Advertisement

ಜೇಬಿಗೆ ಹೊರೆಯಾಗಲಿದೆ ಕಾವೇರಿ ನೀರಿನ ದರ!

12:53 AM May 12, 2019 | Team Udayavani |

ಬೆಂಗಳೂರು: ಐದು ವರ್ಷಗಳ ನಂತರ ಜಲಮಂಡಳಿ ನೀರಿನ ದರ ಪರಿಷ್ಕರಣೆಗೆ ಮುಂದಾಗಿದೆ. ಈ ಕುರಿತು ತಜ್ಞರೊಂದಿಗೆ ಸಭೆ ನಡೆಸಿ ಪ್ರಸ್ತಾವನೆ ಸಿದ್ಧಪಡಿಸಿದ್ದು, ಲೋಕಸಭಾ ಚುನಾವಣೆ ಫ‌ಲಿತಾಂಶದ ಬಳಿಕ ನಗರಾಭಿವೃದ್ಧಿ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಿದೆ.

Advertisement

ಬೇಸಿಗೆ ಹಿನ್ನೆಲೆಯಲ್ಲಿ ನಗರದ ಕೆಲ ಭಾಗಗಳಲ್ಲಿ ಸಾರ್ವಜನಿಕರು ನೀರಿಗೆ ಪರದಾಡುತ್ತಿದ್ದಾರೆ. ಈ ನಡುವೆ ಕಾವೇರಿ ನೀರಿನ ದರವನ್ನು ಶೇ.10ರಿಂದ 15ರಷ್ಟು ಏರಿಸಲು ಜಲಮಂಡಳಿ ಸಿದ್ಧತೆಯಲ್ಲಿದ್ದು, ನಗರ ನಿವಾಸಿಗಳಿಗೆ ನೀರು ಹೊರೆಯಾಗಲಿದೆ.

ನಗರದ 10 ಲಕ್ಷಕ್ಕೂ ಹೆಚ್ಚು ಸಂಪರ್ಕಗಳಿಗೆ, ನಿತ್ಯ 1,400 ದಶಲಕ್ಷ ಲೀ. ನೀರು ಹರಿಸುತ್ತಿರುವ ಜಲಮಂಡಳಿಗೆ ಕಾಲ ಕಳೆದಂತೆ ನಿರ್ವಹಣೆ ವೆಚ್ಚ ದುಬಾರಿ ಆಗುತ್ತಿದೆ. ಅಲ್ಲದೆ, ಭವಿಷ್ಯದ ದೃಷ್ಟಿಯಿಂದ ಸಾಕಷ್ಟು ಅಭಿವೃದ್ಧಿ ಕಾಮಗಾರಿಗಳು ಸಹ ನಡೆಯುತ್ತಿದ್ದು, ವಿದ್ಯತ್‌ ದರ, ಆಸ್ತಿ ತೆರಿಗೆ ಹೆಚ್ಚಳವಾಗಿದೆ. ಈ ಹಿನ್ನೆಲೆಯಲ್ಲಿ ದರ ಪರಿಷ್ಕರಣೆ ಅಗತ್ಯವಿದೆ ಎಂಬುದು ಜಲಮಂಡಳಿ ಅಧಿಕಾರಿಗಳ ಅಭಿಪ್ರಾಯ.

2014ರಲ್ಲಿ ನೀರಿನ ದರ ಪರಿಷ್ಕರಣೆ ವೇಳೆ ಅಪಾರ್ಟ್‌ಮೆಂಟ್‌, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಸತಿಗೃಹಗಳು, ವಿಲ್ಲಾಗಳಿಗೆ ದುಪ್ಪಟ್ಟು ದರ ಏರಿಕೆ ಮಾಡಿ ಜಲಮಂಡಳಿ ಆಘಾತ ನೀಡಿತ್ತು. ಈ ಬಾರಿ ಪ್ರಸ್ತಾವನೆಯಲ್ಲಿ ಅಂತಹ ಯಾವುದೇ ಅಂಶಗಳಿಲ್ಲ. ಜನಸಾಮಾನ್ಯರಿಗೆ ಹೊರೆಯಾಗದಂತೆ ಈ ಕ್ರಮಕ್ಕೆ ಮುಂದಾಗಿದ್ದೇವೆ ಎನ್ನುತ್ತಾರೆ ಜಲಮಂಡಳಿ ಅಧಿಕಾರಿಗಳು.

ಸದ್ಯ ಜಲಮಂಡಳಿಗೆ ಪ್ರತಿ ತಿಂಗಳು ವಸತಿ ನಿಲಯಗಳಲ್ಲಿ 0 -8,000 ಲೀ. ನೀರಿನ ಬಳಕೆದಾರರಿಗೆ ಪ್ರತಿ ಸಾವಿರ ಲೀ.ಗೆ 7 ರೂ., 8,000  -25,000 ಲೀ. ನೀರಿನ ಬಳಕೆದಾರರಿಗೆ ಪ್ರತಿ ಸಾವಿರ ಲೀ.ಗೆ 11 ರೂ., 25,001-50,000 ಲೀ. ಬಳಕೆದಾರರಿಗೆ ಪ್ರತಿ ಸಾವಿರ ಲೀ.ಗೆ 26 ರೂ., 50,000 ಕ್ಕಿಂತ ಹೆಚ್ಚಿನ ಬಳಕೆಗೆ ಪ್ರತಿ ಸಾವಿರ ಲೀ.ಗೆ 45 ರೂ., ದರ ವಿಧಿಸುತ್ತಿದೆ.

Advertisement

ಒಳಚರಂಡಿ ಶುಲ್ಕ 0 -8,000 ಲೀ, ನೀರಿನ ಬಳಕೆದಾರರಿಗೆ 14 ರೂ, ಅದಕ್ಕಿಂತ ಹೆಚ್ಚಿನ ನೀರು ಬಳಸುವವರಿಗೆ ಬಳಕೆಯಾಗುವ ನೀರಿನ ದರದ ಶೇ.25ರಷ್ಟು ದರ ವಿಧಿಸಲಾಗುತ್ತಿದೆ. ಇದಲ್ಲದೇ ವಸತಿಯೇತರ ಕಟ್ಟಡಗಳಿಗೆ 0 -10,000 ಲೀ. ನೀರಿನ ಬಳಕೆದಾರರಿಗೆ ಪ್ರತಿ ಸಾವಿರ ಲೀ.ಗೆ 50 ರೂ. ನಿಂದ ಆರಂಭವಾಗುತ್ತದೆ. ಇನ್ನು ಸಗಟು ಗ್ರಾಹಕರಿಗೆ ಎಲ್ಲರಿಗಿಂತ ಹೆಚ್ಚು ದರ ವಿಧಿಸಲಾಗುತ್ತದೆ. ಪ್ರಸ್ತುತ ದರ ಪರಿಷ್ಕರಣೆಯಿಂದ ಈ ದರಗಳಲ್ಲಿ ಶೇ.10ರಿಂದ 15ರಷ್ಟು ಹೆಚ್ಚಳವಾಗುವ ಸಾಧ್ಯತೆಯಿದೆ.

Advertisement

Udayavani is now on Telegram. Click here to join our channel and stay updated with the latest news.

Next