಂದೇ ನಿರ್ದೇಶಕರನ್ನು ಮನೆಗೆ ಕಳುಹಿಸಿದಂತಿದೆ. ಆಯ್ಕೆ ಸಮಿತಿಯ ಅನುಮತಿ ಇಲ್ಲದೇ ಹೇಗೆ ಹಂಗಾಮಿ ಮುಖ್ಯಸ್ಥರನ್ನು ಸರ್ಕಾರ ನೇಮಿಸಿತು ಎಂದೂ ಅವರು ಪತ್ರದಲ್ಲಿ ಪ್ರಶ್ನಿಸಿದ್ದಾರೆ.

ಪ್ರಧಾನಿ ಮೋದಿಯ ಮಾನಸಿಕ ಸ್ಥಿತಿಯನ್ನು ಅರ್ಥ ಮಾಡಿಕೊಳ್ಳಿ. ತಾನು ದೇಶದ ಕಾವಲುಗಾರನಾಗಿರುತ್ತೇನೆ ಎಂದಿದ್ದರು. ಆದರೆ ರಫೇಲ್‌ ಡೀಲ್‌ ಮಾಡಿದರು. ಸಿಬಿಐ ಈ ಬಗ್ಗೆ ತನಿಖೆ ಆರಂಭಿಸುತ್ತಿದ್ದಂತೆಯೇ, ಪ್ರಧಾನಿ ಹುದ್ದೆಯನ್ನು ಬಳಸಿ, ತನಿಖೆ ನಿಲ್ಲಿಸಬೇಕು ಎಂದು ನಿರ್ಧರಿಸಿ ಬಿಟ್ಟರು.
– ರಾಹುಲ್‌ ಗಾಂಧಿ, ಕಾಂಗ್ರೆಸ್‌ ಅಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next