ಮೈಸೂರು: ಕಾವೇರಿ ನದಿ ನೀರು ಹಂಚಿಕೆಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ನೀಡಿರುವ ಮಹತ್ವದ ತೀರ್ಪನ್ನು ಸ್ವಾಗತಿಸಿ ಸಾಂಸ್ಕೃತಿಕ ನಗರಿಯಲ್ಲಿ ಬಿಜೆಪಿ ಮುಖಂಡರು ಸೇರಿದಂತೆ ವಿವಿಧ ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳು ಶುಕ್ರವಾರ ಸಂಭ್ರಮಾಚರಣೆ ನಡೆಸಿದರು.
ಬಿಜೆಪಿ ಸಂಭ್ರಮಾಚರಣೆ: ಫೆ.19ರಂದು ನಗರದಲ್ಲಿ ನಡೆಯುವ ಪ್ರಧಾನಿ ಮೋದಿ ಅವರ ಕಾರ್ಯಕ್ರಮದ ಸಿದ್ಧತೆಯಲ್ಲಿ ತೊಡಗಿರುವ ಬಿಜೆಪಿ ಮುಖಂಡರು, ಸುಪ್ರೀಂಕೋರ್ಟ್ ತೀರ್ಪು ಸ್ವಾಗತಿಸಿ ನಗರದ ಖಾಸಗಿ ಹೋಟೆಲ್‌ನಲ್ಲಿ ಸಂಭ್ರಮಾಚರಣೆ ನಡೆಸಿದರು.
ಕಾವೇರಿ ನೀರು ಹಂಚಿಕೆಯಲ್ಲಿ ರಾಜ್ಯಕ್ಕೆ ಹೆಚ್ಚುವರಿ 14.75 ಟಿಎಂಸಿ ನೀರು ಸಿಕ್ಕಿರುವುದನ್ನು ಬಿಜೆಪಿ ಮುಖಂಡರು ಸ್ವಾಗತಿಸಿ, ಪರಸ್ಪರ ಸಿಹಿತಿನ್ನಿಸಿ ಸಂಭ್ರಮಿಸಿದರು. ಈ ಸಂದರ್ಭದಲ್ಲಿ ಸಂಸದ ಪ್ರತಾಪ್ ಸಿಂಹ, ಮಾಜಿ ಸಚಿವ ಎಚ್.ಎ.ರಾಮದಾಸ್, ನಗರಾಧ್ಯಕ್ಷ ಡಾ.ಬಿ.ಮಂಜುನಾಥ್, ಮುಡಾ ಮಾಜಿ ಅಧ್ಯಕ್ಷರಾದ ಎಲ್.ನಾಗೇಂದ್ರ, ಕೆ.ಆರ್.ಮೋಹನ್‌ಕುಮಾರ್, ಸಿ.ಬಸವೇಗೌಡ, ಪಾಲಿಕೆ ಸದಸ್ಯ ಶಿವಕುಮಾರ್, ಎಂ.ಕೆ.ಶಂಕರ್ ಇನ್ನಿತರರು ಹಾಜರಿದ್ದರು.
ಸಿಹಿ ವಿತರಿಸಿ, ಸಂಭ್ರಮ: ನಗರದ ಅಗ್ರಹಾರ ವೃತ್ತದಲ್ಲಿ ಜಮಾಯಿಸಿದ ಜಯ ಕರ್ನಾಟಕ ಹಾಗೂ ಇನ್ನಿತರ ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರು, ಕಾವೇರಿ ನೀರು ಹಂಚಿಕೆಗೆ ಸಂಬಂಧಿಸಿದಂತೆ ಬಂದಿರುವ ತೀರ್ಪನ್ನು ಸ್ವಾಗತಿಸಿ, ಕಾವೇರಿ ನದಿ ಮತ್ತು ಸುಪ್ರೀಂಕೋರ್ಟ್‌ಗೆ ಜೈಕಾರ ಹಾಕಿದರು. ಇದೇ ಸಂದರ್ಭದಲ್ಲಿ ನ್ಯಾಯಾಲಯದ ತೀರ್ಪನ್ನು ಸ್ವಾಗತಿಸಿ, ಪಟಾಕಿ ಸಿಡಿಸಿ, ಸಾರ್ವಜನಿಕರಿಗೆ ಸಿಹಿ ವಿತರಿಸಿ ಸಂಭ್ರಮಿಸಿದರು.
ಸಂಭ್ರಮಾಚರಣೆಯಲ್ಲಿ ಜಯ ಕರ್ನಾಟಕ ಸಂಘಟನೆಯ ಅಜಯ್‌ಶಾಸಿŒ, ಉಮೇಶ್ ಕುಮಾರ್, ಎಚ್.ಎನ್.ಶ್ರೀಧರಮೂರ್ತಿ, ರಾಜ್ಯ ರೈತ ಸಂಘಟನೆಯ ಬಸವರಾಜು, ಕೆಎಂಪಿಕೆ ಟ್ರಸ್ಟ್‌ನ ವಿಕ್ರಂ ಅಯ್ಯಂಗಾರ್, ಪಾಲಿಕೆ ಮಾಜಿ ಸದಸ್ಯ ಎಂ.ಡಿ.ಪಾರ್ಥಸಾರಥಿ ಇನ್ನಿತರರು ಭಾಗವಹಿಸಿದ್ದರು.
ಗಾಂಧಿ ಪ್ರತಿಮೆಗೆ ಮಾಲಾರ್ಪಣೆ: ನಗರದ ನ್ಯಾಯಾಲಯ ಎದುರಿನ ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಮೈಸೂರು ಕನ್ನಡ ಚಳವಳಿಗಾರರ ಸಂಘ ಹಾಗೂ ಇನ್ನಿತರ ಸಂಘಟನೆಗಳ ಪದಾಧಿಕಾರಿಗಳು ಕಾವೇರಿ ನೀರಿನ ಕುರಿತ ತೀರ್ಪನ್ನು ಸ್ವಾಗತಿಸಿದರು.
ಸಂಭ್ರಮಾಚರಣೆ ಸಂದರ್ಭದಲ್ಲಿ ಕಾವೇರಿ ನಮ್ಮದು ಎಂಬ ಘೋಷಣೆಗಳುನ್ನು ಕೂಗಿದ ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳು ಪರಸ್ಪರ ನೀರು ಕುಡಿದು ವಿಶೇಷ ರೀತಿಯಲ್ಲಿ ಸಂಭ್ರಮಾಚರಣೆ ಮಾಡಿದರು. ಸಾಹಿತಿ ಪ್ರೊ.ಕೆ.ಎಸ್.ಭಗವಾನ್, ಹಿಂದುಳಿದ ವರ್ಗಗಳ ಜಾಗೃತಿ ವೇದಿಕೆ ರಾಜಾಧ್ಯಕ್ಷ ಕೆ.ಎಸ್.ಶಿವರಾಮು, ಶಿವಶಂಕರ್, ಬೀರಪ್ಪ ಸೇರಿದಂತೆ ಇತರರು ಹಾಜರಿದ್ದರು.