ಚೆನ್ನೈ: ಕರ್ನಾಟಕದಿಂದ ತಮಿಳುನಾಡಿಗೆ ಪ್ರವೇಶಿಸುವ ಕಾವೇರಿ ನೀರು ಮಲಿನವಾಗಿರುತ್ತದೆ ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (ಸಿಪಿಸಿಬಿ) ಶುಕ್ರವಾರ ಸುಪ್ರೀಂಕೋರ್ಟ್‌ಗೆ ಸಲ್ಲಿಸಿದ ವರದಿಯಲ್ಲಿ ಹೇಳಿದೆ. ನದಿ ನೀರು ತಮಿಳುನಾಡನ್ನು ಪ್ರವೇಶಿಸುವ ಮುನ್ನವೇ ಕರ್ನಾಟಕದ ವ್ಯಾಪ್ತಿಯಲ್ಲಿ ಮಲಿನಗೊಳಿಸಲಾಗುತ್ತಿದೆ ಎಂದು ವರದಿಯಲ್ಲಿ ಪ್ರಸ್ತಾಪಿಸಲಾಗಿದೆ ಎಂದು “ದ ಟೈಮ್ಸ್ ಆಫ್ ಇಂಡಿಯಾ’ ವರದಿ ಮಾಡಿದೆ.
ವರದಿಯಲ್ಲಿ ಕಾವೇರಿಯ ಉಪ ನದಿಗಳಾಗಿರುವ ತೆನ್‌ಪೆನ್ನಯ್ನಾರ್ ಮತ್ತು ಅರ್ಕಾವತಿಯಲ್ಲಿನ ನೀರನ್ನು ಗಡಿ ಪ್ರವೇಶ ಮಾಡುವ ಮೊದಲೇ ಮಲಿನಗೊಳಿಸಲಾಗುತ್ತಿದೆ ಎಂಬ ಗಂಭೀರ ಆರೋಪ ಹೊರಿಸಲಾಗಿದೆ. ಇದೇ ಆರೋಪಕ್ಕೆ ಸಂಬಂಧಿಸಿ 2015ರಲ್ಲಿ ಕರ್ನಾಟಕದ ವಿರುದ್ಧ ತಮಿಳುನಾಡು ಸರ್ಕಾರ ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿತ್ತು. ಅದರಲ್ಲಿ ಶುದ್ಧಗೊಳಿಸದೆ ಒಳಚರಂಡಿ ಮತ್ತು ಕೈಗಾರಿಕಾ ತ್ಯಾಜ್ಯಗಳನ್ನು ನದಿಗೆ ಬಿಡದಂತೆ ಸೂಚಿಸಬೇಕು ಎಂದು ಅರಿಕೆ ಮಾಡಿಕೊಳ್ಳಲಾಗಿತ್ತು. ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್, ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ವರದಿ ಕೇಳಿತ್ತು.
ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ, ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಜಂಟಿಯಾಗಿ 2017ರ ಸೆಪ್ಟೆಂಬರ್‌ನಿಂದ ಡಿಸೆಂಬರ್ ವರೆಗೆ ಅಜ್ಜಿಬೋರೆ, ಚೊಕ್ಕರಸನಪಳ್ಳಿಯಿಂದ ನೀರಿನ ಮಾದರಿ ಸಂಗ್ರಹಿಸಿದೆ. ಕಾವೇರಿಯ ಉಪ ನದಿ ತೆನ್‌ಪೆನ್ನಯ್ನಾರ್ ಮಲಿನಗೊಂಡಿದ್ದು, ಅದರಲ್ಲಿರುವ ನೀರನ್ನು ಸಂಸ್ಕರಿಸಲು ಪ್ರತ್ಯೇಕ ಯೋಜನೆ ಅಗತ್ಯವಾಗಿದೆ. ನದಿ ತಟದಲ್ಲಿ ಬಹಿರ್ದೆಸೆಗೆ ತೆರಳುವುದರಿಂದ ನೀರು ಮಲಿನವಾಗಿದೆ. ಅದನ್ನು ತಡೆಗಟ್ಟಲು ಸಂಘಟನೆಗಳು ಮತ್ತು ಇಲಾಖೆಗಳು ಮುಂದಾಗಬೇಕು ಎಂದು ವರದಿಯಲ್ಲಿ ಹೇಳಲಾಗಿದೆ.
