ಹೊಸದಿಲ್ಲಿ: ರಕ್ಷಣಾ ಇಲಾಖೆಯ ಪರೀಕ್ಷೆಯಲ್ಲಿ 44 ಮಂದಿಗೆ ಕಾನೂನು ಬಾಹಿರವಾಗಿ ಪದೋನ್ನತಿ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ನಿವೃತ್ತ ಸೇನಾಧಿಕಾರಿಗಳ ವಿರುದ್ಧ ಸಿಬಿಐ ಕೇಸು ದಾಖಲಿಸಿದೆ. ಅವರ ಜತೆಗೆ ಇನ್ನೂ ಇಬ್ಬರ ವಿರುದ್ಧವೂ ಪ್ರಕರಣ ದಾಖಲಾಗಿದೆ.
ನಿವೃತ್ತ ಮೇಜರ್ ಜನರಲ್ ಎಂ.ವಿ. ಭಟ್ ಮತ್ತು ಮತ್ತೂಬ್ಬ ನಿವೃತ್ತ ಮೇಜರ್ ಜನರಲ್ ಕೆ.ಆರ್.ಎಂ.ಕೆ.ಬಾಲಾಜಿ ಆರೋಪಕ್ಕೆ ಗುರಿಯಾಗಿರುವವರು.
ಹೈದರಾಬಾದ್‌ನ ಸರ್ವೇ ಟ್ರೈನಿಂಗ್ ಇನ್‌ಸ್ಟಿಟ್ಯೂಟ್‌ನ ನಿರ್ದೇಶಕರಾಗಿದ್ದ ಎಂ.ವಿ. ಭಟ್ ಮತ್ತು ಸಂಸ್ಥೆಯ ಡೆಪ್ಯುಟಿ ಸರ್ವೆಯರ್ ಜನರಲ್ ಆಗಿದ್ದ ಕೆ.ಆರ್.ಎಂ.ಕೆ. ಬಾಲಾಜಿ ಅವರು ರಕ್ಷಣಾ ಇಲಾಖೆಯ ಲಿಮಿಡೆಟ್ ಡಿಪಾರ್ಟ್‌ಮೆಂಟಲ್‌ನ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ 44 ಮಂದಿಗೆ ನಿಯಮ ಮೀರಿ ಅಂಕಗಳನ್ನು ನೀಡಿ ಅವರಿಗೆ ಪದೋನ್ನತಿ ನೀಡಿದ ಪ್ರಕರಣದಲ್ಲಿ ಭಾಗಿಯಾದ ಆರೋಪ ಎದುರಿಸುತ್ತಿದ್ದಾರೆ.
ಅವರ ಜತೆಗೆ ಸಂಸ್ಥೆಯಲ್ಲಿ ಡೆಪ್ಯುಟಿ ಡೈರೆಕ್ಟರ್ ಆಗಿದ್ದ ಜೆ.ಕೆ. ರಥ್, ಲೆಕ್ಕಪತ್ರ ಅಧಿಕಾರಿಯಾಗಿದ್ದ ಆರ್. ರಾಮ ಸಿಂಗ್ ಹೆಸರೂ ಕೇಂದ್ರ ತನಿಖಾ ಸಂಸ್ಥೆಯ ಎಫ್ಐಆರ್‌ನಲ್ಲಿ ಉಲ್ಲೇಖವಾಗಿದೆ ಎಂದು ‘ಐಎಎನ್‌ಎಸ್’ ಸುದ್ದಿ ಸಂಸ್ಥೆಯ ವರದಿಯನ್ನು ಉಲ್ಲೇಖೀಸಿ ಹಲವು ಮಾಧ್ಯಮಗಳು ವರದಿ ಮಾಡಿವೆ.
ಪರೀಕ್ಷೆಯಲ್ಲಿ ಅಂಕಗಳನ್ನು ತಿದ್ದಲಾಗಿದೆ ಎಂಬ ದೂರನ್ನು ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ 2018ರ ಅಕ್ಟೋಬರ್‌ನಲ್ಲಿ ಸಿಬಿಐ ಗಮನಕ್ಕೆ ತಂದಿತ್ತು. ಬಳಿಕ ಅದು ತನಿಖೆಯನ್ನು ಕೈಗೆತ್ತಿಕೊಂಡಿತ್ತು.
ಎಫ್ಐಆರ್‌ನಲ್ಲಿ ದಾಖಲಾಗಿರುವ ಮಾಹಿತಿ ಪ್ರಕಾರ 384 ಮಂದಿ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ, 298 ಮಂದಿ ಪರೀಕ್ಷೆ ಬರೆದಿದ್ದರು. 2002ರ ಆಗಸ್ಟ್‌ನಲ್ಲಿ ಆಗ ಬ್ರಿಗೇಡಿಯರ್ ಆಗಿದ್ದ ಎಂ.ವಿ. ಭಟ್ ಅವರ ಅಧ್ಯಕ್ಷತೆಯಲ್ಲಿ ನಾಲ್ವರು ಅಧಿಕಾರಿಗಳನ್ನು ಒಳಗೊಂಡ ಪರೀಕ್ಷಾ ಮಂಡಳಿಯನ್ನು ಸಂಸ್ಥೆ ರಚಿಸಿತ್ತು. ಬ್ರಿಗೇಡಿಯರ್ ರಾವ್ ಸದಸ್ಯ ಕಾರ್ಯದರ್ಶಿಯಾಗಿ, ರಥ್ ಎಸ್‌ಐಟಿ ಸದಸ್ಯರಾಗಿದ್ದರು.