Advertisement

ಕಾವೇರಿ ನೀರಾವರಿ ಸಲಹಾ ಸಮಿತಿ ಸಭೆ ಕರೆಯುವುದಕ್ಕೆ ಆಗ್ರಹ

05:41 PM Jan 19, 2022 | Team Udayavani |

ಬೆಂಗಳೂರು : ಬೇಸಿಗೆ ಬೆಳೆಗೆ ನೀರು ಹರಿಸುವ ಸಂಬಂಧ ಕೆ.ಆರ್.ಎಸ್.ನ ನೀರಾವರಿ ಸಲಹಾ ಸಮಿತಿ ಸಭೆ ಕರೆಯುವ ಬಗ್ಗೆ ಮಂಡ್ಯ ಜನಪ್ರತಿನಿಧಿಗಳು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

Advertisement

ಈ ಸಂಬಂಧ ಮಂಡ್ಯ ಉಸ್ತುವಾರಿ ಸಚಿವ ಹಾಗೂ ಯುವಜನಸೇವಾ ಸಚಿವ ನಾರಾಯಣಗೌಡರಿಗೆ ಪತ್ರ ಬರೆದಿರುವ ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ, ತಕ್ಷಣ ಸಭೆ ಕರೆಯುವಂತೆ ಒತ್ತಾಯಿಸಿದ್ದಾರೆ.

ಪ್ರಸಕ್ತ ಸಾಲಿನಲ್ಲಿ ಕಾವೇರಿ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗಿದ್ದು ಕೃಷ್ಣರಾಜಸಾಗರ ಸೇರಿದಂತೆ ಕಾವೇರಿ ನದಿ ಪಾತ್ರದ ಎಲ್ಲಾ ಜಲಾಶಯಗಳಲ್ಲೂ ಸಾಕಷ್ಟು ನೀರು ಸಂಗ್ರಹವಾಗಿದೆ. ಇದರಿಂದ ಬೆಳೆಗಳಿಗೆ ಹಾಗೂ ಕುಡಿಯುವ ನೀರು ಬಳಕೆಗೆ ಯಾವುದೇ ಕೊರತೆಯಾಗುವುದಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

ಮಂಡ್ಯ ಜಿಲ್ಲೆಯ ಎಲ್ಲಾ ಭಾಗಗಳಲ್ಲಿ ಮಳೆ ನಿಂತು ಪ್ರಸಕ್ತ ಚಳಿಗಾಲ ಪ್ರಾರಂಭವಾಗಿದ್ದು ಹಾಗೂ ಒಂದು ತಿಂಗಳಿಗೂ ಹೆಚ್ಚು ಕಾಲದಿಂದ ರೈತರು ಬೆಳೆದಿರುವ ಕಬ್ಬು ಮತ್ತು ಇತರ ಬೆಳೆಗಳು ನೀರಿನ ಕೊರತೆಯಿಂದಾಗಿ ಒಣಗುತ್ತಿವೆ. ತಕ್ಷಣವೇ ಕೆ.ಆರ್.ಎಸ್. ಜಲಾಶಯದಿಂದ ನಾಲೆಗಳಿಗೆ ನೀರು ಹರಿಸಿದರೆ ಒಣಗುತ್ತಿರುವ ಬೆಳೆಗಳನ್ನು ಉಳಿಸಿಕೊಂಡು, ರೈತರಿಗೆ ಅನುಕೂಲವಾಗಲಿದೆ. ಈ ವರ್ಷ ಜಲಾಶಯದಲ್ಲಿ ಸಾಕಷ್ಟು ನೀರು ಲಭ್ಯವಿರುವುದರಿಂದ ಕೆ.ಆರ್.ಎಸ್. ಅಚ್ಚುಕಟ್ಟು ಪ್ರದೇಶಕ್ಕೆ ಬೇಸಿಗೆ ಬೆಳೆಗೂ ನೀರು ಕೊರತೆ ಎದುರಾಗುವುದಿಲ್ಲ.ಈ ಬಗ್ಗೆ ಜಿಲ್ಲೆಯ ಜನಪ್ರತಿನಿಧಿಗಳ ಜೊತೆ ಸಮಾಲೋಚಿಸಿ ಸೂಕ್ತ ತೀರ್ಮಾನ ತೆಗೆದುಕೊಳ್ಳುವುದು ಅತ್ಯಂತ ಜರೂರಿನ ಕಾರ್ಯವಾಗಿದೆ. ಆದ್ದರಿಂದ ಈ ಕೂಡಲೇ ತಮ್ಮ ಅಧ್ಯಕ್ಷತೆಯ ಕಾವೇರಿ ನೀರಾವರಿ ಸಲಹಾ ಸಮಿತಿ ಸಭೆಯನ್ನು ತ್ವರಿತವಾಗಿ ಕರೆದು ಈ ಬಗ್ಗೆ ಸೂಕ್ತ ನಿರ್ಧಾರ ಕೈಗೊಂಡು ರೈತರ ನೇರವಿಗೆ ಧಾವಿಸುವುದು ಅಗತ್ಯವಾಗಿದೆ. ಆದ್ದರಿಂದ ರೈತರ ಹಿತದೃಷ್ಟಿಯಿಂದ ಆದಷ್ಟು ಬೇಗ ಕೆ.ಆರ್.ಎಸ್ ನ ಕಾವೇರಿ ನೀರಾವರಿ ಸಲಹಾ ಸಮಿತಿ ಸಭೆಯನ್ನು ಕರೆಯಲು ತುರ್ತು ಕ್ರಮ ಕೈಗೊಳ್ಳುವಂತೆ ಪತ್ರದಲ್ಲಿ ಮನವಿ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next