ಅಜ್ಜಿಬೋರೆಯಲ್ಲಿ ಅರ್ಕಾವತಿ ನದಿ ನೀರಿನ ಬಗ್ಗೆ ನಡೆಸಲಾಗಿರುವ ಸಮೀಕ್ಷೆ ಮತ್ತು ಅಧ್ಯಯನದಲ್ಲಿ ಸೆಪ್ಟೆಂಬರ್, ಅಕ್ಟೋಬರ್, ನವೆಂಬರ್‌ನಲ್ಲಿ ನಡೆಸಲಾಗಿರುವ ಅಧ್ಯಯನದಲ್ಲಿ ಕೆಸರು, ಕೊಳೆ ಒಳಗೊಂಡ ಮಲಿನ ನೀರಿನ ಪ್ರಮಾಣ (ಬಯೋಕೆಮಿಕಲ್ ಆಕ್ಸಿಜನ್ ಡಿಮಾಂಡ್) 2017ರ ಡಿಸೆಂಬರ್‌ಗೆ ಹೋಲಿಕೆ ಮಾಡಿದರೆ ಹೆಚ್ಚಾಗಿಯೇ ಇತ್ತು ಎಂದು ಉಲ್ಲೇಖೀಸಲಾಗಿದೆ.
ಇದೇ ವೇಳೆ ನದಿ ಪಾತ್ರದಲ್ಲಿನ ಬಹಿರ್ದೆಸೆಯಿಂದ ಉಂಟಾಗುವ ಬ್ಯಾಕ್ಟೀರಿಯಾ ಪ್ರಮಾಣ ಕೂಡ ಸೆಪ್ಟೆಂಬರ್ ಮತ್ತು ಅಕ್ಟೋಬರ್ ಅವಧಿಯಲ್ಲಿ ಅರ್ಕಾವತಿ ನದಿಯಲ್ಲಿ ಹೆಚ್ಚಾಗಿದೆ. ಕಾವೇರಿ ನದಿಯಲ್ಲಿ ಅಕ್ಟೋಬರ್ ಅವಧಿಯಲ್ಲಿಯೂ ಅದರ ಪ್ರಮಾಣ ಹೆಚ್ಚಾಗಿತ್ತು. ತೆನ್‌ಪೆನ್ನಯ್ನಾರ್ ನದಿಯಲ್ಲಿನ ಮಾದರಿ ಸಂಗ್ರಹದ ಅಧ್ಯಯನ ಅರ್ಕಾವತಿಯಲ್ಲಿನ ಅಧ್ಯಯನದಲ್ಲಿ ಉಲ್ಲೇಖವಾದ ಅಂಶಗಳನ್ನು ಹೊಂದಿಲ್ಲ. ಅರ್ಕಾವತಿ ನದಿ ನೀರನ್ನೇ ಅಧ್ಯಯನಕ್ಕೆ ಪರಿಗಣಿಸುವುದಕ್ಕೆ ಕರ್ನಾಟಕ ಸರ್ಕಾರ ಆಕ್ಷೇಪ ವ್ಯಕ್ತಪಡಿಸಿತ್ತು. ಆದರೆ ತಮಿಳುನಾಡು ಕಾವೇರಿ ನದಿ ನೀರು ಮಲಿನಕ್ಕೆ ಅರ್ಕಾವತಿಯಲ್ಲಿನ ಮಾಲಿನ್ಯವೇ ಕಾರಣ ಎಂದು ಪ್ರತಿಪಾದಿಸಿತ್ತು.
ಈ ಹಿನ್ನೆಲೆಯಲ್ಲಿ ನಡೆದ ಸಭೆಯಲ್ಲಿ ಸಿಪಿಸಿಬಿ ಪೆನ್ನಯ್ನಾರ್ ಮತ್ತು ಅರ್ಕಾವತಿ ಕಾವೇರಿ ಸೇರುವ ಸಂಗಮದ ಬಳಿಯಿಂದಲೇ ನೀರಿನ ಮಾದರಿ ಸಂಗ್ರಹಿಸುವ ಬಗ್ಗೆ ತೀರ್ಮಾನಿಸಲಾಗಿದೆ. ಅದಕ್ಕೆ ಪೂರಕವಾಗಿ ತಮಿಳುನಾಡು ಸರ್ಕಾರವೂ ಈ ವರದಿ ಕುರಿತು ತನ್ನ ಅಭಿಪ್ರಾಯವನ್ನು ಸಲ್ಲಿಸಲು ಚಿಂತನೆ ನಡೆಸಿದೆ.