ಹೈದರಾಬಾದ್: ದೆಹಲಿ ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈದರಾಬಾದ್ ಮೂಲದ ಚಾರ್ಟರ್ಡ್ ಅಕೌಂಟೆಂಟ್ ಬುಚ್ಚಿ ಬಾಬು ಗೋರಂಟ್ಲಾ ಅವರನ್ನು ಸಿಬಿಐ ಅಧಿಕಾರಿಗಳು ಬಂಧಿಸಿದ್ದಾರೆ.
ಬಂಧಿತರಾಗಿರುವ ಬುಚ್ಚಿ ಬಾಬು ಗೋರಂಟ್ಲಾ ಈ ಮೊದಲು ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಅವರ ಪುತ್ರಿ ಎಂಎಲ್ ಸಿ ಆಗಿರುವ ಕವಿತಾ ಅವರ ಮಾಜಿ ಆಡಿಟರ್ ಆಗಿದ್ದರು.
ಬಂಧಿತ ಆರೋಪಿ ಬುಚ್ಚಿ ಬಾಬು ದೆಹಲಿಯ ಅಬಕಾರಿ ನೀತಿಯ ರಚನೆ ಮತ್ತು ಅನುಷ್ಠಾನದಲ್ಲಿ ಭಾಗಿಯಾಗಿದ್ದರು. 2021-22 ರ ದೆಹಲಿ ಅಬಕಾರಿ ನೀತಿಯ ಅಡಿಯಲ್ಲಿ ಅಕ್ರಮವಾಗಿ ಸಗಟು ಮತ್ತು ಚಿಲ್ಲರೆ ಪರವಾನಗಿದಾರರು,ಮಾಲೀಕರಿಗೆ ಹೆಚ್ಚಿನ ಲಾಭವನ್ನು ತಂದುಕೊಟ್ಟ ಆರೋಪದ ಮೇಲೆ ಅವರನ್ನು ಬಂಧಿಸಲಾಗಿದೆ ಎಂದು ಸಿಬಿಐ ಹೇಳಿದೆ.
ಇದೇ ಪ್ರಕರಣದಲ್ಲಿ ಕೆಸಿಆರ್ ಪುತ್ರಿ ಕವಿತಾ ಅವರನ್ನು ಡಿ.12 ರಂದು ಸಿಬಿಐ ಅಧಿಕಾರಿಗಳು ವಿಚಾರಣೆ ನಡೆಸಿದ್ದರು.
ಬಂಧಿತರಾಗಿರುವ ಬುಚ್ಚಿ ಬಾಬು ಅವರನ್ನು ಬುಧವಾರ (ಫೆ.8 ರಂದು) ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತದೆ ಎಂದು ವರದಿ ತಿಳಿಸಿದೆ.